Site icon Vistara News

Lok Sabha Speaker Election: ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ನಡೆಯಲಿದೆ ಚುನಾವಣೆ

Lok Sabha Speaker Election

Lok Sabha Speaker Election

ನವದೆಹಲಿ: ಇದೀಗ ಲೋಕಸಭಾ ಸ್ಪೀಕರ್‌ ಹುದ್ದೆಯ ನೇಮಕಕ್ಕೆ ಕಸರತ್ತು ಆರಂಭವಾಗಿದೆ. ಆಡಳಿತಾರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಲೋಕಸಭೆ ಇತಿಹಾಸದಲ್ಲೇ ಮೊದಲ ಬಾರಿ ಸ್ಪೀಕರ್‌ ಹುದ್ದೆಗೆ ಚುನಾವಣೆ ನಡೆಯಲಿದೆ (Lok Sabha Speaker Election). ಎನ್‌ಡಿಎಯಿಂದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಮಂಗಳವಾರ ಲೋಕಸಭಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ಈ ಪೈಕಿ ಓಂ ಬಿರ್ಲಾ ಏಳು ಬಾರಿ ಮತ್ತು ಕೊಂಡಿಕುನಾಲ್ ಸುರೇಶ್ ಎಂಟು ಬಾರಿ ಸಂಸದರಾಗಿದ್ದಾರೆ. ನಾಳೆ (ಜೂನ್‌ 26) ಸ್ಪೀಕರ್ ಆಯ್ಕೆ ನಡೆಯಲಿದೆ.

ಸ್ಪೀಕರ್ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಓಂ ಬಿರ್ಲಾ ಅವರ ಹೆಸರನ್ನು ಬಿಜೆಪಿ ಅಂತಿಮಗೊಳಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಓಂ ಬಿರ್ಲಾ ನಡುವೆ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಗೃಹ ಸಚಿವ ಅಮಿತ್ ಶಾ, ರಾಜನಾಥ್‌ ಸಿಂಗ್‌ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಕೂಡ ಉಪಸ್ಥಿತರಿದ್ದರು.

ಇಂಡಿ ಒಕ್ಕೂಟ ಹೇಳಿದ್ದೇನು?

ಇದಕ್ಕೂ ಮೊದಲು ಸ್ಪೀಕರ್‌ ಹುದ್ದೆಗೆ ಓಂ ಬಿರ್ಲಾ ಅವರನ್ನು ಬೆಂಬಲಿಸುವುದಕ್ಕೆ ಇಂಡಿ ಒಕ್ಕೂಟ ಷರತ್ತು ವಿಧಿಸಿತ್ತು. ಉಪ ಸಭಾಪತಿ (Deputy Speaker) ಹುದ್ದೆ ಇಂಡಿ ಬಣಕ್ಕೆ ನೀಡಿದರೆ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಪ್ರತಿಪಕ್ಷಗಳು ಒಪ್ಪಿಕೊಂಡಿದ್ದವು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಚುನಾವಣೆ ಅನಿವಾರ್ಯವಾದಂತಾಗಿದೆ.

ಆರಂಭದಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರು ಸ್ಪೀಕರ್‌ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ನೇಮಕ ಮಾಡುವ ಕುರಿತು ಪ್ರತಿಪಕ್ಷಗಳನ್ನು ಸಂಪರ್ಕಿಸಿದ್ದರು. ಆದರೆ ನಾಮಪತ್ರ ಸಲ್ಲಿಕೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್, ಡಿಎಂಕೆಯ ಟಿ.ಆರ್.ಬಾಲು ಅವರು ರಾಜನಾಥ್ ಸಿಂಗ್ ಅವರ ಕಚೇರಿಯಿಂದ ಹೊರನಡೆದು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಲು ನಿರಾಕರಿಸಿದರು. ಬಳಿಕ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಉಪ ಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಕೊಂಡಿಕುನಾಲ್ ಸುರೇಶ್ ಅವರನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು.

ಸರ್ಕಾರ ಮತ್ತು ದೇಶವನ್ನು ನಡೆಸಲು ಒಗ್ಗಟ್ಟಿನ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ ಒಂದು ದಿನದ ಒಳಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಕಂಡು ಬಂದಿದೆ. ಸೋಮವಾರ 18ನೇ ಲೋಕಸಭಾ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್​ನಲ್ಲಿ ಮೋದಿ ಮಾತನಾಡಿ, ʼʼಭಾರತದ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ಪ್ರತಿಪಕ್ಷಗಳು ಕೂಡ ನಮ್ಮೊಂದಿಗೆ ನಿಲ್ಲುವ ವಿಶ್ವಾಸವಿದೆʼʼ ಎಂದು ಹೇಳಿದ್ದರು. ಸದ್ಯ ಬಿಜೆಪಿಯ ಸಂಸದ ಭರ್ತೃಹರಿ ಮಹತಾಬ್ ಹಂಗಾಮಿ ಸ್ಪೀಕರ್ ಆಗಿದ್ದಾರೆ. ಇದಕ್ಕೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಂಗ್ರೆಸ್​ 8 ಬಾರಿ ಸಂಸದರಾಗಿರುವ ಕೆ.ಸುರೇಶ್​ ಅವರನ್ನು ಹಂಗಾಮಿ ಸ್ಪೀಕರ್ ಮಾಡಬೇಕೆಂಬ ಬೇಡಿಕೆ ಇಟ್ಟಿತ್ತು.

ಇದನ್ನೂ ಓದಿ: Parliament Session 2024: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

Exit mobile version