ಮುಂಬೈ: ಪಬ್ಜಿ ಆಡುವಾಗ ಪರಿಚಯವಾದ ಗ್ರೇಟರ್ ನೊಯ್ಡಾದ ಸಚಿನ್‌ಗಾಗಿ ಪಾಕಿಸ್ತಾನದ ಸೀಮಾ ಹೈದರ್ ಭಾರತಕ್ಕೆ ಬಂದಿರುವ, ಫೇಸ್‌ಬುಕ್ ಗೆಳೆಯನಿಗಾಗಿ ರಾಜಸ್ಥಾನದ ಅಂಜು ಪಾಕಿಸ್ತಾನಕ್ಕೆ ತೆರಳಿರುವ ಪ್ರೇಮ ಪ್ರಕರಣಗಳು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಮಹಾರಾಷ್ಟ್ರದ ಮಹಿಳೆಯೊಬ್ಬರು (Maharashtra Woman) ಬಾಯ್‌ಫ್ರೆಂಡ್‌ಗಾಗಿ ಪಾಕಿಸ್ತಾನಕ್ಕೆ ತೆರಳಿರುವ ಪ್ರಕರಣ ಸುದ್ದಿಯಾಗಿದೆ. ಅಷ್ಟೇ ಅಲ್ಲ, ಆ ಮಹಿಳೆಗೆ ಉಗ್ರರ ನಂಟಿರುವ (Terror Link) ಶಂಕೆ ವ್ಯಕ್ತವಾಗಿದೆ.
ಹೌದು, ಮಹಾರಾಷ್ಟ್ರದ ಸಂಭಾಜಿ ನಗರ ನಿವಾಸಿಯಾದ ಅಫ್ರಿನ್ ಶೇಖ್ ಎಂಬ 32 ವರ್ಷದ ಮಹಿಳೆಯು ದುಬೈ ಮೂಲಕ ಪಾಕಿಸ್ತಾನಕ್ಕೆ ತೆರಳಿರುವ, ಆಕೆ ಉಗ್ರರ ಜತೆ ನಂಟು ಹೊಂದಿರುವ ಕುರಿತು ಮಹಾರಾಷ್ಟ್ರ ಪೊಲೀಸರಿಗೆ ಅನಾಮಧೇಯ ಇ-ಮೇಲ್ ಬಂದಿದೆ. ಹಾಗಾಗಿ, ಮುಂಬೈ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಅಫ್ರಿನ್ ಶೇಖ್ 2022ರ ಡಿಸೆಂಬರ್‌ನಲ್ಲಿಯೇ ದುಬೈಗೆ ತೆರಳಿದ್ದಾಳೆ. ಆಕೆ ವಾಪಸ್ ಬರದ ಕಾರಣ ಪತಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಅಫ್ರಿನ್ ಶೇಖ್ ದುಬೈನಿಂದ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಪಾಕಿಸ್ತಾನದಲ್ಲಿ ಬಾಯ್‌ಫ್ರೆಂಡ್‌ನನ್ನು ಮದುವೆಯಾಗಿ ನಂತರ ಲಿಬಿಯಾಗೆ ತೆರಳಿದ್ದಾಳೆ. ಅಲ್ಲಿ ಆಕೆಗೆ ಉಗ್ರ ಸಂಘಟನೆಯೊಂದು ತರಬೇತಿ ನೀಡುತ್ತಿದೆ ಎಂಬುದಾಗಿ ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಉಗ್ರ ನಿಗ್ರಹ ದಳ, ಪೊಲೀಸರು, ಗುಪ್ತಚರ ಇಲಾಖೆ ಅಧಿಕಾರಿಗಳು ಮಹಿಳೆಯ ಪ್ರವಾಸ, ಆಕೆ ಉಗ್ರರ ಜತೆ ಹೊಂದಿರುವ ನಂಟಿನ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Anju Love Story: ತಪ್ಪಾಗಿದೆ, ಭಾರತಕ್ಕೆ ಬರುವೆ; ನಸ್ರುಲ್ಲಾನಿಗಾಗಿ ಪಾಕ್‌ಗೆ ಹೋದ ಅಂಜು ಯುಟರ್ನ್
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಸಿಕ್ ಜಿಲ್ಲೆಯ ಮಹಿಳೆಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನಕ್ಕೆ ತೆರಳಿದ ಮಹಿಳೆಯ ಪತಿ ಮತೀನ್ ಚೌಧರಿಯು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ಆಕೆ ಪಾಕಿಸ್ತಾನದಲ್ಲಿದ್ದಾಳೋ, ಸ್ಪೇನ್‌ನಲ್ಲಿದ್ದಾಳೋ ಗೊತ್ತಿಲ್ಲ. ಆದರೆ, ಆಕೆ ನನಗೆ ಮೋಸ ಮಾಡಿ ಹೋಗಿದ್ದಾಳೆ. 2022ರ ಡಿಸೆಂಬರ್‌ನಲ್ಲಿ ಆಕೆ ನಮ್ಮನ್ನೆಲ್ಲ ತೊರೆದು ಹೋಗಿದ್ದಾಳೆ. ಪೊಲೀಸರಿಗೂ ಈ ಮಾಹಿತಿ ನೀಡದ್ದೇನೆ” ಎಂದು ಹೇಳಿದ್ದಾರೆ. ಮಹಿಳೆಗೆ ನಾಲ್ವರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.