Site icon Vistara News

Maharashtra Politics: ಏಕ್‌ನಾಥ್‌ ಶಿಂಧೆಗೆ ಮತ್ತಷ್ಟು ಬಲ; ಅಸ್ಸಾಂಗೆ ತೆರಳಿದ ಇನ್ನೂ ಮೂವರು ಶಾಸಕರು

Eknath Shinde in hotel

ಮುಂಬೈ: ಸರ್ಕಾರದ ವಿರುದ್ಧ ಬಂಡಾಯವೆದ್ದು ಸುಮಾರು 46 ಶಾಸಕರೊಂದಿಗೆ ಅಸ್ಸಾಂನ ಗುವಾಹಟಿಯ ಹೋಟೆಲ್‌ ಸೇರಿರುವ ಏಕನಾಥ್‌ ಶಿಂಧೆಗೆ (Eknath Shinde) ಇನ್ನೂ ಮೂವರು ಶಾಸಕರ ಬೆಂಬಲ ಸಿಕ್ಕಿದೆ. ಇಂದು ಬೆಳಗ್ಗೆ ಶಿವಸೇನೆಯ ಮೂವರು ಶಾಸಕರು ಹೋಟೆಲ್‌ಗೆ ತೆರಳಿ ಶಿಂಧೆ ಬಣ ಸೇರಿಕೊಂಡಿದ್ದಾರೆ. ಈ ಶಿಂಧೆಗೇ ಮುಖ್ಯಮಂತ್ರಿ ಹುದ್ದೆ ಕೊಡುವಂತೆ ಶಿವಸೇನೆಯೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಸಲಹೆ ನೀಡಿವೆ. ಆದರೆ ಶಿಂಧೆ ಈ ಮೈತ್ರಿಯನ್ನೇ ಒಪ್ಪುತ್ತಿಲ್ಲ. ಇದೊಂದು ಅಸಹಜ ಮೈತ್ರಿ, ಶಿವಸೇನೆ ಕಾಂಗ್ರೆಸ್‌-ಎನ್‌ಸಿಪಿಯಿಂದ ಹೊರಬೀಳಬೇಕು ಎಂದು ಆಗ್ರಹಿಸಿದ್ದಾರೆ.

ಒಂದೆಡೆ ಶಿವಸೇನೆ ಶಾಸಕರು ಬಂಡಾಯ ಎದ್ದಿದ್ದರೆ, ಇನ್ನೊಂದೆಡೆ ಶಿವಸೇನೆಯ ಹಲವು ಸಂಸದರೂ ಉದ್ಧವ್‌ ಠಾಕ್ರೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಇವರೆಲ್ಲ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದೂ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಇನ್ನು ಬಂಡಾಯ ಎದ್ದ ಏಕನಾಥ್‌ ಶಿಂಧೆಗೆ ಕೇವಲ ತಮ್ಮ ಪಕ್ಷದ ಶಾಸಕರಷ್ಟೇ ಅಲ್ಲ, ಸ್ವತಂತ್ರ ಶಾಸಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಉದ್ಧವ್‌ ಠಾಕ್ರೆ ಈಗಾಗಲೇ ತಮ್ಮ ಸೋಲನ್ನು ಅರ್ಧದಷ್ಟು ಒಪ್ಪಿಕೊಂಡಿದ್ದು, ಅವರು ನಿನ್ನೆ ರಾತ್ರಿಯೇ ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದು, ಖಾಸಗಿ ನಿವಾಸ ಸೇರಿಕೊಂಡಿದ್ದಾರೆ. ಯಾವಾಗ ಬೇಕಾದರೂ ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದಾರೆ.

ನನಗೇನೂ ಗೊತ್ತಿಲ್ಲ ಎನ್ನುತ್ತಿದೆ ಬಿಜೆಪಿ
ಶಿವಸೇನೆಯಲ್ಲಿ ಆಗುತ್ತಿರುವ ಈ ಬೆಳವಣಿಗೆಗೂ ನಮಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಹೀಗೆ ಶಾಸಕರೆಲ್ಲ ಬಂಡಾಯ ಎದ್ದು ಹೋಗಿರುವುದು ಶಿವಸೇನೆಯ ಆಂತರಿಕ ವಿಚಾರ. ಇದರಲ್ಲಿ ನಮ್ಮ ಪಾತ್ರ ಸ್ವಲ್ಪವೂ ಇಲ್ಲ. ಬಂಡಾಯ ಎದ್ದಿರುವ ಏಕನಾಥ್‌ ಶಿಂಧೆ ಜತೆ ನಾವು ಇದುವರೆಗೂ ಮಾತನಾಡಿಲ್ಲ. ನಾವಂತೂ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲು ಹೋಗುತ್ತಿಲ್ಲ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ರಾವ್‌ಸಾಹೇಬ್‌ ಪಾಟೀಲ್‌ ದಾನ್ವೆ ತಿಳಿಸಿದ್ದಾರೆ. ಇವರು ನಿನ್ನೆ ದೇವೇಂದ್ರ ಫಡ್ನವೀಸ್‌ರನ್ನು ಭೇಟಿಯಾಗಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಮಹಾ ಅʼಗಾಡಿʼ ಸರ್ಕಾರ ಪಂಕ್ಚರ್‌?; ಶುರುವಾದಂತಿದೆ ಆಪರೇಶನ್‌ ಕಮಲ !

Exit mobile version