Site icon Vistara News

Glass Bridge: ಈಗ ಭಾರತದ ಅತಿ ಉದ್ದದ ಗಾಜಿನ ಸೇತುವೆ ಮೇಲೆ ನಡೆದಾಡಿ!

idukki lass bridge

ಇಡುಕ್ಕಿ: ಕಾಲಿನ ಕೆಳಗೇ ಪ್ರಪಾತ ಇದೆ. ಆದರೆ ನೀವು ಅದರೊಳಗೆ ಬೀಳೋಲ್ಲ. ಗಟ್ಟಿ ಗಾಜಿನ ಸೇತುವೆ (Glass Bridge) ಇದ್ದರೆ ಮಾತ್ರ ಈ ನೋಟವನ್ನು ಎಂಜಾಯ್‌ ಮಾಡಲು ಸಾಧ್ಯ. ಇದೀಗ ದೇಶದ ಅತಿ ಉದ್ದದ ಕ್ಯಾಂಟಿಲಿವರ್ ಗಾಜಿನ ಸೇತುವೆ (longest glass bridge of India) ಕೇರಳದಲ್ಲಿ ಲೋಕಾರ್ಪಣೆಗೊಂಡಿದೆ.

ಜನರು ಗಾಜಿನ ತಳದ ಸೇತುವೆಗಳ ಮೇಲೆ ಕಂಪಿಸುತ್ತಾ ನಡೆಯುವುದನ್ನು ಮತ್ತು ಅವರ ಉಲ್ಲಾಸದ ವೈರಲ್ ವೀಡಿಯೊಗಳನ್ನು ನೀವೆಲ್ಲ ನೋಡಿರಬಹುದು. ನೀವೂ ಅಂಥ ಅನುಭವ ಪಡೆಯಬೇಕಿದ್ದರೆ ಕರ್ನಾಟಕದ ಕೊಡಗಿನಲ್ಲೂ ಅಂಥದೊಂದು ಗಾಜಿನ ಸೇತುವೆ ಹೊಸದಾಗಿ ನಿರ್ಮಿತವಾಗಿದೆ. ಆದರೆ ಅತಿ ಉದ್ದದ ಗಾಜಿನ ಸೇತುವೆ ಮೇಲೆ ನಡೆಯಲು ನೀವು ಇಡುಕ್ಕಿ ಜಿಲ್ಲೆಯ ವಾಗಮೋನ್‌ನಲ್ಲಿದೆ. ಇದನ್ನು ಕೇರಳದ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ಅವರು ಕಳೆದ ವಾರ ಉದ್ಘಾಟಿಸಿದರು.

ಈ ಗಾಜಿನ ಸೇತುವೆಯ ಕೆಳಗೆ ಅಕ್ಷರಶಃ ಪ್ರಪಾತವೇ ಇದೆ. ಸಮುದ್ರ ಮಟ್ಟದಿಂದ 3,600 ಅಡಿ ಎತ್ತರದ ವಾಗಮಾನ್ ಬೆಟ್ಟಗಳ ಮೇಲೆ ಇದು ನೆಲೆಗೊಂಡಿದೆ. ಗಾಜಿನ ಸೇತುವೆಯು 40 ಮೀ (120 ಅಡಿ) ಉದ್ದವನ್ನು ಹೊಂದಿದೆ. ಗಾಜಿನ ಸೇತುವೆ ಮೇಲೆ ನಡೆಯುತ್ತಾ ಆಕಾಶದಲ್ಲೇ ಹೋದಂತೆ ಫೀಲ್‌ ಕೊಡುತ್ತದೆ. ಸೇತುವೆಯ ಕೊನೆಯಲ್ಲಿ ನೀವು ಹಸಿರು ಹೊದ್ದಿರುವ ಬೆಟ್ಟಗಳು ಮತ್ತು ಕಣಿವೆಗಳ ಅದ್ಭುತ ನೋಟವನ್ನು, ಕೂಟ್ಟಿಕ್ಕಲ್ ಮತ್ತು ಕೊಕ್ಕಯಾರ್ ಪಟ್ಟಣಗಳ ದೂರದ ನೋಟವನ್ನು ಪಡೆಯಬಹುದು.

ಸೇತುವೆಯನ್ನು ಉಕ್ಕಿನ ಕೇಬಲ್‌ಗಳು ಮತ್ತು ಬೃಹತ್ ಕಾಂಕ್ರೀಟ್‌ ಕಂಬದ ರಚನೆಯಿಂದ ಹಿಡಿದಿಟ್ಟುಕೊಳ್ಳಲಾಗಿದೆ. ಒಮ್ಮೆಗೆ 15 ವ್ಯಕ್ತಿಗಳು ಈ ಗಾಜಿನ ಸೇತುವೆಯ ಮೇಲೆ ನಡೆಯಬಹುದು. ವಾಗಮೋನ್ ಗಿರಿಧಾಮದ ಸೌಂದರ್ಯದ ವಿಹಂಗಮ ನೋಟವನ್ನು ವೀಕ್ಷಿಸಬಹುದು. DTPC ಅಧಿಕಾರಿಗಳ ಪ್ರಕಾರ, ಜರ್ಮನಿಯಿಂದ ಆಮದು ಮಾಡಿಕೊಳ್ಳಲಾದ ಒಟ್ಟು 35 ಟನ್ ಉಕ್ಕನ್ನು ಸೇತುವೆಯ ನಿರ್ಮಾಣಕ್ಕೆ ಬಳಸಲಾಗಿದೆ.

ಇಲ್ಲಿ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯು ಭಾರತ್ ಮಾತಾ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಸ್ಕೈ ಸ್ವಿಂಗ್, ಸ್ಕೈ ಸೈಕ್ಲಿಂಗ್, ಸ್ಕೈ ರೋಲರ್ ಮತ್ತು ರಾಕೆಟ್ ಇಂಜೆಕ್ಟರ್, ಜೈಂಟ್‌ ಸ್ವಿಂಗ್, ಜಿಪ್ ಲೈನ್ ಸೇರಿದಂತೆ ಪ್ರವಾಸಿಗರಿಗೆ ಹಲವು ಸಾಹಸ ಚಟುವಟಿಕೆಗಳು ಇರುವ ಪ್ರವಾಸೋದ್ಯಮ ಉದ್ಯಾನವನವೇ ಇಲ್ಲಿದೆ. ಇದರಿಂದ ವಾಗಮಾನ್‌ನ ಪ್ರವಾಸೋದ್ಯಮ ಭವಿಷ್ಯ ಸುಧಾರಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ 3 ಗ್ಲಾಸ್‌ ಬ್ರಿಡ್ಜ್‌ಗಳು: ಗಾಜಿನ ಸೇತುವೆಯಲ್ಲಿ ನಡೆಯಲು ವಿದೇಶಕ್ಕೆ ಹೋಗಬೇಕಿಲ್ಲ!

Exit mobile version