ನವದೆಹಲಿ: ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟು, ಪ್ರವಾಸೋದ್ಯಮದ ಉತ್ತೇಜನಕ್ಕೆ ಕರೆ ಕೊಟ್ಟ ಬಳಿಕ ಉದ್ಧಟತನ ತೋರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಕೊನೆಗೂ ದುರಹಂಕಾರ ಮರೆತು, ಭಾರತದ ಜತೆ ಕೈಜೋಡಿಸಲು ಮುಂದಾಗಿದ್ದಾರೆ. ಸಾಲ ಮರುಪಾವತಿ ನಿಯಮಗಳಲ್ಲಿ ಭಾರತವು ಸಡಿಲಿಕೆ ಮಾಡಿರುವುದರಿಂದ ಮೊಹಮ್ಮದ್ ಮುಯಿಜು ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ, ಭಾರತದ ಜತೆ ಮುಕ್ತ ವ್ಯಾಪಾರ ಒಪ್ಪಂದ (India Maldives) ಮಾಡಿಕೊಳ್ಳುವ ಆಸಕ್ತಿ ತೋರಿದ್ದಾರೆ.
ಕಳೆದ ಶುಕ್ರವಾರ (ಜುಲೈ 26) ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೊಹಮ್ಮದ್ ಮುಯಿಜು ಮಾತನಾಡಿದರು. “ವಿದೇಶಾಂಗ ನೀತಿಯಲ್ಲಿ ಮಾಲ್ಡೀವ್ಸ್ ಉತ್ತಮ ಸುಧಾರಣೆ ಕಾಣುತ್ತಿದೆ. ಬೇರೆ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳು ಚೆನ್ನಾಗಿವೆ” ಎಂದು ಹೇಳಿದರು. ಇದೇ ವೇಳೆ ಅವರು, “ಮಾಲ್ಡೀವ್ಸ್ ಸಾಲ ಮರುಪಾವತಿ ಕುರಿತು ನಿಯಮ ಸಡಿಲಿಸಿದ ಭಾರತಕ್ಕೆ ಧನ್ಯವಾದಗಳು. ಭಾರತದ ಜತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಭರವಸೆ ಇದೆ” ಎಂದು ಹೇಳಿದ್ದಾರೆ. ಕಳೆದ ತಿಂಗಳು ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲೂ ಮೊಹಮ್ಮದ್ ಮುಯಿಜು ಭಾಗವಹಿಸಿದ್ದರು.
Maldives President Muizzu thanks India for economic support, affirms hope of signing FTA
— ANI Digital (@ani_digital) July 29, 2024
Read @ANI Story | https://t.co/N6VKP9dSbd#maldives #mohamedmuizzu #debt #relief #diplomaticrow #FTA #currency #swap #china pic.twitter.com/m9RC0d4LcR
ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದರು. ಈಗ ಅದರ ಪರಿಣಾಮವನ್ನು ಮಾಲ್ಡೀವ್ಸ್ ಎದುರಿಸುತ್ತಿದೆ.
ಮೊಹಮ್ಮದ್ ಮುಯಿಜು ಚೀನಾ ಪರ ನಿಲುವು
ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ. ಈಗ ಚೀನಾಗೆ ತೆರಳಿರುವ ಮೊಹಮ್ಮದ್ ಮುಯಿಜು, 50 ದಶಲಕ್ಷ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಮೊಹಮ್ಮದ್ ಮುಯಿಜು ಅವರು ಚೀನಾಗೆ ತೆರಳುವ ಕೆಲವೇ ಗಂಟೆಗಳ ಮೊದಲು ಮಾಲ್ಡೀವ್ಸ್ ಸಚಿವರು ಭಾರತದ ವಿರುದ್ಧ ಆರೋಪ ಮಾಡಿರುವುದು ಕೂಡ ಓಲೈಕೆಯ ಸಂಕೇತ ಎನ್ನಲಾಗಿತ್ತು. ಆದರೆ, ಈಗ ಎಲ್ಲವನ್ನು ಮರೆತು ಭಾರತದ ಜತೆ ಒಪ್ಪಂದ ಮಾಡಿಕೊಳ್ಳಲು ಮುಯಿಜು ಮುಂದಾಗಿದ್ದಾರೆ.