ಲಕ್ನೋ: ಮುಂಬೈಗೆ ತೆರಳಬೇಕಿದ್ದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಚ್ಚಿ ಗಾಯಗೊಳಿಸಿದ ಘಟನೆ ಲಕ್ನೋ ವಿಮಾನ ನಿಲ್ದಾಣ (Lucknow airport)ದಲ್ಲಿ ನಡೆದಿದೆ. ಬಳಿಕ ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಕ್ಯುಪಿ 1525 (QP 1525) ವಿಮಾನ ಲಕ್ನೋ ವಿಮಾನ ನಿಲ್ದಾಣದಿಂದ ಸಂಜೆ 5:25ಕ್ಕೆ ಮುಂಬೈಗೆ ತೆರಳಲು ಸಜ್ಜಾಗಿತ್ತು. ಈ ವೇಳೆ ಮಹಿಳೆ ಅತಿರೇಕದ ವರ್ತನೆ ತೋರಿದ್ದಾರೆ. ಸದ್ಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಘಟನೆ ವಿವರ
ಸರೀಜಿನಿ ನಗರದ ಸ್ಟೇಷನ್ ಹೌಸ್ ಆಫೀಸರ್ (SHO) ಶೈಲೇಂದ್ರ ಗಿರಿ ಈ ಬಗ್ಗೆ ಮಾಹಿತಿ ನೀಡಿ, ʼʼದಾಳಿ ನಡೆಸಿದ ಮಹಿಳೆ ಮಾನಸಿಕವಾಗಿ ಬಹಳ ಒತ್ತಡದಲ್ಲಿ ಇದ್ದಂತೆ ಕಾಣಿಸುತ್ತಿದ್ದರು. ಅವರು ಆರಂಭದಲ್ಲಿ ಸಹ ಪ್ರಯಾಣಿಕರೊಂದಗೆ ತಗಾದೆ ತೆಗೆದು ಜಗಳ ನಡೆಸಿದ್ದರು. ವಿಮಾನ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಮಹಿಳೆಯನ್ನು ಸಮಾಧಾನ ಪಡಿಸಲು ಮುಂದಾದಾಗ ಅವರೊಂದಿಗೂ ತಗಾದೆ ತೆಗೆದು ಜಗಳ ಆರಂಭಿಸಿದರು. ಬಳಿಕ ಮಹಿಳೆಯನ್ನು ಹೊರ ಕಳಿಸಲಾಯಿತುʼʼ ಎಂದು ತಿಳಿಸಿದ್ದಾರೆ.
ʼʼಮಹಿಳೆಯನ್ನು ಹೊರಗೆ ಕರೆತರುವಾಗ ಆಕೆ ಪುರುಷ ಸಿಬ್ಬಂದಿಯ ಮಣಿಕಟ್ಟಿಗೆ ಕಚ್ಚಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಆಕೆಯನ್ನು ಸರೋಜಿನಿ ನಗರ ಪೊಲೀಸ್ ಸ್ಟೇಷನ್‌ಗೆ ಕರೆತಂದು ದೂರು ದಾಖಲಿಸಿದ್ದಾರೆʼʼ ಎಂದು ಶೈಲೇಂದ್ರ ಗಿರಿ ವಿವರಿಸಿದ್ದಾರೆ.
ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 504 (ಶಾಂತಿ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಗ್ರಾ ಮೂಲದ ಈ ಮಹಿಳೆ ಮುಂಬೈಯಲ್ಲಿ ವಾಸವಾಗಿದ್ದಾರೆ. ಲಕ್ನೋದಲ್ಲಿರುವ ತಮ್ಮ ಸಹೋದರಿಯನ್ನು ಭೇಟಿಯಾಗಲು ಆಗಮಿಸಿ ಹಿಂದಿರುಗುವ ವೇಳೆ ಈ ಘಟನೆ ನಡೆದಿದೆ. ಸದ್ಯ ಮಹಿಳೆಯನ್ನು ಸಂಬಂಧಿಕರ ವಶಕ್ಕೆ ನೀಡಲಾಗಿದೆ.
ಇದನ್ನೂ ಓದಿ: Mumbai Airport: ವ್ಹೀಲ್‌ಚೇರ್ ದೊರೆಯದೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟ ವೃದ್ಧ
ವಿಮಾನದ ಸಿಬ್ಬಂದಿಯ ಮೂಗು ಮುರಿದ ಪ್ರಯಾಣಿಕ
ವಿಮಾನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಯುತ್ತಿರುವುದು ಇದು ಮೊದಲ ಸಲವೇನಲ್ಲ ಆಗಾಗ ಇಂತಹ ಪ್ರಕರಣ ವರದಿಯಾಗುತ್ತಲೇ ಇರುತ್ತದೆ. ಕೆಲವು ತಿಂಳ ಹಿಂದೆ ಪ್ರಯಾಣಿಕನೊಬ್ಬ ವಿಮಾನ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಬ್ಯಾಂಕಾಂಕ್‌ನಿಂದ ಹೀಥ್ರೂಗೆ ತೆರಳುತ್ತಿದ್ದ ಥಾಯ್ ಏರ್‌ವೇಸ್ ವಿಮಾನದಲ್ಲಿ 35 ವರ್ಷದ ಬ್ರಿಟನ್ ಪ್ರಯಾಣಿಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ. ಈ ವರ್ಷದ ಫೆಬ್ರವರಿ 7ರಂದು ಘಟನೆ ನಡೆದಿದ್ದು, ಬಳಿಕ ಆತನನ್ನು ಬಂಧಿಸಲಾಗಿತ್ತು. ವಿಮಾನ ಹಾರುವಾಗ ಟಾಯ್ಲೆಟ್‌ಗೆ ಹೋದ ಪ್ರಯಾಣಿಕನು ಒಳಗಡೆ ಕೂಗಾಡಲು ಶುರು ಮಾಡಿದ್ದ. ಕೂಗಿ, ಅತ್ತು, ಟಾಯ್ಲೆಟ್‌ನ ಬಾಗಿಲು ಮುರಿಯಲು ಯತ್ನಿಸಿದ್ದ.
ವಿಮಾನದ ಶೌಚಾಲಯದಿಂದ ಆತ ಹೊರಗೆ ಬಂದ ಕೂಡಲೇ ವಿಮಾನದ ಸಿಬ್ಬಂದಿಯು ಆತನನ್ನು ನಿಯಂತ್ರಿಸಲು ಮುಂದಾಗಿದ್ದರು. ಇದೇ ವೇಳೆ ಪ್ರಯಾಣಿಕನು ಸಿಬ್ಬಂದಿಯ ಮೂಗಿಗೆ ಪಂಚ್ ಮಾಡಿದ್ದು, ಮೂಗು ಮುರಿದಿದೆ ಎಂದು ತಿಳಿದುಬಂದಿದೆ. ಗಗನಸಖಿಯೊಬ್ಬರು ಮಾಡಿದ ವಿಡಿಯೊಭಾರಿ ವೈರಲ್ ಆಗಿತ್ತು.