Site icon Vistara News

Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

Lok sabha election 2024

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಒಟ್ಟು 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಹಬ್ಬ (Voting) ರಂಗೇರಿದೆ. ಎರಡನೇ ಹಂತದಲ್ಲಿ ಒಟ್ಟು 88 ಲೋಕಸಭಾ ಕ್ಷೇತ್ರಗಳಲ್ಲಿ (Lok sabha election 2024) ಇಂದು ಮತದಾನಕ್ಕೆ ಮತದಾರ ಸಜ್ಜಾಗಿದ್ದು, ಕೇರಳ (Kerala) ದ ಎಲ್ಲಾ 20 ಕ್ಷೇತ್ರಗಳು, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ 8 ಕ್ಷೇತ್ರಗಳು, ಅಸ್ಸಾಂ ಮತ್ತು ಬಿಹಾರಗಳ 5 ಕ್ಷೇತ್ರಗಳು, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದ 2, ಜಮ್ಮು-ಕಾಶ್ಮೀರ, ಮಣಿಪುರ, ತ್ರಿಪುರಗಳಲ್ಲಿ ತಲಾ 1 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 89 ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿತ್ತು. ಆದರೆ ಮಧ್ಯಪ್ರದೇಶದ ಬೇಟುಲ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಹುಜನ ಸಮಾವಾದಿ ಪಕ್ಷದ ಅಭ್ಯರ್ಥಿ ನಿಧನದಿಂದಾಗಿ ಮತದಾನ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಈ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಇಂದು 88 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಹೈವೋಲ್ಟೇಜ್‌ ಕ್ಷೇತ್ರಗಳು ಯಾವ್ಯಾವು ?

ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಪ್ರಮುಖ ನಾಯಕರು ಸ್ಪರ್ಧಿಸುತ್ತಿರುವ ಹೈ ವೋಲ್ಟೇಜ್‌ (High Profile names) ಕ್ಷೇತ್ರಗಳ ಮೇಲೆ ಎಲ್ಲ ಕಣ್ಣು ನೆಟ್ಟಿದೆ.ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಸ್ಪರ್ಧಿಸುತ್ತಿರುವ ಕೇರಳದ ವಯನಾಡು, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ (Rajiv Chandrshekar) ಮತ್ತು ಕಾಂಗ್ರೆಸ್‌ನ ಶಶಿ ತರೂರು (Shashi Tharoor) ಮುಖಾಮುಖಿಯಾಗಿ ಸ್ಪರ್ಧಿಸಿರುವ ತಿರುವನಂತಪುರಂನಲ್ಲಿ ಇಂದು ಮತದಾನ ನಡೆಯುತ್ತಿದೆ. ಅಷ್ಟೇ ಅಲ್ಲದೇ ನಟಿ ಹೇಮಾ ಮಾಲಿನಿ, ರಾಮಾಯಣ ಧಾರಾವಾಹಿ ಖ್ಯಾತಿಯ ಅರುಣ್‌ ಗೋವಿಲ್‌, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಕೆ.ಸಿ.ವೇಣುಗೋಪಾಲ್‌, ಭೂಪೇಶ್‌ ಭಗೇಲ್‌ ಮ್ತು ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ಕಣದಲ್ಲಿರುವ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ರಂಗೇರಿದೆ.

ಇದನ್ನೂ ಓದಿ: Loka sabha election-2024: ಮೋದಿ ಗೆದ್ದಿದ್ದ ವಡೋದರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ!

ಎರಡನೇ ಹಂತದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅತ್ಯಂತ ಚಾಲೆಂಜಿಂಗ್‌ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ ಅತೀ ಹೆಚ್ಚು ಸೀಟು ಪಡೆದು ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ ಹವಣಿಸುತ್ತಿದ್ದರೆ, ಅತ್ತ ಕೇರಳದಲ್ಲಿ ಬಿಜೆಪಿಯೂ ಅದೇ ಕಸರತ್ತಿನಲ್ಲಿ ತೊಡಗಿದೆ. ಕೇರಳದಲ್ಲಿ ಗೆಲುವಿನ ಖಾತೆ ತೆರೆಯಲೇಬೇಕೆಂಬ ಗುರಿಯೊಂದಿಗೆ ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಮತ್ತು ವಿ. ಮುರಳೀಧರನ್‌ರನ್ನು ಕಣಕ್ಕಿಳಿಸಿದೆ. ಇನ್ನು ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ ಭದ್ರಕೋಟೆಯಂತಿರುವ ವಯನಾಡು ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ. ಸುರೇಂದ್ರನ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.


Exit mobile version