Site icon Vistara News

Maharashtra Politics: ಶಿವಸೇನೆ ಶಾಸಕರ ಅನರ್ಹತೆ ಕೇಸ್‌ ತೀರ್ಪು ಇಂದು; ‘ಮಹಾ’ ಸಂಚಲನ?

shinde-udhav

shinde-udhav

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಚಟುವಟಿಕೆ ಗರಿಗೆದರಿದೆ. ಪಕ್ಷದಲ್ಲಿನ ವಿಭಜನೆಯ ನಂತರ ಪರಸ್ಪರ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆ ಬಣಗಳು ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ (Rahul Narvekar) ಇಂದು (ಜನವರಿ 10) ನಿರ್ಣಾಯಕ ತೀರ್ಪು ಪ್ರಕಟಿಸಲಿದ್ದಾರೆ. ಈ ನಿರ್ಧಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸರ್ಕಾರ ಮತ್ತು ಪ್ರತಿಸ್ಪರ್ಧಿ ಗುಂಪುಗಳ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ (Maharashtra Politics).

2022ರ ಜೂನ್‌ನಲ್ಲಿ ಹಿಂದಿನ ಉದ್ಧವ್ ಠಾಕ್ರೆ ಸರ್ಕಾರವನ್ನು ತೊರೆದು ಸಮ್ಮಿಶ್ರ ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿಗರಾದ 36 ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯ ಬಗ್ಗೆ ಈ ತೀರ್ಪು ಹೊರ ಬರಲಿದೆ. ಈ ಮಧ್ಯೆ ರಾಹುಲ್ ನಾರ್ವೇಕರ್ ಅವರು ರಾಜಕೀಯ ಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವುದರೊಂದಿಗೆ ರಾಜಕೀಯ ನಾಟಕಕ್ಕೆ ಮಹತ್ವದ ತಿರುವು ನೀಡುವ ಸೂಚನೆ ನೀಡಿದ್ದಾರೆ.

ಶಿಂಧೆ ವಿರುದ್ಧ ತೀರ್ಪು ಬಂದರೆ ಏನಾಗಲಿದೆ?

ತೀರ್ಪು ಏಕನಾಥ್ ಶಿಂಧೆ ಮತ್ತು ಅವರ ಬಣದ ವಿರುದ್ಧ ಬಂದರೂ ಸರ್ಕಾರಕ್ಕೆ ಸದ್ಯ ಯಾವುದೇ ಅಪಾಯವಿಲ್ಲ. 288 ಸದಸ್ಯರ ಸದನದಲ್ಲಿ 105 ಶಾಸಕರನ್ನು ಹೊಂದಿರುವ ಬಿಜೆಪಿ, ಎನ್‌ಸಿಪಿಯ 38 ಶಾಸಕರು (ಅಜಿತ್ ಪವಾರ್ ಗುಂಪು) ಮತ್ತು ಕೆಲವು ಸ್ವತಂತ್ರರ ಬೆಂಬಲವನ್ನು ಹೊಂದಿದೆ. ಹೀಗಾಗಿ ಸರ್ಕಾರಕ್ಕೆ ತಕ್ಷಣಕ್ಕೆ ಅಪಾಯವಿಲ್ಲ. ಶಿವಸೇನೆ ವಿಭಜನೆಯಾದ ಬಳಿಕ ಬಿಜೆಪಿಯ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯನ್ನೂ ವಿಭಜಿಸಿದರು ಎನ್ನುವ ಮಾತುಗಳೂ ಕೇಳಿ ಬಂದಿವೆ.

ಈ ಮಧ್ಯೆ ಮುಖ್ಯಮಂತ್ರಿ ಶಿಂಧೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರನ್ನು ಭೇಟಿಯಾಗಿರುವುದು ಉದ್ಧವ್‌ ಠಾಕ್ರೆ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪೀಕರ್‌ ಆದವರು ನ್ಯಾಯಯುತ ಮತ್ತು ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಇದರ ನಂಬಿಕೆ ಇಲ್ಲದ ಕಾರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವುದಾಗಿ ಉದ್ಧವ್‌ ಠಾಕ್ರೆ ಬಣ ತಿಳಿಸಿದೆ. ʼʼಅನರ್ಹತೆ ಅರ್ಜಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಮೇ ತಿಂಗಳಲ್ಲಿ ನರ್ವೇಕರ್ ಅವರಿಗೆ ನಿರ್ದೇಶನ ನೀಡಿದಾಗಿನಿಂದ, ಸ್ಪೀಕರ್ ಮುಖ್ಯಮಂತ್ರಿಯನ್ನು ಎರಡು ಬಾರಿ ಭೇಟಿ ಮಾಡಿದ್ದಾರೆʼʼ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ದೇವೇಂದ್ರ ಫಡ್ನವೀಸ್ ಹೇಳಿದ್ದೇನು?

ಶಿವಸೇನೆ-ಬಿಜೆಪಿ-ಎನ್‌ಸಿಪಿ (ಅಜಿತ್ ಪವಾರ್ ಗುಂಪು) ಸರ್ಕಾರವು ಸ್ಥಿರವಾಗಿ ಮುಂದುವರಿಯುವ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರವು ಕಾನೂನುಬದ್ಧವಾಗಿದ್ದು, ಸ್ಪೀಕರ್ ತೀರ್ಪು ನ್ಯಾಯ ಒದಗಿಸಲಿದ್ದಾರೆ ಎಂದು ಅವರು ಒತ್ತಿ ಹೇಳಿದ್ದಾರೆ. “ಸ್ಪೀಕರ್ ಸರಿಯಾದ ಮತ್ತು ಕಾನೂನು ಬದ್ಧ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾವು ರಚಿಸಿದ ಸರ್ಕಾರ ಕಾನೂನುಬದ್ಧವಾಗಿದೆ. ನಮ್ಮ ಸರ್ಕಾರ ನಿನ್ನೆ ಸ್ಥಿರವಾಗಿತ್ತು ಮತ್ತು ಅದು ನಾಳೆಯೂ ಸ್ಥಿರವಾಗಿರುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ?

2022ರಲ್ಲಿ ಶಿವಸೇನೆಯು ಇಬ್ಭಾಗವಾಗಿತ್ತು. ಬಿಜೆಪಿಯ ಜತೆ ಕೈ ಜೋಡಿಸಿದ್ದ ಶಿವಸೇನೆಯ ಹಿರಿಯ ನಾಯಕ ಏನನಾಥ ಸಿಂಧೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ಶಿವಸೇನೆಯ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನಗೊಂಡಿತ್ತು. ಬಳಿಕ ಶಿವಸೇನೆಯ ಎರಡೂ ಬಣದವರು ಪರಸ್ಪರ ಅನರ್ಹತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಚುನಾವಣಾ ಆಯೋಗವು ಶಿಂಧೆ ನೇತೃತ್ವದ ಬಣಕ್ಕೆ ‘ಶಿವಸೇನೆ’ ಹೆಸರು ಮತ್ತು ‘ಬಿಲ್ಲು ಬಾಣ’ ಚಿಹ್ನೆಯನ್ನು ನೀಡಿತ್ತು. ಬಳಿಕ ಉದ್ಧವ್‌ ಠಾಕ್ರೆ ನೇತೃತ್ವದ ಬಣ ಶಿವಸೇನೆ (Uddhav Balasaheb Thackeray-UBT)ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು. ಕಳೆದ ವರ್ಷ ಜುಲೈಯಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಬಣವೂ ಶಿಂಧೆ ನೇತೃತ್ವದ ಸರ್ಕಾರವನ್ನು ಸೇರಿಕೊಂಡಿತು. ಮಹಾರಾಷ್ಟ್ರದಲ್ಲಿ 2024ರ ದ್ವಿತೀಯಾರ್ಧದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Lok Sabha Election: ಸೀಟ್ ಹಂಚಿಕೆ; ಶಿವಸೇನೆ, ಕಾಂಗ್ರೆಸ್ ಮಧ್ಯೆ ವಾಕ್ಸಮರ

Exit mobile version