Site icon Vistara News

Lok Sabha Election: ಮಹಾರಾಷ್ಟ್ರ ವಿಪಕ್ಷ ​ಮೈತ್ರಿಯಲ್ಲಿ ಒಪ್ಪಂದ ಪೂರ್ಣ; ಯಾರಿಗೆ ಎಷ್ಟು ಸೀಟು?

Maha Vikas Aghadi

Maha Vikas Aghadi

ಮುಂಬೈ: ಮಹಾರಾಷ್ಟ್ರದ ವಿಪಕ್ಷ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (Maha Vikas Aghadi) 2024ರ ಲೋಕಸಭೆ ಚುನಾವಣೆ (Lok Sabha Election)ಗೆ ಸೀಟು ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 48 ಗಂಟೆಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ ಬಣ ರಾಜ್ಯದ 48 ಲೋಕಸಭಾ ಸ್ಥಾನಗಳ ಪೈಕಿ 20ರಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ 18ರಲ್ಲಿ ಕಣಕ್ಕಿಳಿಯಿದೆ. ಇನ್ನುಳಿದ 10 ಸ್ಥಾನಗಳಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಹಿಂದೆ ಐದು ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದ ಪ್ರಾದೇಶಿಕ ಪಕ್ಷವಾದ ವಂಚಿತ್ ಬಹುಜನ್ ಅಘಾಡಿ (Vanchit Bahujan Aghadi) ಶಿವಸೇನೆಯ (ಯುಬಿಟಿ)ಯಿಂದ ಎರಡು ಸ್ಥಾನಗಳನ್ನು ಪಡೆಯಲಿದೆ.

ಇನ್ನು ಶಿವಸೇನೆ (ಯುಬಿಟಿ) ಮುಂಬೈಯ ಆರು ಲೋಕಸಭಾ ಸ್ಥಾನಗಳ ಪೈಕಿ ನಾಲ್ಕರಲ್ಲಿ ಸ್ಪರ್ಧಿಸಲಿದ್ದು, ಅವುಗಳಲ್ಲಿ ಒಂದು (ಮುಂಬೈ ಈಶಾನ್ಯ) ಸ್ಥಾನವನ್ನು ವಂಚಿತ್ ಬಹುಜನ್ ಅಘಾಡಿಗೆ ನೀಡುವ ಸಾಧ್ಯತೆ ಇದೆ. ಮುಂಬೈಯ ದಕ್ಷಿಣ ಮಧ್ಯ ಮತ್ತು ವಾಯುವ್ಯಗಳ 39 ಸ್ಥಾನಗಳಿಗೆ ಸಂಬಂಧಿಸಿ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್‌ ನಡುವೆ ಕಂಡು ಬಂದಿದ್ದ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಪರಿಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಯಾವ ರೀತಿ ಗೊಂದಲ ಬಗೆಹರಿದಿದೆ ಎನ್ನುವುದು ಸ್ಪಷ್ಟವಾಗಿಲ್ಲ.

2019ರ ಚಿತ್ರಣ

2019ರ ಚುನಾವಣೆಯಲ್ಲಿ ಆಗಿನ ಅವಿಭಜಿತ ಶಿವಸೇನೆ (ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು) 23 ಸ್ಥಾನಗಳಲ್ಲಿ ಸ್ಪರ್ಧಿಸಿ ಮುಂಬೈ ದಕ್ಷಿಣ, ಮಧ್ಯ ಮತ್ತು ವಾಯುವ್ಯ ಸೇರಿದಂತೆ 18 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 25 ಸ್ಥಾನಗಳಲ್ಲಿ ಸ್ಪರ್ಧಿಸಿ 1 ಸ್ಥಾನವನ್ನು (ಚಂದ್ರಾಪುರ) ಮಾತ್ರ ಗೆದ್ದರೆ, ಶರದ್ ಪವಾರ್ ಅವರ ಎನ್‌ಸಿಪಿ (ಆಗ ಅವಿಭಜಿತ) 19 ಸ್ಥಾನಗಳಲ್ಲಿ ಸ್ಪರ್ಧಿಸಿ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆಧಿಪತ್ಯ ಸ್ಥಾಪಿಸಿದ್ದ ಬಿಜೆಪಿ 25 ಸ್ಥಾನಗಳಲ್ಲಿ 23 ಸ್ಥಾನಗಳನ್ನು ಗೆದ್ದು ಬೀಗಿತ್ತು. ಈ ಬಾರಿ ಚುನಾವಣಾ ಕಣ ಭಿನ್ನವಾಗಿದ್ದು, ಬಿಜೆಪಿಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಶಿವಸೇನೆ ಮತ್ತು ಎನ್‌ಸಿಪಿಯ ಬಂಡಾಯ ಬಣಗಳು ಬೆಂಬಲ ನೀಡಲಿವೆ.

ಇದನ್ನೂ ಓದಿ: Lok Sabha Election : ಬಿಜೆಪಿಯಿಂದ ಮಧ್ಯರಾತ್ರಿ ಸಭೆ; 100 ಅಭ್ಯರ್ಥಿಗಳ ಪಟ್ಟಿ ಫೈನಲ್​

ಠಾಕ್ರೆ, ಪವಾರ್‌ ಜತೆ ರಾಹುಲ್‌ ಗಾಂಧಿ ಮಾತುಕತೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶಿವಸೇನೆ (ಯುಬಿಟಿ)ಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತು ಶರದ್ ಪವಾರ್ ಬಣದ ‘ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ– ಶರದ್ ಚಂದ್ರ ಪವಾರ್’ ಜತೆ ಮಾತುಕತೆ ನಡೆಸಿ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟಕ್ಕೆ ಈ ಒಪ್ಪಂದವು ಮಹತ್ವದ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಶತಾಯ ಗತಾಯ ಸೋಲಿಸುವ ಉದ್ದೇಶದಿಂದ ಕಳೆದ ವರ್ಷ ಜೂನ್‌ನಲ್ಲಿ ʼಇಂಡಿಯಾʼ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version