Site icon Vistara News

ವಿಸ್ತಾರ ಸಂಪಾದಕೀಯ | ಕರಾವಳಿಯಲ್ಲಿನ ಡ್ರಗ್ಸ್ ಜಾಲ ಮಟ್ಟ ಹಾಕಿ

Drug

ಕರ್ನಾಟಕದ ಕರಾವಳಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿದ್ದ ಮಾದಕ ದ್ರವ್ಯ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮಂಗಳೂರು, ಮಣಿಪಾಲದ ಮೆಡಿಕಲ್‌ ಕಾಲೇಜುಗಳಲ್ಲಿ ಪತ್ತೆಯಾದ ಡ್ರಗ್ಸ್‌ ದಂಧೆ ಇನ್ನಷ್ಟು ಕಾಲೇಜುಗಳಿಗೆ ವಿಸ್ತರಣೆಯಾಗಿರುವುದು ಬಯಲಿಗೆ ಬಂದಿದೆ. ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ವೈದ್ಯರು, ವೈದ್ಯಕೀಯ, ಎಂಡಿ ವಿದ್ಯಾರ್ಥಿಗಳಿರುವುದು, ಇವರೆಲ್ಲ ಪ್ರತಿಷ್ಠಿತ ಕಾಲೇಜುಗಳಲ್ಲಿ ತನ್ನ ಮಾಫಿಯಾವನ್ನು ಹರಡಿರುವುದು ತೀರಾ ಆತಂಕಕಾರಿ ಸಂಗತಿ.

ಈ ಡ್ರಗ್ಸ್‌ ಪೆಡ್ಲರ್‌ಗಳ ಜತೆಗೆ ವಿದ್ಯಾರ್ಥಿನಿಯರು ಸಂಬಂಧ ಹೊಂದಿರುವುದು, ಲಿವಿಂಗ್‌ ಟುಗೆದರ್‌ ವ್ಯಾಪಕವಾಗಿ ಹರಡಿರುವುದು ಮತ್ತು ಅದರಿಂದಲೇ ಮಾದಕ ದ್ರವ್ಯ ವ್ಯವಹಾರಕ್ಕೆ ಹೆಚ್ಚಿನ ಪೋಷಣೆ ಪಡೆದಿರುವುದು ಕೂಡ ಕಳವಳಕಾರಿ. ಇದನ್ನು ಮಟ್ಟ ಹಾಕುವುದರ ಜತೆಗೆ, ಬೇರು ಸಮೇತ ಕೀಳಬೇಕು ಎಂಬುದು ಕೂಡ ನಿಜ. ಈ ವಿಚಾರದಲ್ಲಿ ಪೊಲೀಸ್‌ ವ್ಯವಸ್ಥೆ ಕಠಿಣವಾಗಿ ವರ್ತಿಸಬೇಕಿದೆ.

ಕರಾವಳಿಯು ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಮೆಡಿಕಲ್ ಎಂಜಿನಿಯರಿಂಗ್‌ ಮಾತ್ರವಲ್ಲ, ಇತರ ಉನ್ನತ ಶಿಕ್ಷಣ ವಿದ್ಯಾಸಂಸ್ಥೆಗಳು ಕೂಡ ಇಲ್ಲಿವೆ. ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ದೇಶಾದ್ಯಂತದಿಂದ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಾರೆ. ಹೀಗೆ ಬಂದವರು ಅದು ಹೇಗೋ ಡ್ರಗ್ಸ್‌ ಜಾಲದಲ್ಲಿ ಸಿಲುಕಿಕೊಂಡು, ಅದರಿಂದ ಹೊರಬರಲಾಗದೆ ಚಟದ ದಾಸರಾಗಿ ಜೀವನ ವ್ಯರ್ಥಗೊಳಿಸಿಕೊಳ್ಳುತ್ತಾರೆ. ಪೋಷಕರ ಕಡೆಯಿಂದ ಬರುವ ನಿಯಂತ್ರಣ ಇಲ್ಲದ ಹಣವೂ ಈ ಬೆಳವಣಿಗೆಗೆ ಒಂದು ಕಾರಣ. ಹೆತ್ತವರಿಂದ ದೂರವಿದ್ದುಕೊಂಡು ಯಾರೂ ಕೇಳುವವರಿಲ್ಲ ಎಂಬ ಅನಾಮಿಕತೆಯೂ ಈ ಕೀಳು ವ್ಯಸನಕ್ಕೆ ಇಂಬು ಕೊಡುತ್ತದೆ. ಪ್ರಭಾವಿಗಳ ಮಕ್ಕಳಾಗಿದ್ದರಂತೂ ಕೇಳುವುದೇ ಬೇಡ. ಈ ವ್ಯವಹಾರದಲ್ಲಿ ಅನ್ಯರಾಜ್ಯಗಳಿಂದ ಬಂದ ವಿದ್ಯಾರ್ಥಿಗಳ ಪಾಲೆಷ್ಟು, ಸ್ಥಳೀಯರ ಪಾಲೆಷ್ಟು ಎಂಬುದೂ ಪತ್ತೆಯಾಗಬೇಕು. ಸ್ಥಳೀಯ ಮಾಫಿಯಾಗಳ ಪಾತ್ರವಿಲ್ಲದೆ ಈ ವ್ಯವಹಾರ ನಡೆಯಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಶೀಲಿಸಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕದೇ ಹೋದರೆ ಇಡೀ ಕರಾವಳಿಯ ಜನಜೀವನದ ಮೇಲೆ ಇದು ಭಾರಿ ದುಷ್ಪರಿಣಾಮ ಬೀರಲಿದೆ.

ಹಿಮಾಚಲದ ಪಾರ್ವತಿ ಕಣಿವೆ ಮುಂತಾದ ಕಡೆಗಳಿಂದ ಬೆಳೆದ ಗಾಂಜಾ ಇಲ್ಲಿಗೆ ಬರುತ್ತಿದೆ ಎಂಬ ಗುಮಾನಿ ಇದೆ. ಆದರೆ ಇದಕ್ಕೆ ಇರಬಹುದಾದ ಅಂತಾರಾಷ್ಟ್ರೀಯ ಆಯಾಮದ ದಿಕ್ಕಿನಲ್ಲಿ ಕೂಡ ತನಿಖೆ ನಡೆಯಬೇಕು. ಗಾಂಜಾ, ಅಫೀಮು ಮುಂತಾದ ಮಾದಕ ದ್ರವ್ಯಗಳ ವ್ಯವಹಾರವನ್ನೇ ತಮ್ಮ ಆರ್ಥಿಕತೆಯ ಬೆನ್ನೆಲುಬಾಗಿಸಿಕೊಂಡಿರುವ ಪಾಕಿಸ್ತಾನ, ಅಫಘಾನಿಸ್ತಾನ ಮುಂತಾದ ದೇಶಗಳು ನಮ್ಮ ಅಕ್ಕಪಕ್ಕದಲ್ಲೇ ಇವೆ. ಅಫಘಾನಿಸ್ತಾನವಂತೂ ಇತ್ತೀಚೆಗೆ ಡ್ರಗ್ಸ್‌ ಹಣದಿಂದಲೇ ಬದುಕಿಕೊಂಡಿದೆ. ಅದನ್ನು ಗಡಿಯಲ್ಲಿ ನುಸುಳಿಸಿ ಒಳಸೇರಿಸಲು ಪಾಕಿಸ್ತಾನ ಸದಾ ಹೊಂಚು ಹಾಕುತ್ತಿದೆ. ಇದರ ಪರಿಣಾಮವಾಗಿಯೇ ಪಂಜಾಬ್‌ ಎಂಬ ಪಂಚನದಿಗಳ ಸುಂದರ ಕೃಷಿ ರಾಜ್ಯ ಇಂದು ಭಾರತದ ʼಮಾದಕ ದ್ರವ್ಯ ರಾಜಧಾನಿʼ ಎನಿಸಿಕೊಂಡಿದೆ. ಅಲ್ಲಿನ ಎರಡು ತಲೆಮಾರುಗಳು ಡ್ರಗ್ಸ್‌ ಚಟದಿಂದ ಸರ್ವನಾಶವಾಗಿವೆ. ಅಲ್ಲಿಂದ ಅದು ಹರಿಯಾಣ, ದಿಲ್ಲಿಗೂ ಹಬ್ಬಿದೆ. ಇಡೀ ದೇಶವನ್ನು ಅಸ್ಥಿರಗೊಳಿಸಲು ಇಂಥ ಒಂದು ಮಾದಕ ದ್ರವ್ಯ ಜಾಲ ಸಾಕಾಗುತ್ತದೆ.

ಎನ್‌ಸಿಬಿ ಮುಂತಾದ ತನಿಖಾ ಸಂಸ್ಥೆಗಳು ಡ್ರಗ್ಸ್‌ ಮಾಫಿಯಾ ವಿರುದ್ಧ ಕಾರ್ಯಾಚರಿಸುತ್ತಿದ್ದು, ಈ ವರ್ಷದ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಮಾದಕ ದ್ರವ್ಯಗಳನ್ನು ಗುಜರಾತ್‌ ಕರಾವಳಿಯಲ್ಲಿ ಪತ್ತೆ ಮಾಡಲಾಗಿದೆ. ಇದು ಡ್ರಗ್ಸ್‌ ಮಾಫಿಯಾದ ದೊಡ್ಡ ಜಾಲವಾಗಿದೆ ಎಂಬುದು ಗೊತ್ತಾಗಿದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಹೆಚ್ಚು ದೂರವಿಲ್ಲ. ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ಕುರಿತ 2022ರ ವಾರ್ಷಿಕ ವರದಿ (UN Office on Drugs and Crime’s World Drug Report 2022) ತಿಳಿಸಿದ ಪ್ರಕಾರ, ಭಾರತ ಜಗತ್ತಿನ ಅತಿ ದೊಡ್ಡ ಅಫೀಮು ಮಾರುಕಟ್ಟೆ. ಪಂಜಾಬ್‌, ಹಿಮಾಚಲ ಪ್ರದೇಶ, ಗುಜರಾತ್‌ಗಳು ಕ್ರಮವಾಗಿ ಇದರ ಪೂರೈಕೆಯಲ್ಲಿ 1, 2, 3ನೇ ಸ್ಥಾನದಲ್ಲಿವೆ. ಇಲ್ಲಿನ ವಿದ್ಯಾರ್ಥಿಗಳು ಕರ್ನಾಟಕ ಕರಾವಳಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಇವರೆಲ್ಲಾ ಡ್ರಗ್ಸ್‌ ಕಳ್ಳಸಾಗಣೆಗೆ ಸಾಂಪ್ರದಾಯಿಕ ಮಾದರಿಗಳ ಜತೆಗೆ ಡಾರ್ಕ್‌ನೆಟ್‌ ಮುಂತಾದ ಅಧುನಿಕ ತಂತ್ರಜ್ಞಾನಗಳನ್ನೂ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ.

ಒಂದು ದೇಶದ ಯುವಜನತೆಯನ್ನು ಸರ್ವನಾಶ ಮಾಡುವುದಕ್ಕೆ ಮದ್ದುಗುಂಡುಗಳು ಬೇಕಾಗಿಲ್ಲ; ಅವರಿಗೆ ಮಾದಕ ವಸ್ತುಗಳ ನಶೆ ಹತ್ತಿಸಿದರೆ ಸಾಕು ಎಂದು ಸ್ವಾಮಿ ವಿವೇಕಾನಂದರು ಹಿಂದೆಯೇ ಹೇಳಿದ್ದರು. ಇದು ಮೆಕ್ಸಿಕೋ, ಕೊಲಂಬಿಯಾ ಮುಂತಾದ ಲ್ಯಾಟಿನ್‌ ಅಮೆರಿಕನ್‌ ದೇಶಗಳಲ್ಲಿ ಅಕ್ಷರಶಃ ನಡೆದಿರುವುದನ್ನು ನಾವು ಕಾಣಬಹುದು. ಅಲ್ಲಿನ ಯುವಜನತೆ ಗೊತ್ತು ಗುರಿ ಎಲ್ಲವನ್ನೂ ಕಳೆದುಕೊಂಡು, ಇಡೀ ಜಗತ್ತಿಗೆ ಡ್ರಗ್ಸ್‌ ತಲುಪಿಸುವುದು ಹಾಗೂ ತಾನೂ ಸೇವಿಸಿ ಹಾಳಾಗುವುದರಲ್ಲಿ ನಿರತವಾಗಿದೆ. ದಕ್ಷಿಣ ಆಫ್ರಿಕದ ಕೆಲ ದೇಶಗಳೂ ಅದೇ ಹಾದಿಯಲ್ಲಿವೆ. ಜಗತ್ತಿನ ಶೇ.80ರಷ್ಟು ಡ್ರಗ್ಸ್‌ ಈ ಕೆಲವೇ ದೇಶಗಳಿಂದ ಬರುತ್ತಿದೆ. ಕೆಲವೇ ದಶಕಗಳ ಹಿಂದೆ ಇವು ಹೀಗಿರಲಿಲ್ಲ. ಇಲ್ಲಿಗೆ ಬಂದ ವಸಾಹತುಶಾಹಿ ಶಕ್ತಿಗಳು ಮಾದಕ ದ್ರವ್ಯದ ರುಚಿ ಹತ್ತಿಸಿದವು. ಕಾಲಾನುಕ್ರಮದಲ್ಲಿ ಅವು ಹೀಗಾಗಿವೆ. ಅಂದರೆ ಒಂದು ದೇಶ ಡ್ರಗ್ಸ್‌ನಿಂದ ಹಾಳಾಗುವುದಕ್ಕೆ ತುಂಬಾ ವರ್ಷಗಳೇನೂ ಬೇಡ. ಡ್ರಗ್ಸ್‌ ಜತೆಗೆ ಭಯೋತ್ಪಾದನೆ ಮುಂತಾದ ಇತರ ವಿಕಾರಗಳೂ ಕೂಡ ಒಳನುಸುಳುತ್ತವೆ.

ಇದನ್ನು ಅರ್ಥಮಾಡಿಕೊಂಡು, ಮಾದಕ ಜಾಲದ ಹಿಂದೆ ಯಾರೇ ಇದ್ದರೂ ಅವರನ್ನು ಮಟ್ಟಹಾಕಬೇಕಿದೆ. ಯಾವುದೇ ಪ್ರಭಾವಿಗಳ ಒತ್ತಡಕ್ಕೂ ಮಣಿಯದೆ ಮಾಫಿಯಾವನ್ನು ತಡೆಗಟ್ಟಬೇಕು. ಕರಾವಳಿಯನ್ನು, ಆ ಮೂಲಕ ಕರ್ನಾಟಕವನ್ನು ರಕ್ಷಿಸಬೇಕಿದೆ. ಈ ವಿಚಾರದಲ್ಲಿ ಸರ್ಕಾರ ಮತ್ತು ಪ್ರಜ್ಞಾವಂತ ಜನತೆ ಒಟ್ಟುಗೂಡಬೇಕು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ನಕ್ಸಲ್ ಮುಕ್ತ ಭಾರತ ಸನ್ನಿಹಿತ

Exit mobile version