Site icon Vistara News

Lok Sabha Speaker Election: ಲೋಕಸಭೆ ಸ್ಪೀಕರ್ ಚುನಾವಣೆ ಇಂದು; ಆಡಳಿತ ಪಕ್ಷ-ಪ್ರತಿಪಕ್ಷ ಬಲಾಬಲ ಹೀಗಿದೆ

Lok Sabha Speaker Election

Lok Sabha Speaker Election

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ 3.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕದ ಮೊದಲ ಅಧಿವೇಶನ (Parliament Session 2024) ಆರಂಭವಾಗಲಿದೆ. ಈಗಾಗಲೇ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಲೋಕಸಭಾ ಸ್ಪೀಕರ್‌ ಆಯ್ಕೆಗೆ ಚುನಾವಣೆ ನಡೆಯಲಿದೆ (Lok Sabha Speaker Election). ಎನ್‌ಡಿಎಯಿಂದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಮತ್ತು ಪ್ರತಿಪಕ್ಷಗಳ ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಮಂಗಳವಾರ ಲೋಕಸಭಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಬಲಾಬಲ ಹೀಗಿದೆ

ಲೋಕಸಭೆಯಲ್ಲಿ ಬಿಜೆಪಿ ಈಗಾಗಲೇ ತನ್ನದೇ ಸಂಸದರಿಂದ 240 ಮತಗಳನ್ನು ಮತ್ತು ಎನ್‌ಡಿಎ ಪಾಲುದಾರ ಪಕ್ಷಗಳಿಂದ 63 ಮತಗಳನ್ನು ಹೊಂದಿದೆ. ಇದರಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿಯ 16 ಸಂಸದರು ಮತ್ತು ಪವನ್ ಕಲ್ಯಾಣ್‌ ಅವರ ಜನಸೇನಾ ಪಕ್ಷದ 2 ಸಂಸದರು ಸೇರಿಕೊಂಡಿದ್ದಾರೆ. ಒಟ್ಟು 293 ಸಂಖ್ಯಾಬಲವಿದೆ. ಹೆಚ್ಚುವರಿಯಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಬಿಜೆಪಿ ಅಭ್ಯರ್ಥಿ ಓಂ ಬಿರ್ಲಾ ಅವರನ್ನು ಬೆಂಬಲಿಸಲಿದೆ ಎನ್ನಲಾಗಿದ್ದು, ಅವರ 4 ಸಂಸದರ ಬಲ ಸೇರಿಸಿದರೆ ಎನ್‌ಡಿಎಗೆ ಒಟ್ಟು 297 ಮತ ದೊರೆಯಲಿದೆ. ಸ್ಥಳೀಯವಾಗಿ ವಿರೋಧ ಇರುವ ಹೊರತಾಗಿಯೂ ಬಿರ್ಲಾ ಅವರನ್ನು ಬೆಂಬಲಿಸಲು ವೈಎಸ್​ಆರ್​ ನಿರ್ಧರಿಸಿದೆ.

ಇನ್ನು ಪ್ರತಿಪಕ್ಷಗಳ ಇಂಡಿ ಬಣ ಲೋಕಸಭೆಯಲ್ಲಿ 232 ಸಂಸದರನ್ನು ಹೊಂದಿದೆ. ಈ ಪೈಕಿ 7 ಸಂಸದರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಹೀಗಾಗಿ ಅವರಿಗೆ ವೋಟಿಂಗ್‌ ಮಾಡುವ ಅಧಿಕಾರವಿಲ್ಲ. ಇದರಲ್ಲಿ ಕಾಂಗ್ರೆಸ್‌ ಐವರು ಮತ್ತು ತೃಣಮೂಲ ಕಾಂಗ್ರೆಸ್‌ ಇಬ್ಬರು ಸೇರಿದ್ದಾರೆ. ಜತೆಗೆ ಕೆಲವು ಸ್ವತಂತ್ರ ಅಭ್ಯರ್ಥಿಗಳೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಈ ಕೆಲವು ನಾಯಕರ ಪ್ರಮಾಣ ವಚನ ಸ್ವೀಕಾರ ಏಕೆ ಬಾಕಿ ಉಳಿದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅರ್ಹತೆ ಹೊಂದಿರುವ ಸಂಸದರ ಸಂಖ್ಯೆಯನ್ನು ಆಧರಿಸಿ ವೋಟಿಂಗ್‌ ನಡೆಯಲಿದೆ. ಹೀಗಾಗಿ ಬಹುಮತಕ್ಕೆ 269 ಮತಗಳ ಅಗತ್ಯವಿದೆ.

ಶಾಕ್‌ ಕೊಟ್ಟ ಟಿಎಂಸಿ

ಈ ನಡುವೆ ಇಂಡಿ ಬಣ ಅಭ್ಯರ್ಥಿಯಾಗಿ ಕೆ.ಸುರೇಶ್ ಅವರನ್ನು ಆಯ್ಕೆ ಮಾಡುವ ಮುನ್ನ ತಮ್ಮ ಬಳಿ ಸಮಾಲೋಚನೆಯನ್ನೇ ನಡೆಸಿಲ್ಲ ಎಂದು ಟಿಎಂಸಿ ಆರೋಪಿಸಿದೆ. ಕೆ. ಸುರೇಶ್ ಅವರನ್ನು ಇಂಡಿ ಬಣ ಜಂಟಿ ನಾಮನಿರ್ದೇಶಿತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರತಿಪಕ್ಷಗಳ ನಿರ್ಧಾರದ ಬಗ್ಗೆ ನಮ್ಮ ಪಕ್ಷದ ನಾಯಕರ ಬಳಿ ಸಮಾಲೋಚನೆ ನಡೆಸಿಲ್ಲ. ದುರದೃಷ್ಟವಶಾತ್ ಇದು ಏಕಪಕ್ಷೀಯ ನಿರ್ಧಾರ ಎಂದು ಟಿಎಂಸಿ ಹೇಳಿದೆ. ಹೀಗಾಗಿ ಟಿಎಂಸಿ ನಡೆ ಕುತೂಹಲ ಮೂಡಿಸಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ತನ್ನ ಸಂಸದರಿಗೆ ವಿಪ್‌ ಜಾರಿ ಮಾಡಿ ಹಾಜರಿರುವಂತೆ ಸೂಚಿಸಿದೆ.

ಇದನ್ನೂ ಓದಿ: Parliament Session 2024: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

Exit mobile version