Site icon Vistara News

Make In India: ಆಮದು ನಿಷೇಧ; ಭಾರತದಲ್ಲೇ ಲ್ಯಾಪ್‌ಟಾಪ್‌ ಉತ್ಪಾದಿಸಲು ವಿದೇಶಿ ಕಂಪನಿಗಳ ಆಸಕ್ತಿ

Laptops Production In India

Make In India: 38 IT firms apply to make laptops, PCs under PLI scheme

ನವದೆಹಲಿ: ಕೇಂದ್ರ ಸರ್ಕಾರವು ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ (Laptop Ban) ಸೇರಿ ಹಲವು ಎಲೆಕ್ಟ್ರಾನಿಕ್‌ ಉತ್ಪನ್ನಗಳ ಆಮದು ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಭಾರತದಲ್ಲಿಯೇ ಲ್ಯಾಪ್‌ಟಾಪ್‌ಗಳನ್ನು ಉತ್ಪಾದಿಸಲು ಸುಮಾರು 38 ವಿದೇಶಿ ಐಟಿ ಕಂಪನಿಗಳು ಆಸಕ್ತಿ ತೋರಿವೆ. ಆ ಮೂಲಕ ಭಾರತದಲ್ಲಿಯೇ ಲ್ಯಾಪ್‌ಟಾಪ್‌ಗಳನ್ನು ಉತ್ಪಾದಿಸಿ, ಮೇಕ್‌ ಇನ್‌ ಇಂಡಿಯಾಗೆ (Make In India) ಒತ್ತು ನೀಡಬೇಕು ಎನ್ನುವ ಕೇಂದ್ರ ಸರ್ಕಾರದ ಉದ್ದೇಶಕ್ಕೆ ಭಾರಿ ಮುನ್ನಡೆ ಸಿಕ್ಕಂತಾಗಿದೆ.

ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಇನ್ಸೆಂಟಿವ್‌ (PLI Scheme) ಯೋಜನೆ ಅಡಿಯಲ್ಲಿ ಭಾರತದಲ್ಲಿಯೇ ಲ್ಯಾಪ್‌ಟಾಪ್‌, ಪರ್ಸನಲ್‌ ಕಂಪ್ಯೂಟರ್‌ ಹಾಗೂ ಸರ್ವರ್‌ಗಳನ್ನು ಉತ್ಪಾದಿಸಲು ವಿದೇಶದ ಕಂಪನಿಗಳು ಸೇರಿ ಒಟ್ಟು 38 ಕಂಪನಿಗಳು ಆಸಕ್ತಿ ತೋರಿವೆ. ಆ್ಯಸಸ್‌, ಡೆಲ್‌, ಎಚ್‌ಪಿ, ಫಾಕ್ಸ್‌ಕಾನ್‌ ಸೇರಿ ಹಲವು ಕಂಪನಿಗಳು ಭಾರತದಲ್ಲಿಯೇ ಉತ್ಪಾದನೆ ಮಾಡಲು ಅರ್ಜಿ ಸಲ್ಲಿಸಿವೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ.

75 ಸಾವಿರ ಜನರಿಗೆ ಉದ್ಯೋಗ

“ಐಟಿ ಹಾರ್ಡ್‌ವೇರ್‌ ಪಿಎಲ್‌ಐ ಯೋಜನೆ ಅಡಿಯಲ್ಲಿ ಭಾರತದಲ್ಲಿಯೇ ಏಸರ್‌, ಲೆನೋವೊ, ಡೆಲ್‌ ಸೇರಿ ವಿದೇಶಿ ಕಂಪನಿಗಳಿಗೆ ಲ್ಯಾಪ್‌ಟಾಪ್‌, ಪಿಸಿ, ಟ್ಯಾಬ್ಲೆಟ್‌ಗಳ ಉತ್ಪಾದನೆಗೆ ಅವಕಾಶ ನೀಡಿದರೆ ದೇಶೀಯವಾಗಿಯೇ 3.35 ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಉತ್ಪಾದಿಸಬಹುದು. ಇದರಿಂದ 75 ಸಾವಿರ ಜನರಿಗೆ ಉದ್ಯೋಗವೂ ದೊರಕಲಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Laptop Import: ಲ್ಯಾಪ್‌ಟಾಪ್‌ ಆಮದು ನಿರ್ಬಂಧ ಮುಂದೂಡಿದ ಕೇಂದ್ರ; ಈ ಕಂಡಿಷನ್ಸ್‌ ಅಪ್ಲೈ

ಕೇಂದ್ರ ಸರ್ಕಾರ ಮೊದಲು ಹೊರಡಿಸಿದ ಆದೇಶದಂತೆ 2023ರ ಅಕ್ಟೋಬರ್‌ 1ರಿಂದ ಲ್ಯಾಪ್‌ಟಾಪ್‌, ಪಿಸಿ, ಟ್ಯಾಬ್ಲೆಟ್‌ಗಳನ್ನು ಆಮದು ಮಾಡಿಕೊಳ್ಳಬೇಕಾದರೆ ಇಂಪೋರ್ಟ್‌ ಲೈಸೆನ್ಸ್‌ಅನ್ನು ಕಡ್ಡಾಯಗೊಳಿಸಿತ್ತು. ಈಗ ಅದನ್ನು ನವೆಂಬರ್‌ 1ಕ್ಕೆ ವಿಸ್ತರಣೆ ಮಾಡಲಾಗಿದೆ. ನವೆಂಬರ್‌ 1ರ ನಂತರ ಆಮದು ಪರವಾನಗಿ ಹೊಂದಿರುವವರು ಮಾತ್ರ ಗರಿಷ್ಠ 20 ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಸಂಶೋಧನೆ, ಅಭಿವೃದ್ಧಿ, ತಪಾಸಣೆ, ರಿಪೇರಿ, ಮತ್ತೆ ರಫ್ತು ಮಾಡುವುದು ಹಾಗೂ ಉತ್ಪನ್ನಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪರವಾನಗಿ ಇರುವವರಿಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

Exit mobile version