Site icon Vistara News

Made In India: ಜಾಗತಿಕವಾಗಿ ಪ್ರಭಾವ ಬೀರಿದ ʼಮೇಡ್‌ ಇನ್‌ ಇಂಡಿಯಾʼ ಉತ್ಪನ್ನಗಳು; ಪ್ರಧಾನಿ ಮೋದಿ ಮೆಚ್ಚುಗೆ

Made In India

Made In India

ನವದೆಹಲಿ: ʼಮೇಕ್‌ ಇನ್‌ ಇಂಡಿಯಾʼ (Make In India)-ಕೇಂದ್ರ ಸರ್ಕಾರ 2014ರಲ್ಲಿ ಪರಿಚಯಿಸಿದ ಈ ಅಭಿಯಾನ ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕನಸಿನ ಕೂಸಾದ ಈ ಯೋಜನೆ ಮೂಲಕ ಭಾರತವನ್ನು ಉತ್ಪನ್ನಗಳ ತಯಾರಿಕಾ ಕೇಂದ್ರವನ್ನಾಗಿ ರೂಪಿಸುವ ಪ್ರಮುಖ ಉದ್ದೇಶ ಹೊಂದಲಾಗಿದೆ. ಭಾರತದಲ್ಲೇ ಸರಕುಗಳನ್ನು ತಯಾರಿಸುವ ಮೂಲಕ ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತಲಾಗುತ್ತದೆ (Made In India). ಇದರಿಂದ ರಫ್ತು ಪ್ರಮಾಣ ಹೆಚ್ಚಿ, ಆಮದು ಕಡಿಮೆಯಾಗುತ್ತಿದೆ. ಸದ್ಯ ಈ ಯೋಜನೆ ಯಶಸ್ವಿಯಾಗಿದ್ದು, ಭಾರತ ಅನೇಕ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದೆ. ಇದೀಗ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ ಯೋಜನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

MyGovIndia ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾರತದಲ್ಲೇ ತಯಾರಾದ ಉತ್ಪನ್ನಗಳು ಹೇಗೆ ಜಾಗತಿಕವಾಗಿ ಪರಿಣಾಮ ಬೀರಿವೆ ಎನ್ನುವುದನ್ನು ವಿವರಿಸುವ ಪೋಸ್ಟ್‌ ಹಂಚಿಕೊಂಡಿದೆ. ಇದನ್ನು ಶೇರ್‌ ಮಾಡಿಕೊಂಡಿರುವ ಮೋದಿ ಅವರು, ‘ʼಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆಯನ್ನು ಜಾಗತಿಕ ವೇದಿಕೆಗೆ ಹೇಗೆ ಕೊಂಡೊಯ್ಯುತ್ತಿದೆ ಎಂಬುದರ ಒಂದು ನೋಟ ಇಲ್ಲಿದೆʼʼ ಎಂದು ಬರೆದುಕೊಂಡಿದ್ದಾರೆ.

MyGovIndia ಪೋಸ್ಟ್‌ನಲ್ಲಿ ಏನಿದೆ?

ʼʼಸ್ಥಳೀಯ ಕರಕುಶಲತೆಯಿಂದ ಜಾಗತಿಕ ಪರಿಣಾಮದವರೆಗೆ: ಮೇಡ್‌ ಇನ್‌ ಇಂಡಿಯಾ ಯಶಸ್ಸಿನ ಕಥೆ. ಮೇಡ್ ಇನ್ ಇಂಡಿಯಾ ಉಪಕ್ರಮವು ಜಾಗತಿಕವಾಗಿ ಭಾರತೀಯ ನಿರ್ಮಿತ ಉತ್ಪನ್ನಗಳ ಯಶಸ್ಸನ್ನು ಸಾರುತ್ತಿದೆ. ಸೈಕಲ್‌ನಿಂದ ಹಿಡಿದು ಡಿಜಿಟಲ್ ಪಾವತಿಗಳವರೆಗೆ ಭಾರತವು ತನ್ನ ಉತ್ಪನ್ನಗಳೊಂದಿಗೆ ಜಗತ್ತಿನ ಗಮನ ಸೆಳೆದಿದೆʼʼ ಎಂದು MyGovIndia ಮಾಡಿರುವ ಪೋಸ್ಟ್‌ ಅನ್ನು ಮೋದಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಸರಣಿ ಪೋಸ್ಟ್‌ ಹಂಚಿಕೊಂಡಿರುವ MyGovIndia ಭಾರತದಲ್ಲಿ ತಯಾರಾಗಿರುವ ಉತ್ಪನ್ನಗಳು ಹೇಗೆ ಜಾಗತಿಕವಾಗಿ ಪರಿಣಾಮ ಬೀರಿದೆ ಎನ್ನುವುದನ್ನು ವಿವರಿಸಿದೆ.

ಭಾರತದ ಸೈಕಲ್‌ಗೆ ವಿದೇಶಗಳಲ್ಲಿ ಬೇಡಿಕೆ

ಭಾರತದಲ್ಲಿ ತಯಾರಾಗುವ ಸೈಕಲ್‌ ಜಾಗತಿಕವಾಗಿ ಛಾಪು ಮೂಡಿಸಿದೆ. ಇಂಗ್ಲೆಂಡ್‌, ಜರ್ಮನಿ ಮತ್ತು ನೆದರ್‌ಲ್ಯಾಂಡ್‌ಗೆ ಭಾರತೀಯ ಸೈಕಲ್‌ಗಳನ್ನು ರಫ್ತು ಮಾಡಲಾಗುತ್ತಿದೆ. ಈ ಬೆಳವಣಿಗೆಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

ರಷ್ಯಾ ಸೈನಿಕರಿಗೆ ಬಿಹಾರದಿಂದ ಶೂ ಪೂರೈಕೆ

ರಷ್ಯಾ ಸೈನಿಕರಿಗೆ ಬಿಹಾರದಲ್ಲಿ ತಯಾರಿಸಲಾಗುವ ಸೇಫ್ಟಿ ಶೂಗಳನ್ನು ಪೂರೈಸಲಾಗುತ್ತಿದೆ. ಈ ಮೈಲಿಗಲ್ಲು ಅಂತಾರಾಷ್ಟ್ರೀಯ ರಕ್ಷಣಾ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತಿದೆ. ಜತೆಗೆ ಕೆಲವು ಯುರೋಪಿಯನ್‌ ದೇಶಗಳಿಗೆ ಡಿಸೈನರ್ ಶೂಗಳನ್ನೂ ರಫ್ತು ಮಾಡಲಾಗುತ್ತಿದೆ.

ಕಾಶ್ಮೀರದ ಬ್ಯಾಟ್‌ಗಳಿಗೆ ಜಾಗತಿಕ ಬೇಡಿಕೆ

ಇತ್ತೀಚೆಗೆ ನಡೆದ ಟಿ-20 ವಿಶ್ವಕಪ್ ವೇಳೆ ಕಾಶ್ಮೀರದ ವಿಲ್ಲೋ ಬ್ಯಾಟ್‌ಗಳಿಗೆ ವಿದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಈ ಬ್ಯಾಟ್‌ಗಳು ಭಾರತದ ಉತ್ಕೃಷ್ಟ ಕರಕುಶಲತೆ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಕಾರಣದಿಂದ ಜನಪ್ರಿಯವಾಗುತ್ತಿದೆ.

ಅಮೂಲ್‌ ಬ್ರ್ಯಾಂಡ್‌ಗೆ ಎಲ್ಲೆಡೆ ಮನ್ನಣೆ

ಅಮುಲ್ ಬ್ರ್ಯಾಂಡ್‌ ಭಾರತದ ವಿಶಿಷ್ಟ ರುಚಿಗಳನ್ನು ಜಗತ್ತಿನಾದ್ಯಂತ ಪಸರಿಸುತ್ತಿದೆ. ತನ್ನ ಉತ್ಪನ್ನಗಳನ್ನು ಅಮೆರಿಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಅಂತಾರಾಷ್ಟ್ರೀಯ ವಿಸ್ತರಣೆಯು ಭಾರತೀಯ ಹಾಲಿನ ಉತ್ಪನ್ನಗಳನ್ನು ವಿಶ್ವಾದ್ಯಂತ ಹರಡುವ ಅಮುಲ್‌ನ ಬದ್ಧತೆಗೆ ಸಾಕ್ಷಿ.

ವಿದೇಶದಲ್ಲಿಯೂ ಯುಪಿಐ ಕಮಾಲ್‌

ಭಾರತದ ಯುಪಿಐ ವ್ಯವಸ್ಥೆಗೆ ಈಗ ಜಾಗತಿಕ ಮನ್ನಣೆ ಲಭಿಸಿದ್ದು, ಅನೇಕ ದೇಶಗಳು ಈ ತಡೆರಹಿತ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸಿವೆ. ಇದು ಡಿಜಿಟಲ್ ವಹಿವಾಟುಗಳಲ್ಲಿ ಕ್ರಾಂತಿಯನ್ನುಂಟು ಮಾಡುವ ಭಾರತದ ಬದ್ಧತೆಯನ್ನು ಒತ್ತಿ ಹೇಳುತ್ತದೆ.

ಕ್ರಾಂತಿ ಸೃಷ್ಟಿಸಿದ ಬ್ರಹ್ಮೋಸ್ ಕ್ಷಿಪಣಿ

ಭಾರತ ಮತ್ತು ರಷ್ಯಾ ನಡುವಿನ ಜಂಟಿ ಉದ್ಯಮವಾದ ಬ್ರಹ್ಮೋಸ್ ಕ್ಷಿಪಣಿ ಈಗ ದಕ್ಷಿಣ ಚೀನಾ ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಬೆಳವಣಿಗೆಯು ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿಗೆ ಸಾರಿ ಹೇಳಿದೆ. ಮಾತ್ರವಲ್ಲ ಜಾಗತಿಕ ಭದ್ರತೆಯನ್ನು ಹೆಚ್ಚಿಸುವಲ್ಲಿ ನಮ್ಮ ದೇಶದ ಮಹತ್ವದ ಪಾತ್ರವನ್ನು ಒತ್ತಿ ಹೇಳಿದೆ.

ಇ-ಕಾಮರ್ಸ್ ಮಾರುಕಟ್ಟೆಯಲ್ಲಿಯೂ ಪ್ರಾಬಲ್ಯ

ಅಮೆಜಾನ್‌ನ ʼಬ್ಲ್ಯಾಕ್ ಫ್ರೈಡೆʼ ಮತ್ತು ʼಸೈಬರ್ ಮಂಡೆʼ ಮಾರಾಟದಲ್ಲಿ ಭಾರತೀಯ ಉತ್ಪನ್ನಗಳು ಪ್ರಾಬಲ್ಯ ಸಾಧಿಸಿವೆ. ಈ ಯಶಸ್ಸಿನ ಕಥೆಯು ಮೇಡ್‌ ಇನ್‌ ಇಂಡಿಯಾ ವಸ್ತುಗಳಿಗೆ ಅಂತಾರಾಷ್ಟ್ರೀಯ ಬೇಡಿಕೆ ಮತ್ತು ಜಾಗತಿಕ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವನ್ನು ತೋರಿಸುತ್ತದೆ.

ಇದನ್ನೂ ಓದಿ: Made In Bihar: ರಷ್ಯಾ ಸೈನ್ಯಕ್ಕೆ ಬಿಹಾರದಿಂದ ಸೇಫ್ಟಿ ಶೂ ಪೂರೈಕೆ; ವಾರ್ಷಿಕ 100 ಕೋಟಿ ರೂ. ವ್ಯವಹಾರ

Exit mobile version