Site icon Vistara News

ಪಾಕಿಸ್ತಾನದಲ್ಲಿ ಮತ್ತೊಬ್ಬ ಭಾರತ ವಿರೋಧಿ ಉಗ್ರ ಬಲಿ; ಬೀದಿ ನಾಯಿಯಂತೆ ನರಳಿ ಸತ್ತ ದುಷ್ಟ

Abdullah Shaheen

LeT's 'Jihadi Guru' Abdullah Shaheen killed in hit-and-run by 'unknown people' in Pakistan: Reports

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ ಇತ್ತೀಚೆಗೆ ಉಗ್ರರು ಹತ್ಯೆಗೀಡಾಗುತ್ತಿರುವ ಸುದ್ದಿಗಳು ಸಾಮಾನ್ಯವಾಗಿವೆ. ಅದರಲ್ಲೂ, ‘ಅಪರಿಚಿತರ’ ಗುಂಡಿನ ದಾಳಿಗೆ ಹತರಾಗುತ್ತಿರುವ ಉಗ್ರರ ಸಂಖ್ಯೆ ಜಾಸ್ತಿಯಾಗಿದೆ. ಜೈಶೆ ಮೊಹಮ್ಮದ್‌, ಲಷ್ಕರೆ ತಯ್ಬಾದಂತಹ ಸಂಘಟನೆಗಳ ಉಗ್ರರು ಬಲಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನದ (Pakistan) ಕಸುರ್‌ನಲ್ಲಿ (Kasur) ಲಷ್ಕರೆ ತಯ್ಬಾದ ಅಬ್ದುಲ್ಲಾ ಶಹೀನ್‌ (Abdullah Shaheen) ಎಂಬ ಉಗ್ರನು ಸಾವಿಗೀಡಾಗಿದ್ದಾನೆ. ‘ಅಪರಿಚಿತ’ ವಾಹನ ಡಿಕ್ಕಿಯಾಗಿ ಅಬ್ದುಲ್ಲಾ ಶಹೀನ್‌ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಭಾರತ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ, ಜಿಹಾದಿ ಗುರು ಎಂದೇ ಖ್ಯಾತಿಯಾಗಿದ್ದ ಲಷ್ಕರೆ ತಯ್ಬಾ ಉಗ್ರ ಅಬ್ದುಲ್ಲಾ ಶಹೀನ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಉಗ್ರನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪರಿಚಿತ ವಾಹನದಲ್ಲಿ ಒಂದಷ್ಟು ಜನ ತೆರಳುತ್ತಿದ್ದರು. ಆ ವಾಹನವು ಅಬ್ದುಲ್ಲಾ ಶಹೀನ್‌ಗೆ ಡಿಕ್ಕಿಯಾಗಿದೆ. ಪಂಜಾಬ್‌ ಪ್ರಾಂತ್ಯದ ಕಸುರ್‌ನಲ್ಲಿ ಈತನು ಬಲಿಯಾಗಿದ್ದಾನೆ. ಉದ್ದೇಶಪೂರ್ವಕವಾಗಿಯೇ ವಾಹನವನ್ನು ಗುದ್ದಿಸಲಾಗಿದೆಯೋ ಅಥವಾ ಆಕಸ್ಮಿಕವಾಗಿ ಅಪಘಾತವಾಗಿದೆಯೋ ಎಂಬುದರ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಜಿಹಾದಿ ಗುರು ಎಂದೇ ಖ್ಯಾತಿಯಾಗಿದ್ದ ಅಬ್ದುಲ್ಲಾ ಶಹೀನ್‌, ಲಷ್ಕರೆ ತಯ್ಬಾದ ಪ್ರಮುಖ ಉಗ್ರನಾಗಿದ್ದ ಎಂದು ತಿಳಿದುಬಂದಿದೆ. ಭಾರತ ವಿರೋಧಿ ಕೃತ್ಯಗಳಿಗೆ ಸಂಚು, ಪಂಜಾಬ್ ಪ್ರಾಂತ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಪಿತೂರಿ, ಶಸ್ತ್ರಾಸ್ತ್ರಗಳ ಸಾಗಣೆ, ಯುವಕರನ್ನು ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳುವುದು, ಯುವಕರ ತಲೆಯಲ್ಲಿ ಮೂಲಭೂತವಾದವನ್ನು ತುಂಬುವುದು ಸೇರಿ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ಸಾಲು ಸಾಲು ಉಗ್ರರ ಹತ್ಯೆ

ಭಯೋತ್ಪಾದಕರ ನೆಲೆವೀಡಾಗಿರುವ, ಜಗತ್ತಿಗೇ ಉಗ್ರರು ತಲೆನೋವಾಗಿರುವ ಹೊತ್ತಿನಲ್ಲಿ ಪಾಕಿಸ್ತಾನದಲ್ಲಿ ಸಾಲು ಸಾಲಾಗಿ ಉಗ್ರರು ಹತ್ಯೆಗೀಡಾಗುತ್ತಿದ್ದಾರೆ. ಕಳೆದ (ನವೆಂಬರ್)‌ ತಿಂಗಳಷ್ಟೇ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾದಲ್ಲಿ ಲಷ್ಕರೆ ತಯ್ಬಾ ಕಮಾಂಡರ್‌ ಅಕ್ರಮ್‌ ಘಾಜಿ, ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಮೌಲಾನಾ ರಹೀಮ್‌ ಉಲ್ಲಾ ತಾರಿಕ್‌ ಹತ್ಯೆಗೀಡಾಗಿದ್ದರು. ಅದರಲ್ಲೂ ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ, ಕೆನಡಾ ಸೇರಿ ಹಲವೆಡೆ 20 ಉಗ್ರರು ಬರೀ ‘ಅಪರಿಚಿತರ’ ಗುಂಡಿಗೆ ಬಲಿಯಾಗಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ ಲಷ್ಕರೆ ಜಬ್ಬರ್‌ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್‌ ಅಜರ್‌ ಆಪ್ತ ದಾವೂದ್‌ ಮಲಿಕ್‌ನನ್ನು ಹತ್ಯೆ ಮಾಡಲಾಗಿತ್ತು. ಪಾಕಿಸ್ತಾನದ ಉತ್ತರ ವಾಜಿರಿಸ್ತಾನ್‌ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ದಾವೂದ್‌ ಮಲಿಕ್‌ನನ್ನು ಹತ್ಯೆ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version