Site icon Vistara News

Uttar Pradesh: ಉತ್ತರ ಪ್ರದೇಶದಲ್ಲಿ ಲೋಕಸಭೆ ಸಮರ; ನೀವು ತಿಳಿಯಲೇಬೇಕಾದ 5 ಕುತೂಹಲಕರ ಅಂಶಗಳು ಇಲ್ಲಿವೆ

Lok Sabha Election Result 2024

Lok Sabha Election Result 2024 Tomorrow: Who Will Be The Next Prime Minister Of India?

ಲಖನೌ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಅದರಲ್ಲೂ, ದೇಶದ ಗಮನವೀಗ ಉತ್ತರ ಪ್ರದೇಶದ (Uttar Pradesh) ರಾಜಕೀಯ ಸ್ಥಿತಿಗತಿಗಳ ಮೇಲೆ ನಿಂತಿದೆ. ಮೊದಲಿನಿಂದಲೂ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಪಕ್ಷವು ಕೇಂದ್ರದಲ್ಲಿ ಅಧಿಕಾರ ಗಳಿಸುತ್ತದೆ ಎಂಬ ಮಾತಿದೆ. ಅದು ಬಹುತೇಕ ಚುನಾವಣೆಗಳಲ್ಲಿ ನಿಜವೂ ಆಗಿದೆ. ಉತ್ತರ ಪ್ರದೇಶದಲ್ಲಿ 80 ಲೋಕಸಭೆ ಕ್ಷೇತ್ರಗಳು ಇರುವುದೇ ಇದಕ್ಕೆ ಕಾರಣವಾಗಿದ್ದು, ಈ ಬಾರಿಯೂ ಕದನ ಕುತೂಹಲ ಮೂಡಿದೆ. ಹಾಗಾದರೆ, ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಸಮರ ಹೇಗೆ ನಡೆಯುತ್ತಿದೆ? ಯಾವ ಪಕ್ಷಕ್ಕೆ ಗೆಲುವಾಗಬಹುದು? ಯಾವ ಪಕ್ಷಗಳ ರಾಜಕೀಯ ತಂತ್ರಗಾರಿಕೆ ಹೇಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ರಾಮಮಂದಿರ ವಿಷಯ ಪ್ರಧಾನ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿರುವುದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಅಸ್ತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ ಅವರು ಅಬ್ಬರದ ಪ್ರಚಾರದ ವೇಳೆ ರಾಮಮಂದಿರ ನಿರ್ಮಾಣ, ಅದು ಹೇಗೆ ಉತ್ತರ ಪ್ರದೇಶದ ಅಸ್ಮಿತೆ ಎಂಬುದರ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಇದರಿಂದಾಗಿ, ಪ್ರತಿಪಕ್ಷಗಳೂ ರಾಮನ ಜಪ ಮಾಡುವಂತಾಗಿದೆ. ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆಗೆ ಮೊದಲು ನರೇಂದ್ರ ಮೋದಿ ಅವರು ರಾಮಮಂದಿರಕ್ಕೆ ಭೇಟಿ ನೀಡಿರುವುದೂ ಪ್ರಮುಖ ಅಂಶವಾಗಿದೆ. ಅಷ್ಟರಮಟ್ಟಿಗೆ, ಉತ್ತರ ಪ್ರದೇಶದಲ್ಲಿ ರಾಮಮಂದಿರವು ಲೋಕಸಭೆ ಚುನಾವಣೆಯ ಪ್ರಬಲ ವಿಷಯವಾಗಿದೆ.

Yogi Adityanath

ಕಾಂಗ್ರೆಸ್‌-ಎಸ್‌ಪಿ ಮೈತ್ರಿಯ ರಣತಂತ್ರವೇನು?

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳೂ ಆದ ಬಿಜೆಪಿ ಹಾಗೂ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿದ್ದು, ಸೀಟುಗಳನ್ನು ಹಂಚಿಕೊಂಡು ಚುನಾವಣೆ ಕಣಕ್ಕಿಳಿದಿವೆ. 2019ರಲ್ಲಿ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು, ಎಡವಿದ ಸಮಾಜವಾದಿ ಪಕ್ಷವು ಈ ಬಾರಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿದೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಶೇ.3ರಷ್ಟು ಮತ ಪಡೆದರೂ ಕಾಂಗ್ರೆಸ್‌ ಉತ್ಸಾಹದಿಂದ ಪ್ರಚಾರ ಕೈಗೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿ ಶೇ.20ರಷ್ಟು ಮುಸ್ಲಿಮರ ಮತಗಳಿದ್ದು, ಇವುಗಳನ್ನು ಪಡೆಯಲು ಸಮಾಜವಾದಿ ಪಕ್ಷವು ರಣತಂತ್ರ ರೂಪಿಸುತ್ತಿದೆ. ಕಾಂಗ್ರೆಸ್‌ ಹಾಗೂ ಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಗಳು, ನಾಯಕರು ಜತೆಗೂಡಿ ದಲಿತರು, ಮುಸ್ಲಿಮರು ಹಾಗೂ ಹಿಂದುಳಿದವರ ಮತಗಳನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಇದು ಚುನಾವಣೆಯಲ್ಲಿ ಹೇಗೆ ಫಲ ನೀಡಲಿದೆ ಎಂಬುದು ಫಲಿತಾಂಶದ ಬಳಿಕವೇ ಗೊತ್ತಾಗಲಿದೆ.

Yogi Adityanath

ಮಾಯಾವತಿ ಮಾಡುವರೇ ಕಮಾಲ್?‌

ಬಹುಜನ ಸಮಾಜ ಪಕ್ಷದ ಮಾಯಾವತಿ ಅವರು ಒಂದು ಕಾಲದಲ್ಲಿ ಇಡೀ ರಾಜ್ಯಾದ್ಯಂತ ಪ್ರಾಬಲ್ಯ ಹೊಂದಿದ್ದರು. ಆದರೀಗ, ಅವರ ವರ್ಚಸ್ಸು, ಪಕ್ಷದ ಹಿಡಿತ ಸಡಿಲವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಶೇ.19.70ರಷ್ಟು ಮತಗಳನ್ನು ಪಡೆದರೂ ಬಿಎಸ್‌ಪಿ ಒಂದೇ ಒಂದು ಸೀಟು ಗೆದ್ದಿರಲಿಲ್ಲ. ಇನ್ನು, 2019ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದರೂ 10 ಸೀಟುಗಳು ಮಾತ್ರ ಲಭಿಸಿದ್ದವು. ಇನ್ನು 2022ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಮತ ಪ್ರಮಾಣವು ಶೇ.12.8ಕ್ಕೆ ಕುಸಿದಿದೆ. ಮುಸ್ಲಿಮರ ಮತಗಳು ಎಂದೋ ಬಿಎಸ್‌ಪಿಯಿಂದ ದೂರಾಗಿವೆ. ಈಗೇನಿದ್ದರೂ ದಲಿತರು, ಹಿಂದುಳಿದವರ ಮತಗಳೇ ಬಿಎಸ್‌ಪಿಯ ಆಧಾರವಾಗಿವೆ. ಇಷ್ಟಾದರೂ, ಟಕ್ಕರ್‌ ಕೊಡಲು ಮಾಯಾವತಿ ರೆಡಿಯಾಗಿದ್ದಾರೆ.

Yogi Adityanath

ಯೋಗಿ ಎಂಬ ಬಲಿಷ್ಠ ನಾಯಕ

ಫೈರ್‌ಬ್ರ್ಯಾಂಡ್‌ ನಾಯಕ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದೇಶದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ನಂತರ ಬಿಜೆಪಿಯಲ್ಲಿ ಹೆಚ್ಚು ವರ್ಚಸ್ಸು ಇರುವ ನಾಯಕರಾಗಿದ್ದಾರೆ. ಹಾಗಾಗಿಯೇ, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 109 ರ‍್ಯಾಲಿ ಸೇರಿ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಾಖಂಡ ಹಾಗೂ ಜಮ್ಮು-ಕಾಶ್ಮೀರದಲ್ಲಿ ಒಟ್ಟು 135 ಚುನಾವಣೆ ಸಮಾವೇಶಗಳನ್ನು ಕೈಗೊಂಡಿದ್ದಾರೆ. ಅದರಲ್ಲೂ, 2017ರಿಂದಲೂ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್‌ ಅವರು ರಾಜ್ಯದಲ್ಲಿ ಅಪರಾಧವನ್ನು ನಿಯಂತ್ರಿಸುವ ಜತೆಗೆ ಅಭಿವೃದ್ಧಿಗೂ ಆದ್ಯತೆ ನೀಡಿ ವರ್ಚಸ್ವಿ ನಾಯಕ ಎನಿಸಿದ್ದಾರೆ. ರಾಜ್ಯದಲ್ಲಿ ಇವರ ನಾಯಕತ್ವವೂ ಬಿಜೆಪಿಗೆ ವರದಾನವಾಗಿದೆ.

Yogi Adityanath

ಜಾತಿ ರಾಜಕಾರಣದ ಸಮೀಕರಣ

ಉತ್ತರ ಪ್ರದೇಶದಲ್ಲಿ ದಶಕಗಳಿಂದಲೂ ಚುನಾವಣೆಗಳಲ್ಲಿ ಜಾತಿವಾರು ಮತಗಳ ಸಮೀಕರಣವೇ ನಿರ್ಣಾಯಕವಾಗಿದೆ. 1990ರಿಂದ 2012ರವರೆಗೆ ಉತ್ತರ ಪ್ರದೇಶದಲ್ಲಿ ದಲಿತರು ಹಾಗೂ ಒಬಿಸಿ ಮತಗಳು ಬಿಜೆಪಿಯಿಂದ ದೂರವೇ ಇದ್ದವು. ಆದರೆ, 2014ರಿಂದ ರಾಜ್ಯದಲ್ಲಿ ಜಾಟವರ ಹೊರತಾದ ದಲಿತರು, ಯಾದವರ ಹೊರತಾದ ಒಬಿಸಿಯವರು ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಬಲ ತುಂಬುತ್ತಿದ್ದಾರೆ. ಮೇಲ್ವರ್ಗದವರ ಮತಗಳು ಬಿಜೆಪಿಗೆ ಸಲೀಸಾಗಿ ಲಭಿಸಲಿವೆ. ಆದರೆ, ಜಾತಿ ಗಣತಿ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ, ಮೀಸಲಾತಿಯನ್ನು ಕಿತ್ತೊಗೆಯುತ್ತದೆ ಎಂದು ಪ್ರತಿಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಿದ್ದು, ಈ ಅಂಶಗಳು ಯಾವ ರೀತಿಯ ಪರಿಣಾಮ ಬೀರಲಿವೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: Narendra Modi: ನೆಹರು-ಗಾಂಧಿ ಕುಟುಂಬಸ್ಥರಿಂದ ಸಂವಿಧಾನಕ್ಕೆ ಧಕ್ಕೆ; ಪ್ರಧಾನಿ ಮೋದಿ ವಾಗ್ದಾಳಿ

Exit mobile version