ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಮಾಲ್ಡೀವ್ಸ್ ಸಚಿವರು ಉದ್ಧಟತನದಿಂದ ಹೇಳಿಕೆ ನೀಡಿದ ಪ್ರಕರಣವೀಗ ಭಾರತ ಹಾಗೂ ಮಾಲ್ಡೀವ್ಸ್ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ. ಅದರಲ್ಲೂ, ಬಾಯ್ಕಾಟ್ ಮಾಲ್ಡೀವ್ಸ್ (Boycott Maldives) ಅಭಿಯಾನ ಆರಂಭಿಸಿದ ಭಾರತೀಯರು, ಮಾಲ್ಡೀವ್ಸ್ ಪ್ರವಾಸ, ಬುಕ್ ಮಾಡಿದ ಹೋಟೆಲ್‌ಗಳನ್ನು ಕ್ಯಾನ್ಸಲ್ ಮಾಡಿದೆ. ಇದರಿಂದಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಇದನ್ನು ಮನಗಂಡ ಅಧ್ಯಕ್ಷ ಮೊಹಮ್ಮದ್ ಮುಯಿಜು ಈಗ ಚೀನಾದ ಎದುರು ಮಂಡಿಯೂರಿದ್ದಾರೆ. “ಚೀನಾದಿಂದ ಮಾಲ್ಡೀವ್ಸ್‌ಗೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಿಕೊಡಿ” ಎಂದು ಚೀನಾಗೆ ಮೊಹಮ್ಮದ್ ಮುಯಿಜು (Mohamed Muizzu) ಮನವಿ ಮಾಡಿದ್ದಾರೆ.
ಐದು ದಿನಗಳ ಭೇಟಿಗಾಗಿ ಚೀನಾಗೆ ತೆರಳಿರುವ ಮೊಹಮ್ಮದ್ ಮುಯಿಜು, ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. “ಚೀನಾ ಹಾಗೂ ಮಾಲ್ಡೀವ್ಸ್ ಮಧ್ಯೆ ಉತ್ತಮ ಸ್ನೇಹ, ಬಾಂಧವ್ಯ ಇದೆ. ವ್ಯವಹಾರಿಕವಾಗಿಯೂ ಒಳ್ಳೆಯ ಸ್ನೇಹ ಸಂಪಾದಿಸಿದ್ದೇವೆ. ಕೊರೊನಾಗೂ ಮೊದಲು ಚೀನಾ ನಮಗೆ ನಂಬರ್ 1 ಮಾರುಕಟ್ಟೆಯಾಗಿತ್ತು. ಕೊರೊನಾ ನಂತರವೂ ಚೀನಾವೇ ದೊಡ್ಡ ಮಾರುಕಟ್ಟೆಯಾಗಿರಲಿ ಎಂಬುದಾಗಿ ನಾವು ಬಯಸುತ್ತೇವೆ. ಮಾಲ್ಡೀವ್ಸ್ ಪ್ರವಾಸೋದ್ಯಮ ದೃಷ್ಟಿಯಿಂದ ಚೀನಾವು ಹೆಚ್ಚಿನ ಪ್ರವಾಸಿಗರನ್ನು ನಮ್ಮ ದೇಶಕ್ಕೆ ಕಳುಹಿಸಬೇಕು ” ಎಂದು ಮನವಿ ಮಾಡಿದ್ದಾರೆ. ಆ ಮೂಲಕ ಭಾರತಕ್ಕೆ ತಿರುಗೇಟು ನೀಡುವುದು ಕೂಡ ಮೊಹಮ್ಮದ್ ಮಯಿಜು ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
Maldivian president Mohamed Muizzu on Tuesday urged China to send more tourists to the island nation amid a massive boycott campaign in India over derogatary remarks made by his ministers against PM Modi.#Maldives pic.twitter.com/dZloreL8VW
— Geopolitical Kid (@Geopoliticalkid) January 9, 2024
ಚೀನಾ ಪರ ಮುಯಿಜು ಹೆಚ್ಚಿನ ಒಲವು
ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ. ಈಗ ಚೀನಾಗೆ ತೆರಳಿರುವ ಮೊಹಮ್ಮದ್ ಮುಯಿಜು, 50 ದಶಲಕ್ಷ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಮೊಹಮ್ಮದ್ ಮುಯಿಜು ಅವರು ಚೀನಾಗೆ ತೆರಳುವ ಕೆಲವೇ ಗಂಟೆಗಳ ಮೊದಲು ಮಾಲ್ಡೀವ್ಸ್ ಸಚಿವರು ಭಾರತದ ವಿರುದ್ಧ ಆರೋಪ ಮಾಡಿರುವುದು ಕೂಡ ಓಲೈಕೆಯ ಸಂಕೇತ ಎನ್ನಲಾಗುತ್ತಿದೆ.
ಇದನ್ನೂ ಓದಿ: Boycott Maldives : ಬಂಡುಕೋರರಿಂದ ಮಾಲ್ಡೀವ್ಸ್ಅನ್ನು ರಕ್ಷಿಸಿದ್ದೇ ಭಾರತ; ಅದು ಆಪರೇಷನ್ ಕ್ಯಾಕ್ಟಸ್!
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ