Site icon Vistara News

Mohamed Muizzu: ಮುಯಿಜು ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ಆಕ್ರೋಶ!

Maldives Election

Maldives election 2024: President Mohamed Muizzu's litmus test amid anti-India policy

ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು. ಮಾಲ್ಡೀವ್ಸ್‌ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿತ್ತು. ಇದಾದ ಬಳಿಕವೂ ಅಧ್ಯಕ್ಷ ಮೊಹಮ್ಮದ್‌ ಮುಯಿಜು (Mohamed Muizzu) ಅವರು ಭಾರತ ವಿರೋಧಿ ಧೋರಣೆ ಅನುಸರಿಸುತ್ತಿರುವುದಕ್ಕೆ ಮಾಲ್ಡೀವ್ಸ್‌ ಪ್ರತಿಪಕ್ಷಗಳೇ ಆಕ್ರೋಶ ವ್ಯಕ್ತಪಡಿಸುತ್ತಿವೆ.

“ಭಾರತವು ಸುದೀರ್ಘ ಅವಧಿವರೆಗೆ ಮಾಲ್ಡೀವ್ಸ್‌ ಜತೆಗೆ ಉತ್ತಮ ಸಂಬಂಧ, ವ್ಯಾಪಾರ ಒಪ್ಪಂದಗಳನ್ನು ಹೊಂದಿರುವ ದೇಶವಾಗಿದೆ. ಹಾಗಾಗಿ, ನೆರೆಯ ರಾಷ್ಟ್ರಗಳೊಂದಿಗೆ ಮಾಲ್ಡೀವ್ಸ್‌ನ ಹೊಸ ಸರ್ಕಾರವು ಉತ್ತಮ ಬಾಂಧವ್ಯ ಹೊಂದಬೇಕು. ಭಾರತದ ಜತೆಗಿನ ಉತ್ತಮ ಸಂಬಂಧವನ್ನು ಮುಂದುವರಿಸಬೇಕು. ಮಾಲ್ಡೀವ್ಸ್‌ ವಿದೇಶಾಂಗ ನೀತಿಯು ಎಲ್ಲ ದೇಶಗಳೊಂದಿಗೆ ಸಮತೋಲನದಿಂದ ಕೂಡಿರಬೇಕು” ಎಂದು ಮಾಲ್ಡೀವ್ಸ್‌ ಪ್ರತಿಪಕ್ಷಗಳಾದ ಎಂಡಿಪಿ ಹಾಗೂ ಡೆಮಾಕ್ರಟ್ಸ್‌ ಸಂಸದರು ಆಗ್ರಹಿಸಿದ್ದಾರೆ. ಭಾರತ ವಿರೋಧಿ ನೀತಿ, ಮಾಲ್ಡೀವ್ಸ್‌ನಿಂದ ಭಾರತದ ಸೈನಿಕರನ್ನು ಹಿಂಪಡೆಯಬೇಕು ಎಂದು ಗಡುವು ನೀಡಿರುವ ಕಾರಣ ಪ್ರತಿಪಕ್ಷಗಳ ಸಂಸದರು ಟೀಕಿಸಿದ್ದಾರೆ ಎಂದು ತಿಳಿದುಬಂದಿದೆ.

ಚೀನಾ ಪರ ಮುಯಿಜು ಹೆಚ್ಚಿನ ಒಲವು

ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ. ಈಗ ಚೀನಾಗೆ ತೆರಳಿರುವ ಮೊಹಮ್ಮದ್‌ ಮುಯಿಜು, 50 ದಶಲಕ್ಷ ಡಾಲರ್‌ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್‌ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಮೊಹಮ್ಮದ್‌ ಮುಯಿಜು ಅವರು ಚೀನಾಗೆ ತೆರಳುವ ಕೆಲವೇ ಗಂಟೆಗಳ ಮೊದಲು ಮಾಲ್ಡೀವ್ಸ್‌ ಸಚಿವರು ಭಾರತದ ವಿರುದ್ಧ ಆರೋಪ ಮಾಡಿರುವುದು ಕೂಡ ಓಲೈಕೆಯ ಸಂಕೇತ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾರತದ ವಿಮಾನ ಬಳಸಲು ಮಾಲ್ಡೀವ್ಸ್‌ ಅಧ್ಯಕ್ಷ ನಕಾರ; 13 ವರ್ಷದ ಬಾಲಕ ಸಾವು

ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version