Site icon Vistara News

Lunar eclipse: ಅ.29ರಂದು ಭಾಗಶಃ ಚಂದ್ರಗ್ರಹಣ; ಭಾರತದಲ್ಲೂ ಗೋಚರ?

lunar

lunar

ನವ ದೆಹಲಿ: ಈ ಅಕ್ಟೋಬರ್ ತಿಂಗಳು ನಿಸರ್ಗದ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಒಂದೇ ತಿಂಗಳಲ್ಲಿ ಅದೂ ಎರಡು ವಾರಗಳ ಅಂತರದಲ್ಲಿ 2 ಗ್ರಹಣಗಳು ಸಂಭವಿಸಲಿವೆ. ಅಕ್ಟೋಬರ್ 29ರಂದು ಚಂದ್ರ ಗ್ರಹಣ (Lunar eclipse) ನಡೆಯಲಿದೆ. ಅಕ್ಟೋಬರ್ 14ರಂದು ಸಂಭವಿಸಿದ ಸೂರ್ಯಗ್ರಹಣದ (Solar Eclipse) ಕೇವಲ 15 ದಿನಗಳ ನಂತರ ಈ ಚಂದ್ರ ಗ್ರಹಣ ಗೋಚರವಾಗಲಿದೆ.

ಅ. 28ರ ಮಧ್ಯರಾತ್ರಿ ಬಳಿಕ ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ. ಚಂದ್ರ ಗ್ರಹಣಗಳು ಹುಣ್ಣಿಮೆಯ ಸಂದರ್ಭದಲ್ಲಿ ಸಂಭವಿಸುತ್ತವೆ. ಭೂಮಿ ಚಂದ್ರ ಮತ್ತು ಸೂರ್ಯನ ನಡುವೆ ಬಂದಾಗ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬಿದ್ದು ಅದನ್ನು ಮಂಕಾಗಿಸುತ್ತದೆ. ಇದನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರನ ಒಂದು ಭಾಗವು ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ. ಪ್ರತಿ ಚಂದ್ರ ಗ್ರಹಣವು ಭೂಮಿಯ ಅರ್ಧಭಾಗದಲ್ಲಿ ಗೋಚರವಾಗುತ್ತದೆ ಎಂದು ನಾಸಾ ತಿಳಿಸಿದೆ.

ವಿಜ್ಞಾನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಭಾಗಶಃ ಚಂದ್ರ ಗ್ರಹಣವು ಅಕ್ಟೋಬರ್ 28-29ರಂದು ಸಂಭವಿಸಲಿದೆ (6-7 ಕಾರ್ತಿಕ, 1945 ಶಕ ಯುಗ). ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಏಷ್ಯಾ, ಯುರೋಪ್, ಆಫ್ರಿಕಾ, ಪೂರ್ವ ದಕ್ಷಿಣ ಅಮೆರಿಕ, ಈಶಾನ್ಯ ಉತ್ತರ ಅಮೆರಿಕ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರವನ್ನು ಒಳಗೊಂಡಿರುವ ಪ್ರದೇಶದಲ್ಲಿ ಗ್ರಹಣ ಗೋಚರಿಸುತ್ತದೆ.

ಭಾರತದಲ್ಲಿ ಗೋಚರವಾಗುತ್ತದೆ

ಭಾಗಶಃ ಚಂದ್ರಗ್ರಹಣವು ಮಧ್ಯರಾತ್ರಿಯ ಸುಮಾರಿಗೆ ಭಾರತದ ಎಲ್ಲಾ ಸ್ಥಳಗಳಿಂದ ಗೋಚರಿಸಲಿದೆ. ಗ್ರಹಣದ ಅವಧಿ 1 ಗಂಟೆ 19 ನಿಮಿಷ. ಗ್ರಹಣ ಅಕ್ಟೋಬರ್ 29ರಂದು ಭಾರತೀಯ ಕಾಲಮಾನ 1 ಗಂಟೆ 5 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು ಭಾರತೀಯ ಕಾಲಮಾನ 2 ಗಂಟೆ 24 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ರಾತ್ರಿ 1.45ರ ವೇಳೆಗೆ ಶೇ. 12ರಷ್ಟು ಚಂದ್ರ ಬಿಂಬವು ನೆರಳಿನಂತೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ಚಂದ್ರ ಗ್ರಹಣ ಯಾವಾಗ?

ಮುಂದಿನ ಸಂಪೂರ್ಣ ಚಂದ್ರಗ್ರಹಣವು ಭಾರತದಲ್ಲಿ 2025ರ ಸೆಪ್ಟಂಬರ್‌ 7ರಂದು ಗೋಚರಿಸಲಿದೆ. ಭಾರತದಲ್ಲಿ ಕೊನೆಯ ಬಾರಿ  2022ರ ನವೆಂಬರ್‌ 8ರಂದು ಸಂಪೂರ್ಣ ಚಂದ್ರ ಗ್ರಹಣ ಗೋಚರವಾಗಿತ್ತು.

ಇದನ್ನೂ ಓದಿ: Solar Eclipse: ಬಾನಿನಲ್ಲಿ ಸೂರ್ಯನುಂಗುರ; ಸೂರ್ಯಗ್ರಹಣ ಹೇಗಿತ್ತು? ಫೋಟೊಗಳು ಇಲ್ಲಿವೆ

ಅ. 14ರಂದು ಸಂಭವಿಸುವ ವಾರ್ಷಿಕ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರವಾಗಿರಲಿಲ್ಲ. ಆದ್ದರಿಂದ ಯಾವುದೇ ಸೂತಕದ ಅವಧಿ ಇರಲಿಲ್ಲ. ‘ಅಗ್ನಿಯ ವರ್ತುಲ’ ಎಂದು ಕೂಡ ಕರೆಯಲಾಗುವ ಈ ಸೂರ್ಯಗ್ರಹಣವು ಪಶ್ಚಿಮ ಗೋಳದಲ್ಲಿ ಮಾತ್ರ ಕಾಣ ಸಿಗುವುದು ವಿಶೇಷ. ಸೂರ್ಯ ಮತ್ತು ಚಂದ್ರ ಒಂದೇ ಬಿಂದುವಿನಲ್ಲಿ ಬರುವ ಸಂದರ್ಭದಲ್ಲಿ ಸೂರ್ಯನ ಸುತ್ತ ಬೆಂಕಿ ವರ್ತುಲ ಕಾಣಿಸುತ್ತದೆ. ಹೀಗಾಗಿ ‘ಅಗ್ನಿಯ ವರ್ತುಲ’ ಎಂದು ಕರೆಯಲಾಗುತ್ತದೆ. ಅಮೆರಿಕದ ಪಶ್ಚಿಮ ಭಾಗ ಹಾಗೂ ಪೆಸಿಫಿಕ್ ಸಮುದ್ರದವರೆಗೆ ಸೇರಿದಂತೆ ಉತ್ತರ ಅಮೆರಿಕದಲ್ಲಿ ಸೂರ್ಯ ಗ್ರಹಣ ಗೋಚರಿಸಿದೆ. ಅಲ್ಲದೆ ಇದು ಭಾಗಶಃ ಮಾತ್ರ ಕಂಡು ಬಂದಿದೆ.

Exit mobile version