ನವದೆಹಲಿ: ಥಾಯ್ಲೆಂಡ್(Thailand), ಶ್ರೀಲಂಕಾ (Sri Lanka) ಬೆನ್ನಲ್ಲೇ ಮಲೇಷ್ಯಾ (Malaysia) ಕೂಡ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಕ್ಕೆ (Visa-free Travel) ಅವಕಾಶ ಕಲ್ಪಿಸುವುದಾಗಿ ಘೋಷಿಸಿದೆ. ಡಿಸೆಂಬರ್ 1 ರಿಂದ ಭಾರತದಿಂದ ಬರುವ ಪ್ರವಾಸಿಗರಿಗೆ 30 ದಿನಗಳ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಈ ನಿಯಮವೂ ಚೀನಿಯರಿಗೆ ಅನ್ವಯಿಸುತ್ತದೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ (Prime Minister Anwar Ibrahim) ಅವರು ಭಾನುವಾರ ಹೇಳಿದ್ದಾರೆ.
ಶ್ರೀಲಂಕಾ ಮತ್ತು ಥಾಯ್ಲೆಂಡ್ ನಂತರ ಭಾರತೀಯ ನಾಗರಿಕರಿಗೆ ವೀಸಾ-ಮುಕ್ತ ಪ್ರಯಾಣವನ್ನು ಅನುಮತಿಸಿದ ಏಷ್ಯಾದ ಮೂರನೇ ದೇಶ ಮಲೇಷ್ಯಾ ಎನಿಸಿಕೊಂಡಿದೆ. ಪ್ರಸ್ತುತ, ಸೌದಿ ಅರೇಬಿಯಾ, ಬಹ್ರೇನ್, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಇರಾನ್, ಟರ್ಕಿ ಮತ್ತು ಜೋರ್ಡಾನ್‌ನ ಪ್ರಯಾಣಿಕರು ಮಲೇಷ್ಯಾದಿಂದ ವೀಸಾ ವಿನಾಯ್ತಿಯನ್ನು ಅನುಭವಿಸುತ್ತಿದ್ದಾರೆ.
ಆದಾಗ್ಯೂ, ಭಾರತೀಯ ಮತ್ತು ಚೀನಾದ ನಾಗರಿಕರಿಗೆ ವೀಸಾ ವಿನಾಯಿತಿ ಭದ್ರತಾ ಅನುಮತಿಗೆ ಒಳಪಟ್ಟಿರುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಕ್ರಿಮಿನಲ್ ದಾಖಲೆ ಮತ್ತು ಹಿಂಸಾಚಾರದ ಅಪಾಯ ಹೊಂದಿರುವವರಿಗೆ ಈ ವೀಸಾ ವಿನಾಯ್ತಿ ಲಭ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಮುಕ್ತ ವೀಸಾ ಪ್ಲ್ಯಾನ್ ಕುರಿತು ಹೆಚ್ಚಿನ ಮಾಹಿತಿಯನ್ನು ಮಲೇಷ್ಯಾ ಗೃಹ ಸಚಿವ ಸೈಫುದ್ದೀನ್ ಇಸ್ಮಾಯಿಲ್ ಅವರು ನೀಡಲಿದ್ದಾರೆಂದು ತಿಳಿಸಿದರು.
ನವೆಂಬರ್ 24 ರಂದು ಚೀನಾ, 2023ರ ಡಿಸೆಂಬರ್ 1ರಿಂದ 2024ರ ನವೆಂಬರ್ 30 ರ ವರೆಗೆ ಮಲೇಷಿಯನ್ನರಿಗೆ 15 ದಿನಗಳ ವೀಸಾ-ಮುಕ್ತ ನೀತಿಯನ್ನು ಘೋಷಿಸಿದೆ. ಚೀನಾ ಸರ್ಕಾರದ ಈ ನೀತಿಗೆ ಧನ್ಯವಾದ ತಿಳಿಸಿರುವ ಮಲೇಷ್ಯಾ ಪ್ರಧಾನಿ ಅನವರ್, “ಮುಂದಿನ ವರ್ಷ, ಮಲೇಷ್ಯಾ ಚೀನಾದೊಂದಿಗೆ 50 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಆಚರಿಸಲಿದೆ” ಎಂದು ಹೇಳಿದರು.
ಆಸಿಯಾನ್- ಇಂಡಿಯಾ ಮೀಡಿಯಾ ಎಕ್ಸ್‌ಚೇಂಜ್ ಪ್ರೋಗ್ರಾಮ್ ಹಿನ್ನೆಲೆಯಲ್ಲಿ ಈ ವೀಸಾ ವಿನಾಯ್ತಿಯನ್ನು ಮಲೇಷ್ಯಾ ಘೋಷಿಸಿದೆ. ಮಲೇಷ್ಯಾದಲ್ಲಿರುವ ಭಾರತೀಯ ಹೈಕಮಿಷನರ್ ಬಿ ಎನ್ ರೆಡ್ಡಿ ಅವರು, ಮಲೇಷ್ಯಾದೊಂದಿಗೆ ಭಾರತದ ಸಂಬಂಧವು ಅತ್ಯಂತ ಅಮೂಲ್ಯವಾಗಿದೆ ಎಂದು ಹೇಳಿದರು. ಈ ಸಂಬಂಧವು ಪ್ರಾದೇಶಿಕವಾಗಿ ಮಹತ್ವ ಪಡೆದಿದ್ದು ಮಾತ್ರವಲ್ಲೇ, ಭಾರತೀಯ ಸಮುದಾಯದ ಸಂಪರ್ಕ ಮತ್ತು ವರ್ಧಿತ ಕಾರ್ಯತಂತ್ರದ ಪಾಲುದಾರಿಯನ್ನು ಅರಿತುಕೊಳ್ಳುವ ಎರಡೂ ಸರ್ಕಾರಗಳ ಬಯಕೆಯಿಂದ ಇದು ಬಹಳ ಮುಖ್ಯವಾದ ಸಂಬಂಧವಾಗಿದೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Actor Rajinikanth: ರಜನಿಯನ್ನು ಸೂಪರ್‌ಸ್ಟಾರ್ ಸ್ಟೈಲಿನಲ್ಲೇ ಸ್ವಾಗತಿಸಿದ ಮಲೇಷ್ಯಾ ಪ್ರಧಾನಿ! ವಿಡಿಯೋ ವೈರಲ್