ನಮ್ಮ ದೇಶವೇ ಹಾಗೆ, ಜನವರಿ ಬಂದಾಕ್ಷಣ ಹಬ್ಬ ಹರಿದಿನಗಳು ಸಾಲುಗಟ್ಟಿ ನಿಲ್ಲುತ್ತವೆ. ಕ್ಯಾಲೆಂಡರ್ ಹೊಸ ವರ್ಷದ ನಂತಹ ಬಹಳ ಜನರು ಸಾಂಪ್ರದಾಯಿಕವಾಗಿ ಹೊಸವರ್ಷವೆಂದು ಮಕರ ಸಂಕ್ರಾತಿಯನ್ನು ಕಾಣುವ ನಂಬಿಕೆಯೂ ಇದೆ. ಜಗಕ್ಕೆ ಬೆಳಕು ನೀಡುವ ಸೂರ್ಯನೆಂಬ ಕಣ್ಣಿಗೆ ಕಾಣುವ ಭಗವಂತನನ್ನು ಪೂಜಿಸುವ ಹಬ್ಬವೂ ಹೌದು. ಆಗಷ್ಟೇ ಕಟಾವು ಮಾಡಿದ ಹೊಸ ಬೆಳೆಯನ್ನು ತಿನಿಸು ಮಾಡಿ ಭಗವಂತನಿಗರ್ಪಿಸಿಸ ತಿನ್ನುವ ಕೃಷಿಕರ ಹಬ್ಬವೂ ಹೌದು. ಸಂಕ್ರಾಂತಿ ಬಂತೆಂದರೆ, ಇನ್ನು ಚಳಿಗಾಲ ನಿಧಾನವಾಗಿ ಕಡಿಮೆಯಾಗುತ್ತಾ ಬರುವುದೆಂಬ ನಂಬಿಕೆಯೂ ನಿಜವೇ.
ದೇಶದ ಉತ್ತರದಿಂದ ದಕ್ಷಿಣದವರೆಗೆ ಎಲ್ಲ ರಾಜ್ಯಗಳಲ್ಲೂ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆದರೆ ನಾನಾ ರಾಜ್ಯಗಳಲ್ಲಿ ನಾನಾ ಹೆಸರಿನಿಂದ ಕರೆಯಲ್ಪಡುತ್ತದೆ. ಆದರೆ, ಬಹುತೇಕ, ಎಲ್ಲ ರಾಜ್ಯಗಳಲ್ಲಿ ಈ ಸಂದರ್ಭ ಮಾಡಲಾಗುವ ತಿನಿಸುಗಳು, ಆಚರಣೆಗಳು ಎಲ್ಲವಕ್ಕೂ ಹೋಲಿಕೆ ಇದೆ. ಹಾಗಾದರೆ, ಬೇರೆ ಬೇರೆ ರಾಜ್ಯಗಳ ಬೇರೆ ಬೇರೆ ಬಗೆಯ ಸಂಕ್ರಾಂತಿಯ ಆಚರಣೆಯ ಬಗೆಯನ್ನು ಇಲ್ಲಿ ನೋಡೋಣ.
ಗುಜರಾತಿನಲ್ಲಿ ಉತ್ತರಾಯಣ: ಸಂಕ್ರಾಂತಿ ಹಬ್ಬ ಗುಜರಾತಿನ ಮಂದಿಗೆ ಉತ್ತರಾಯಣ. ಗಾಳಿಪಟ ಹಾರಿಸುವುದು ಉತ್ತರಾಯಣದ ಪ್ರಮುಖ ಆಚರಣೆಗಳಲ್ಲಿ ಒಂದು. ಬಹುತೇಕ ಎಲ್ಲರೂ, ಉತ್ತರಾಯಣ ಬಂದಾಗ ತಮ್ಮ ತಮ್ಮ ಮನೆಗಳ ಟೆರೇಸುಗಳ ಮೇಲೆ, ಬಾಲ್ಕನಿಗಳಲ್ಲಿ ಹಿರಿಯರು ಮಕ್ಕಳಾದಿಯಾಗಿ ಎಲ್ಲರೂ ಗಾಳಿಪಟ ಹಾರಿಸುತ್ತಾ ಸಂಭ್ರಮಿಸುತ್ತಾರೆ. ಉಂಡಿಯು ಎಂಬ ತಿನಿಸನ್ನೂ ಮಾಡಿ ತಿನ್ನುವ, ನಲೆಗಡಲೆ ಹಾಗೂ ಎಳ್ಳಿನ ಚಿಕ್ಕಿಗಳನ್ನೂ ಜಿಲೇಬಿಗಳನ್ನೂ ತಿನ್ನುತ್ತಾರೆ.
ತಮಿಳುನಾಡಿನಲ್ಲಿ ಪೊಂಗಲ್: ತಮಿಳುನಾಡಿನ ಮಂದಿಗೆ ಸಂಕ್ರಾಂತಿ ಎಂದರೆ ಪೊಂಗಲ್. ತಮಿಳುನಾಡಿನಾದ್ಯಂತ ಜನರು ಪೊಂಗಲ್‌ನ ದಿನ ತಮ್ಮ ತಮ್ಮ ಮನೆಗಳಲ್ಲಿ ವಿಶೇಷ ಅಲಂಕಾರಗಳೊಂದಿಗೆ ಅಕ್ಕಿ ಹಾಗೂ ಬೇಳೆ ಹಾಕಿ ಸಿಹಿ ಪೊಂಗಲ್ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಅಕ್ಕಿ, ಹಾಲು, ಎಳ್ಳು, ಬೆಲ್ಲ ಹಾಕಿ ಸಿಹಿ ತಿನಿಸನ್ನೂ ಮಾಡಲಾಗುತ್ತದೆ. ನಾಲ್ಕು ದಿನಗಳ ಕಾಲ ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಆಚರಿಸುವ ತಮಿಳುನಾಡಿನ ಮಂದಿಗೆ ಪೊಂಗಲ್ ಎಂದರೆ ಹೊಸವರ್ಷಾಚರಣೆ.
ಅಸ್ಸಾಂನ ಮಂದಿಗೆ ಬಿಹು: ಮಕರ ಸಂಕ್ರಾಂತಿ ಅಸ್ಸಾಂನ ಮಂದಿಗೆ ಮಾಘ ಬಿಹು ಅಥವಾ ಭೋಗಲಿ ಬಿಹು. ಮಾಘ ಮಾಸದಲ್ಲಿ ನಡೆಯುವುದರಿಂದ ಇದನ್ನು ಮಾಘ ಬಿಹು ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಬಿದಿರಿನಿಂದ ವಿಶೇಷವಾಗಿ ಅಲಂಕರಿಸಿ ಪ್ರತಿ ಮನೆಮನೆಯಲ್ಲೂ ಬಿಹುವಿಗೆ ವಿಶೇಷ ತಿನಿಸನ್ನು ಮಾಡಲಾಗುತ್ತದೆ. ಕುಣಿತ, ಮಡಕೆ ಒಡೆಯುವ ಆಟ ತೇಕಳಿ ಭೋಂಗ ಹಾಗೂ ಕೋಣನ ಓಟ ಕೂಡಾ ಬಿಹುವಿನ ಪ್ರಮುಖ ಆಕರ್ಷಣೆ.
ಪಂಜಾಬಿನಲ್ಲಿ ಲೋಹ್ರಿ(ಲೋಡಿ): ಮಕರ ಸಂಕ್ರಾಂತಿ ಪಂಜಾಬಿನಲ್ಲೂ ಭರ್ಜರಿ ಉತ್ಸಾಹದಿಂದಲೇ ಆಚರಿಸಲ್ಪಡುತ್ತದೆ. ಆದರೆ ಹೆಸರು ಮಾತ್ರ ಲೋಹ್ರಿ. ಲೋಹ್ರಿಯ ದಿನ ಪಂಜಾಬ್ ಬಣ್ಣಗಳಲ್ಲಿ ಮಿಂದೇಳುತ್ತದೆ. ಜೊತೆಗೆ ನೃತ್ಯ, ಸಂಗೀತ, ಕುಣಿತ ಲೋಹ್ರಿಯ ಮುಖ್ಯ ಭಾಗ. ಮಕ್ಕಳು ಮನೆಮನೆಗೆ ತೆರಳಿ ಸಿಹಿತಿಂಡಿ, ಪಾಪ್‌ಕಾರ್ನ್, ನೆಲಗಡಲೆ, ಎಳ್ಳಿನ ಗಜಕ್ ಇತ್ಯಾದಿಗಳನ್ನು ಸಂಗ್ರಹ ಮಾಡುವುದು ಪದ್ಧತಿ. ರಾತ್ರಿ ಅಗ್ಗಿಷ್ಟಿಗೆಯ ಮುಂದೆ ಬಾಂಗ್ಡಾ ನೃತ್ಯವೂ ಕೂಡ ಖಂಡಿತ ಇದ್ದೇ ಇರುತ್ತದೆ. ಕೇವಲ ಪಂಜಾಬ್‌ನಲ್ಲಷ್ಟೇ ಅಲ್ಲ, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಹಾಗೂ ಇತರ ಎಲ್ಲ ರಾಜ್ಯಗಳಲ್ಲೂ ಬೆಂಕಿ ಹಾಕಿ ಸುತ್ತ ನೆರೆದು ಕುಣಿಯುವುದುದ ಸಂಕ್ರಾಂತಿಯ ಆಚರಣೆಯ ಬಹುಮುಖ್ಯವಾದ ಆಚರಣೆ.
ಹಿಮಾಚಲದಲ್ಲಿ ಮಾಘ ಸಾಜಿ: ಹಿಮಾಚಲ ಪ್ರದೇಶದ ಮಂದಿಯ ಪಾಲಿಗೆ ಸಂಕ್ರಾಂತಿ ಮಾಘ ಸಾಜಿ. ಮಾಘ ಮಾಸ ಆರಂಭದ ಹಬ್ಬ. ಹಾಗಾಗಿ, ತೀರ್ಥಸ್ನಾನ ಸೇರಿದಂತೆ ಹಲವು ಆಚರಣೆಗಳನ್ನು ಹಿಮಾಚಲ ಪ್ರದೇಶದ ಮಂದಿಯೂ ಮಾಡುತ್ತಾರೆ.
ಜಾರ್ಖಂಡ್ ಹಾಗೂ ಬಿಹಾರದ ಮಂದಿಗೆ ಖಿಚಡಿ ಪರ್ವ್: ಬಿಹಾರ ಹಾಗೂ ಜಾರ್ಖಂಡದಲ್ಲಿ ಮಕರ ಸಂಕ್ರಾತಿಯನ್ನು ಖಿಚಡಿ ಪರ್ವ ಎಂಬ ಹೆಸರಿನಿಂದ ಆಚರಿಸುತ್ತಾರೆ. ಹೆಸರು ಬೇರೆಯಾದರೂ ಆಚರಣೆ ಮಾತ್ರ ಹೆಚ್ಚು ಕಡಿಮೆ ಒಂದೇ> ಪುಣ್ಯನದಿಗಳಲ್ಲಿ ಸ್ನಾನ, ಗಾಳಿಪಟವನ್ನು ಹಾರಿಸುವುದು, ಬೆಂಕಿ ಹಾಕುವುದುದ, ಖಿಚಡಿ ಮಾಡುವುದುದ ಇತ್ಯಾದಿ ಇತ್ಯಾದಿ ಸಂಭ್ರಮಗಳು ಇದರಲ್ಲಿದೆ.
ಉತ್ತರ ಪ್ರದೇಶದಲ್ಲಿ ಕಿಚೇರಿ: ಉತ್ತರ ಪ್ರದೇಶ ಹೇಳಿ ಕೇಳಿ ತ್ರಿವೇಣಿ ಸಂಗಮಗಳ, ಗಂಗಾ ನದಿಯ ಪುಣ್ಯಭೂಮಿ. ಹಾಗಾಗಿ ಇಲ್ಲಿ ಸಹಜವಾಗಿಯೇ ಸಂಕ್ರಾಂತಿಯ ದಿನಗಳಲ್ಲಿ ಪುಣ್ಯಸ್ನಾನ ಆಚರಣೆಯ ಪ್ರಮುಖ ಭಾಗ. ಅಲಹಾಬಾದ್, ವಾರಣಾಸಿ ಹಾಗೂ ಉತ್ತರಾಖಂಡದ ಹರಿದ್ವಾರಗಳಲ್ಲಿ ಮಿಲಿಯಗಟ್ಟಲೆ ಮಂದಿ ಹಬ್ಬದ ಸ್ನಾನ ಮಾಡುವ ಸಂಭ್ರಮ ಹೆಚ್ಚು. ಹೊಸ ಬಟ್ಟೆಗಳನ್ನು ಧರಿಸಿ ಗಾಳಿಪಟ ಹಾರಿಸುವ ಖುಷಿಯಂತೂ ಎಲ್ಲರಂತೆ ಇವರದ್ದು.