Site icon Vistara News

Maldives: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಆಗಮಿಸಿದ ಮಾಲ್ಡೀವ್ಸ್ ಸಚಿವ ಮೂಸಾ ಜಮೀರ್

Maldives

Maldives

ನವದೆಹಲಿ: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಮಾಲ್ಡೀವ್ಸ್ (Maldives)ನ ಸಚಿವ ಮೂಸಾ ಜಮೀರ್ (Moosa Zameer) ಅವರು ದೆಹಲಿಗೆ ಆಗಮಿಸಿದ್ದಾರೆ. ಈ ಅಧಿಕೃತ ಭೇಟಿ ವೇಳೆ ಅವರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪ (Lakshadweep)ಕ್ಕೆ ತೆರಳಿ ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೂಸಾ ಜಮೀರ್ ಅವರ ಭೇಟಿ ಮಹತ್ವದ್ದಾಗಲಿದೆ.

ಭೇಟಿಯ ವೇಳೆ ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ಕೈಗೊಳ್ಳಬೇಕಾದ ಮಾರ್ಗಗಳ ಬಗ್ಗೆಯೂ ಮಾತುಕತೆ ನಡೆಯಲಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಸಾ ಜಮೀರ್ ಅವರನ್ನು ಸ್ವಾಗತಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ. “ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ. ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆಗಳು ಮತ್ತು ನಮ್ಮ ಬಹುಮುಖಿ ಸಂಬಂಧಕ್ಕೆ ಪ್ರಚೋದನೆ ನೀಡುವ ಮಾರ್ಗಗಳ ಬಗ್ಗೆ ಮಾತುಕತೆ ನಡೆಸಲಿದ್ದೇವೆʼʼ ಎಂದು ಬರೆದುಕೊಂಡಿದೆ.

ಮಾಲ್ಡೀವ್ಸ್ ಸಚಿವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಸಭೆ ನಡೆಸಿ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಮಾಲ್ಡೀವ್ಸ್ ಭಾರತದ ಪ್ರಮುಖ ನೆರೆಯ ರಾಷ್ಟ್ರವಾಗಿದೆ ಮತ್ತು ವಿದೇಶಾಂಗ ಸಚಿವ ಜಮೀರ್ ಅವರ ಭೇಟಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರಕ್ಕೆ ಮತ್ತಷ್ಟು ವೇಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮೇ 10ರೊಳಗೆ ಮಾಲ್ಡೀವ್ಸ್‌ನಿಂದ ತನ್ನ ಮಿಲಿಟರಿ ಸಿಬ್ಬಂದಿಯನ್ನು ಹಿಂಪಡೆಯುವುದಾಗಿ ಭಾರತ ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ. ಮೇ 3ರಂದು ಭಾರತ ಮತ್ತು ಮಾಲ್ಡೀವ್ಸ್ ದ್ವಿಪಕ್ಷೀಯ ಉನ್ನತ ಮಟ್ಟದ ಸಭೆ ನಡೆದಿತ್ತು. ಈ ವೇಳೆ ಮೇ 10ರೊಳಗೆ ದ್ವೀಪ ರಾಷ್ಟ್ರದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂಪಡೆಯುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದಕ್ಕೂ ಮೊದಲು ಮೊಹಮ್ಮದ್ ಮುಯಿಝು ನೇತೃತ್ವದ ಮಾಲ್ಡೀವ್ಸ್ ಸರ್ಕಾರವು ಭಾರತವು ಮಾಲೆಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿತ್ತು.

ಇದನ್ನೂ ಓದಿ: Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

ಕಳೆದ ತಿಂಗಳು ಮಾಲ್ಡೀವ್ಸ್‌ನಿಂದ ಭಾರತೀಯ ಸಿಬ್ಬಂದಿಯ ಮೊದಲ ಬ್ಯಾಚ್ ಅನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಭಾರತ ಮತ್ತು ಮಾಲ್ಡೀವ್ಸ್ ಈಗಾಗಲೇ ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದು, ಮೂರನೆಯದು ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ.

Exit mobile version