Site icon Vistara News

Madhavi Latha: ಮತಗಟ್ಟೆಯಲ್ಲಿ ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ ಐಡಿ ಕಾರ್ಡ್‌ ಚೆಕ್‌ ಮಾಡಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ!

Madhavi Latha

ಹೈದರಾಬಾದ್‌: ಲೋಕಸಭಾ ಚುನಾವಣೆ(Lok Sabha Election 2024)ಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ಈ ನಡುವೆ ಕೆಲವೊಂದು ಕಡೆ ಅಭ್ಯರ್ಥಿಗಳಿಂದ ಎಡವಟ್ಟುಗಳೂ ನಡೆದಿವೆ. ಹೈದರಾಬಾದ್‌ ಬಿಜೆಪಿ ಲೋಕಸಭಾ ಅಭ್ಯರ್ಥಿ ಮಾಧವಿ ಲತಾ(Madhavi Latha) ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ್ದ ಮತದಾರರ ಗುರುತಿನ ಚೀಟಿ ಪರಿಶೀಲನೆ ಮಾಡಿ ವಿವಾದಕ್ಕೀಡಾಗಿದ್ದಾರೆ. ಈ ವಿಡಿಯೋ ವೈರಲ್‌(Viral Video) ಆಗಿದ್ದು, ಪ್ರತಿಸ್ಪರ್ಧಿ ಎಐಎಂಐಎಂ ಪಕ್ಷ(AIMIM) ಮುಖಂಡ ಅಸಾದುದ್ದೀನ್‌ ಓವೈಸಿ(Asaduddin Owaisi) ಚುನಾವಣಾ ಆಯೋಗಕ್ಕೆ (Election Commission of India) ದೂರು ನೀಡಿದ್ದಾರೆ.

ಘಟನೆ ವಿವರ:

ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಲತಾ, ಇಂದು ಅಜಂಪುರದಲ್ಲಿರುವ ಅಮೃತ ವಿದ್ಯಾಲಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ವಿವಿಧ ಮತಗಟ್ಟೆಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮತಗಟ್ಟೆಯಲ್ಲಿ ಮತದಾನಕ್ಕಾಗಿ ಕಾದು ಕುಳಿತಿದ್ದ ಮುಸ್ಲಿಂ ಮಹಿಳೆಯ ಬಳಿ ಬಂದ ಲತಾ, ಮುಖಕ್ಕೆ ಧರಿಸಿದ್ದ ಹಿಜಾಬ್‌ ತೆಗೆಯುವಂತೆ ಹೇಳಿ ಅವರ ಗುತುತಿನ ಚೀಟಿ ಪರಿಶೀಲನೆ ಮಾಡಿದರು. ಅದೂ ಅಲ್ಲದೇ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆದ ಬಳಿಕಷ್ಟೇ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಅಲ್ಲಿನ ಅಧಿಕಾರಿಗಳಿಗೆ ಆಕೆ ಸೂಚಿಸಿದ್ದಾರೆ. ಇನ್ನು ಇದೇ ವೇಳೆ ಮತಪಟ್ಟಿಯಲ್ಲಿ ಮತದಾರರ ಹೆಸರು ಮಿಸ್‌ ಆಗಿವೆ ಎಂದು ಹೇಳಿದ್ದಾರೆ.

ಮಾಧವಿ ಲತಾ ಅವರು ವಿವಾದಕ್ಕೀಡಾಗುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದ ರಾಮನವಮಿಯ ಮೆರವಣಿಗೆ ಸಂದರ್ಭದಲ್ಲಿ ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿರುವ ಸಿದ್ದಿಯಂಬರ್ ಬಜಾರ್ ಮಸೀದಿಯತ್ತ ಮಾಧವಿ ಲತಾ ಅವರು ಬಾಣ ಬಿಟ್ಟಂತೆ ಸನ್ನೆ ಮಾಡುವ ಮೂಲಕ ಸುದ್ದಿಯಾಗಿದ್ದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಮಾಧವಿ ಲತಾ ಅವರು ಕೇಸರಿ ಶಾಲು ಧರಿಸಿ ವಾಹನವೊಂದರ ಮೇಲೆ ನಿಂತು ಮಸೀದಿಯತ್ತ ಬಾಣ ಬಿಟ್ಟಂತೆ ಸನ್ನೆ ಮಾಡಿರುವುದು ಮತ್ತು ಸುತ್ತಲು ಕೇಸರಿ ಧ್ವಜ ಹಿಡಿದು ನಿಂತಿದ್ದ ನೂರಾರು ಜನರು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮೊಳಗಿಸಿದ್ದು ವೈರಲ್ ವಿಡಿಯೋದಲ್ಲಿತ್ತು.

ಇದನ್ನೂ ಓದಿ: Viral Video: ಸಾಲಿನಲ್ಲಿ ಬನ್ನಿ ಅಂದಿದ್ದೇ ತಪ್ಪಾಯ್ತಾ? ಮತದಾರನಿಗೆ MLA ಕಪಾಳಮೋಕ್ಷ

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಲೇ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಸ್ಪಷ್ಟನೆ ನೀಡಿದ್ದು, ‘ತಪ್ಪು ಭಾವನೆ ಮೂಡಿಸಲು ನನ್ನ ವಿಡಿಯೋವೊಂದನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಅಪೂರ್ಣ ವಿಡಿಯೋ ಎಂಬುವುದನ್ನು ನಾನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ. ಈ ವಿಡಿಯೋದಿಂದ ಯಾರ ಭಾವನೆಗಾದರು ಧಕ್ಕೆಯಾಗಿದ್ದರೆ, ನಾನು ಎಲ್ಲರನ್ನು ಗೌರವಿಸುವವಳಾಗಿ ಕ್ಷಮೆ ಯಾಚಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

Exit mobile version