ನವದೆಹಲಿ: ಅದೃಷ್ಟ ಎಂದರೆ ಹೀಗಿರಬೇಕು. ಯುಎಇಯಲ್ಲಿ ಸುಮಾರು 11 ವರ್ಷಗಳಿಂದ ಉದ್ಯೋಗ ನಿರ್ವಹಿಸುತ್ತಿರುವ ಕೇರಳದ ವ್ಯಕ್ತಿಗೆ ಲಾಟರಿಯಲ್ಲಿ (Lottery) ಬರೋಬ್ಬರಿ 45 ಕೋಟಿ ರೂ. (Dh 20,000,000) ಲಭಿಸಿದೆ. ಕೇರಳ ಮೂಲದ 39ರ ಹರೆಯದ ಶ್ರೀಜು ಇಂತಹ ಅದೃಷ್ಟವಂತ ವ್ಯಕ್ತಿ. ಮಹಜೂಜ್ ಸ್ಯಾಟರ್ ಡೇ ಮಿಲಿಯನ್ಸ್ (Mahzooz Saturday Millions)ನ 154ನೇ ಡ್ರಾದಲ್ಲಿ ಶ್ರೀಜು ಈ ಬೃಹತ್ ಮೊತ್ತ ತಮ್ಮದಾಗಿಸಿ ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀಜು ದುಬೈಯಿಂದ 120 ಕಿ.ಮೀ. ದೂರದಲ್ಲಿರುವ ಫುಜೈರಾದಲ್ಲಿ ಆಯಿಲ್ ಮತ್ತು ಗ್ಯಾಸ್ ಕಂಪನಿಯೊಂದರಲ್ಲಿ ಕಂಟ್ರೋಲ್ ರೂಮ್ ಆಪರೇಟರ್ ಆಗಿ ಸುಮಾರು 11 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಶ್ರೀಜು ಮೂರು ವರ್ಷಗಳಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ತಿಂಗಳಿಗೆ ಎರಡು ಬಾರಿಯಂತೆ ಅವರು ಮಹಜೂಜ್ ಸ್ಯಾಟರ್ ಡೇ ಮಿಲಿಯನ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. 6 ವರ್ಷಗಳ ಅವಳಿ ಮಕ್ಕಳ ತಂದೆಯಾಗಿರುವ ಶ್ರೀಜು ಈ ಮೊತ್ತವನ್ನು ಹೇಗೆಲ್ಲ ಬಳಸಬೇಕು ಎನ್ನುವುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲವಂತೆ. ಆದರೆ ಸಾಲ ಮಾಡದೆ ಊರಲ್ಲಿ ಮನೆ ನಿರ್ಮಿಸುವ ತಮ್ಮ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗುವುದಂತು ಸತ್ಯ ಎಂದು ಅವರು ಹೇಳಿದ್ದಾರೆ. ಅದೃಷ್ಟ ಖುಲಾಯಿಸಿದ್ದರೂ ಯುಎಇಯಲ್ಲಿ ಉದ್ಯೋಗ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.
Congratulations to our latest Millionaire📷 Don't miss your chance to win Big. Visit https://t.co/i83vNrz0Ig nowhttps://t.co/i3Yeo1MY3U
— Mahzooz (@MyMahzooz) November 16, 2023
ʼʼಮಹಜೂಜ್ ಅಕೌಂಟ್ ಅನ್ನು ಪರಿಶೀಲಿಸುವಾಗ ನಾನು ಕಾರು ಚಲಾಯಿಸುತ್ತಿದ್ದೆ. ರಿಸಲ್ಟ್ ನೋಡಿ ನನ್ನ ಕಣ್ಣುಗಳನ್ನೇ ನಂಬಲಾಗಿಲ್ಲ. ಮೊಲು ನನಗೆ ನಂಬಿಕೆಯೇ ಬರಲಿಲ್ಲ. ಮಹಜೂಜ್‌ನಿಂದ ಅಧಿಕೃತರು ಕರೆ ಮಾಡಿ ತಿಳಿಸಿದಾಗಲಷ್ಟೇ ನನಗೆ ವಿಶ್ವಾಸ ಮೂಡಿತುʼʼ ಎಂದು ಶ್ರೀಜು ಹೇಳಿದ್ದಾರೆ.
“ಇಲ್ಲಿಯವರೆಗೆ ನಮ್ಮ ಸಾಪ್ತಾಹಿಕ ಡ್ರಾಗಳು 64 ಕೋಟ್ಯಧೀಶರನ್ನು ಸೃಷ್ಟಿಸಿವೆ. 1,107,000ಕ್ಕೂ ಹೆಚ್ಚು ವಿಜೇತರಿಗೆ ಅರ್ಧ ಶತಕೋಟಿ ದಿರ್ಹಾಮ್‌ಗಳನ್ನು ವಿತರಿಸಲಾಗಿದೆʼʼ ಎಂದು ಮಹಜೂಜ್ ಸ್ಯಾಟರ್ ಡೇ ಮಿಲಿಯನ್ಸ್‌ನ ಸುಜಾನ್ ಕಾಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 8ರ ಮಹಜೂಜ್ ಸ್ಯಾಟರ್ ಡೇ ಮಿಲಿಯನ್ಸ್‌ನ ವಿಜೇತರಲ್ಲಿ ಇಬ್ಬರು ಭಾರತೀಯರು ಇದ್ದರು ಎನ್ನಲಾಗಿದೆ.
ಇದನ್ನೂ ಓದಿ: Kerala Lottery: ಅಬ್ಬಾ ಲಾಟರಿ; 250 ರೂ. ಟಿಕೆಟ್ ಖರೀದಿಸಿದ ಕೇರಳದ 11 ಮಹಿಳಾ ಪೌರ ಕಾರ್ಮಿಕರು ಈಗ ಕೋಟ್ಯಧೀಶೆಯರು!
ಭಾರತೀಯರಿಗೆ ಒಲಿದ ಅದೃಷ್ಟ
ಕಳೆದ ವಾರ ಎಮಿರೇಟ್ಸ್ ಡ್ರಾ ಫಾಸ್ಟ್ 5 (Emirates Draw FAST5)ರಲ್ಲಿ ಮತ್ತೊಬ್ಬ ಭಾರತೀಯ ಬಹುಮಾನ ಗೆದ್ದಿದ್ದರು. ಇವರು ಕೂಡ ದುಬೈನಲ್ಲಿ ನೆಲೆಸಿರುವ ಕೇರಳದವರು ಎನ್ನುವುದು ವಿಶೇಷ. 36 ವರ್ಷದ ಶರತ್ ಶಿವದಾಸನ್ 50,000 ದಿರ್ಹಮ್ (ಅಂದಾಜು 11 ಲಕ್ಷ ರೂ.) ಗೆದ್ದಿದ್ದರು. ಅದಕ್ಕೂ ಮೊದಲು ಮುಂಬೈ ಮೂಲದ 42ರ ಹರೆಯದ ಮನೋಜ್ ಭಾವ್ಸಾರ್ ಎಮಿರೇಟ್ಸ್ ಡ್ರಾ ಫಾಸ್ಟ್ 5ನಲ್ಲಿ 16 ಲಕ್ಷ ರೂ. ಗಳಿಸಿದ್ದರು ಎಂದು ಮೂಲಗಳು ತಿಳಿಸಿವೆ. ಯುಎಇಯಲ್ಲಿ ಲಾಟರಿ ಟಿಕೆಟ್‌ಗಳನ್ನು ಅತಿ ಹೆಚ್ಚು ಖರೀದಿಸುವವರು ಭಾರತೀಯ ಪ್ರಜೆಗಳು ಎಂದು ವರದಿ ತಿಳಿಸಿದೆ. ಮಹಜೂಜ್ ಸ್ಯಾಟರ್ ಡೇ ಮಿಲಿಯನ್ಸ್‌ನಲ್ಲಿ ಕೇವಲ 35 ದಿರ್ಹಮ್ (ಸುಮಾರು 793 ರೂ.) ವ್ಯಯಿಸಿ 20,000,000 ದಿರ್ಹಮ್ (45 ಕೋಟಿ ರೂ.)ವರೆಗೆ ಗಳಿಸುವ ಅವಕಾಶವಿದೆ. ಮಹಜೂಜ್ ಎಂದರೆ ಅರೆಬಿಕ್‌ನಲ್ಲಿ ಅದೃಷ್ಟ ಎಂದರ್ಥ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ