ಮಾಲೆ: ಭಾರತದ ವಿರುದ್ಧ ದ್ವೇಷ ಕಾರುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ (Maldives president) ಮೊಹಮ್ಮದ್ ಮುಯಿಜು (Mohamed Muizzu) ಸ್ವಲ್ಪ ಮೆತ್ತಗಾಗಿದ್ದಾರೆ. “ಭಾರತವು ಮಾಲ್ಡೀವ್ಸ್‌ನ ಹತ್ತಿರದ ಮಿತ್ರ” ಎಂದಿರುವ ಅವರು, ತನ್ನ ದೇಶದ ಮೇಲಿರುವ ಸಾಲವನ್ನು ಭಾರತ ಮನ್ನಾ ಮಾಡಬೇಕು ಎಂದು ಬಯಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಮಾಲ್ಡೀವ್ಸ್ ಭಾರತಕ್ಕೆ ಸುಮಾರು $400.9 ದಶಲಕ್ಷ (29,496 ದಶಲಕ್ಷ ರೂ.) ಬಾಕಿ ಉಳಿಸಿಕೊಂಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ, ಚೀನಾ ಪರವಾಗಿರುವ ಮುಯಿಜು ಭಾರತದ ಕಡೆಗೆ ಕಠಿಣ ನಿಲುವನ್ನು ತೋರಿದ್ದಾರೆ. ಇಲ್ಲಿರುವ ಮೂರು ವಾಯುನೆಲೆಗಳನ್ನು ನಿರ್ವಹಿಸುತ್ತಿರುವ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಮೇ 10ರೊಳಗೆ ದೇಶದಿಂದ ಆಚೆ ಹೋಗಬೇಕೆಂದು ಆಜ್ಞಾಪಿಸಿದ್ದಾರೆ.
ಗುರುವಾರ, ಅಧಿಕಾರ ವಹಿಸಿಕೊಂಡ ನಂತರ ಸ್ಥಳೀಯ ಮಾಧ್ಯಮಕ್ಕೆ ನೀಡಿದ ತಮ್ಮ ಮೊದಲ ಸಂದರ್ಶನದಲ್ಲಿ ಅಧ್ಯಕ್ಷ ಮುಯಿಜು “ಮಾಲ್ಡೀವ್ಸ್‌ಗೆ ನೆರವು ನೀಡುವಲ್ಲಿ ಭಾರತವು ಪ್ರಮುಖವಾಗಿದೆ ಮತ್ತು ಇಲ್ಲಿ ಅದು ಹೆಚ್ಚಿನ ಸಂಖ್ಯೆಯ ಯೋಜನೆಗಳ ಜಾರಿಗೆ ನೆರವಾಗಿದೆ” ಎಂದಿದ್ದಾರೆ. “ಭಾರತವು ಮಾಲ್ಡೀವ್ಸ್‌ನ ನಿಕಟ ಮಿತ್ರನಾಗಿ ಮುಂದುವರಿಯುತ್ತದೆ” ಎಂದು ಒತ್ತಿ ಹೇಳಿದರು.
ಸಂದರ್ಶನದಲ್ಲಿ ಅಧ್ಯಕ್ಷ ಮುಯಿಜು, “ನಾವು ಪಿತ್ರಾರ್ಜಿತವಾಗಿ ಭಾರತದಿಂದ ತೆಗೆದುಕೊಂಡ ದೊಡ್ಡ ಸಾಲಗಳಿವೆ. ಈ ಸಾಲಗಳ ಮರುಪಾವತಿಯಲ್ಲಿ ವಿನಾಯತಿಗಳನ್ನು ನಾವು ಕೋರುತ್ತಿದ್ದೇವೆ. ಯಾವುದೇ ಚಾಲ್ತಿಯಲ್ಲಿರುವ ಯೋಜನೆಗಳನ್ನು ನಿಲ್ಲಿಸುವ ಬದಲು ಅವುಗಳನ್ನು ಮುಂದುವರಿಸಲು ಇಷ್ಟಪಡುತ್ತೇವೆ. ಹಾಗಾಗಿ ಮಾಲ್ಡೀವ್ಸ್- ಭಾರತದ ಸಂಬಂಧಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಿಲ್ಲ” ಎಂದಿದ್ದಾರೆ.
“ಮಾಲ್ಡೀವ್ಸ್ ಭಾರತದಿಂದ ಗಮನಾರ್ಹ ಪ್ರಮಾಣದ ಸಾಲಗಳನ್ನು ತೆಗೆದುಕೊಂಡಿದೆ. ಇದು ಮಾಲ್ಡೀವ್ಸ್ ಆರ್ಥಿಕತೆಯಿಂದ ಭರಿಸಲಾಗದ ಪ್ರಮಾಣದಲ್ಲಿ ಇದೆ. ಇದರಿಂದಾಗಿ, ಮಾಲ್ಡೀವ್ಸ್‌ನ ಅತ್ಯುತ್ತಮ ಆರ್ಥಿಕ ಸಾಮರ್ಥ್ಯದೊಳಗೆ ಸಾಲವನ್ನು ಮರುಪಾವತಿಸುವ ಆಯ್ಕೆಗಳನ್ನು ಅನ್ವೇಷಿಸಲು ಭಾರತ ಸರ್ಕಾರದೊಂದಿಗೆ ಚರ್ಚಿಸುತ್ತಿದ್ದೇವೆ” ಎಂದಿರುವ ಮುಯಿಜು, “ಭಾರತ ಈ ಸಾಲಗಳ ಪರಿಹಾರ ಕ್ರಮಗಳನ್ನು ಸುಗಮಗೊಳಿಸುತ್ತದೆ” ಎಂದು ಭರವಸೆ ವ್ಯಕ್ತಪಡಿಸಿದರು.
ಈ ಹಿಂದಿನ ಭಾರತ ಪರ ನಾಯಕ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರ ಆಡಳಿತ ಭಾರತದ ಎಕ್ಸಿಮ್ (ರಫ್ತು ಮತ್ತು ಆಮದು) ಬ್ಯಾಂಕ್‌ನಿಂದ $1.4 ಮಿಲಿಯ ಸಾಲ ಪಡೆದಿತ್ತು. ಇದರೊಂದಿಗೆ, ಕಳೆದ ವರ್ಷದ ಅಂತ್ಯದ ವೇಳೆಗೆ ಮಾಲ್ಡೀವ್ಸ್ ಭಾರತಕ್ಕೆ ನೀಡಬೇಕಾದ ಮೊತ್ತವು 6.2 ಶತಕೋಟಿ ರುಫಿಯಾ (ಮಾಲ್ಡೀವ್ಸ್ ಕರೆನ್ಸಿ) ಆಗಿದೆ.
“ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾದಾಗ ನಾನು, ಯಾವುದೇ ಚಾಲ್ತಿಯಲ್ಲಿರುವ ಯೋಜನೆಗಳನ್ನು ನಿಲ್ಲಿಸುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ಅವುಗಳನ್ನು ಬಲಪಡಿಸುವ ಮತ್ತು ತ್ವರಿತಗೊಳಿಸುವ ನನ್ನ ಬಯಕೆಯನ್ನು ವ್ಯಕ್ತಪಡಿಸಿದ್ದೇನೆ” ಎಂದು ಮುಯಿಜು ಹೇಳಿದರು. ಡಿಸೆಂಬರ್ 2023ರಲ್ಲಿ ದುಬೈನಲ್ಲಿ COP28 ಶೃಂಗಸಭೆಯ ಸಂದರ್ಭದಲ್ಲಿ ಪಿಎಂ ಮೋದಿಯವರನ್ನು ಮುಯಿಜು ಭೇಟಿಯಾಗಿದ್ದರು.
ಆದರೆ, ಭಾರತೀಯ ಪಡೆಗಳ ಹಿಂತೆಗೆತದ ವಿಚಾರದಲ್ಲಿ ತಮ್ಮ ನಿರ್ಧಾರದಲ್ಲಿ ಯಾವುದೇ ಸಡಿಲಿಕೆ ತೋರಲಿಲ್ಲ. “ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನೆಯ ಉಪಸ್ಥಿತಿಯು ನಮಗೆ ಭಾರತದೊಂದಿಗೆ ಉದ್ಭವಿಸಿದ ವಿವಾದದ ಏಕೈಕ ವಿಷಯ. ಭಾರತವೂ ಅದನ್ನು ಒಪ್ಪಿಕೊಂಡಿದ್ದು, ಪಡೆ ಹಿಂತೆಗೆದುಕೊಳ್ಳಲು ಮುಂದಾಗಿದೆ” ಎಂದಿದ್ದಾರೆ.
“ಒಂದು ದೇಶದ ಸಹಾಯವನ್ನು ನಿಷ್ಪ್ರಯೋಜಕವೆಂದು ತಿರಸ್ಕರಿಸುವುದು ಅಥವಾ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ನಾನು ಎರಡು ದೇಶಗಳ ನಡುವಿನ ಸಂಬಂಧವನ್ನು ಹದಗೆಡಿಸುವ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಅವರು ಬೇರೆ ದೇಶದ ಸೈನಿಕರಾಗಿದ್ದರೂ ನಾವು ಅವರೊಂದಿಗೆ ಅದೇ ರೀತಿಯಲ್ಲಿ ವ್ಯವಹರಿಸುತ್ತೇವೆ. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ಇದು ವೈಯಕ್ತಿಕವಲ್ಲ. ಇದು ನಮ್ಮ ರಾಷ್ಟ್ರೀಯ ಭದ್ರತೆಯ ವಿಷಯ” ಎಂದು ಮುಯಿಜು ಹೇಳಿದರು.
ಮುಯಿಜು ಜನವರಿಯಲ್ಲಿ ಬೀಜಿಂಗ್‌ಗೆ ಭೇಟಿ ನೀಡಿದ ಬಳಿಕ ಭಾರತದ ಜೊತೆಗೆ ಇನ್ನಷ್ಟು ಕಠಿಣ ನಿಲುವು ತಾಳಿದ್ದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಜೊತೆಗೆ, ಮಾಲ್ಡೀವ್ಸ್ ಮೂಲಸೌಕರ್ಯಕ್ಕೆ ಸಹಾಯ ಮಾಡಲು 20 ಒಪ್ಪಂದಗಳಿಗೆ ಸಹಿ ಹಾಕುವುದರ ಜೊತೆಗೆ ಸಮಗ್ರ ಕಾರ್ಯತಂತ್ರದ ಸಹಕಾರ ಪಾಲುದಾರಿಕೆಗೆ ಸಹಿ ಹಾಕಿದ್ದರು. ಪ್ರವಾಸೋದ್ಯಮ ಅವಲಂಬಿತ ಮಾಲ್ಡೀವ್ಸ್‌ಗೆ ಹೆಚ್ಚಿನ ಚೀನೀ ಪ್ರವಾಸಿಗರನ್ನು ಕಳುಹಿಸುವ ಭರವಸೆ ನೀಡುವುದರ ಜೊತೆಗೆ ಚೀನಾ $130 ಮಿಲಿಯನ್ ಅನುದಾನವನ್ನು ಘೋಷಿಸಿತ್ತು.
ಚೀನಾದಿಂದ ಹಿಂದಿರುಗಿದ ನಂತರ ಅಧ್ಯಕ್ಷ ಮುಯಿಜು, “ಮಾಲ್ಡೀವ್ಸ್ ಒಂದು ಸಣ್ಣ ದೇಶವಾಗಿರಬಹುದು. ಆದರೆ ಅದು ನಮ್ಮನ್ನು ಬೆದರಿಸುವುದಕ್ಕೆ ಯಾರಿಗೂ ಪರವಾನಗಿ ಅಲ್ಲ” ಎಂದು ಪರೋಕ್ಷವಾಗಿ ಭಾರತಕ್ಕೆ ಟಾಂಗ್ ನೀಡಿದ್ದರು. ಭಾರತದೊಂದಿಗಿನ ಹೈಡ್ರೋಗ್ರಫಿ ಒಪ್ಪಂದವನ್ನು ರದ್ದುಗೊಳಿದ್ದರು ಮತ್ತು ಹಿಂದೂ ಮಹಾಸಾಗರ ಯಾವುದೇ ನಿರ್ದಿಷ್ಟ ದೇಶಕ್ಕೆ ಸೇರಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ.
ಭಾರತದ ಸೇನಾ ಸಿಬ್ಬಂದಿಯ ಮೊದಲ ಬ್ಯಾಚ್ ಈ ತಿಂಗಳು ಯೋಜಿಸಿದಂತೆ ದ್ವೀಪ ರಾಷ್ಟ್ರವನ್ನು ತೊರೆದಿದೆ. ಮೇ 10ರ ಮುನ್ನ ಮೂರು ಭಾರತೀಯ ವಾಯುನೆಲೆಗಳನ್ನು ನಿರ್ವಹಿಸುವ ಎಲ್ಲಾ 88 ಮಿಲಿಟರಿ ಸಿಬ್ಬಂದಿಗಳು ದೇಶವನ್ನು ತೊರೆಯಬೇಕೆಂದು ಅಧ್ಯಕ್ಷ ಮುಯಿಜು ಒತ್ತಾಯಿಸಿದ್ದರು. ಭಾರತವು ಇಲ್ಲಿ ಹಲವು ವರ್ಷಗಳಿಂದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ವಿಮಾನದೊಂದಿಗೆ ಮಾಲ್ಡೀವ್ಸ್‌ನ ಜನರಿಗೆ ಮಾನವೀಯ ಮತ್ತು ವೈದ್ಯಕೀಯ ಸ್ಥಳಾಂತರ ಸೇವೆಗಳನ್ನು ಒದಗಿಸುತ್ತಿದೆ.
ಮಾಲ್ಡೀವ್ಸ್‌ಗೆ ಭಾರತದಷ್ಟು ಸಾಮೀಪ್ಯ ಇರುವ ಬಲಿಷ್ಠ ದೇಶ ಇನ್ಯಾವುದೂ ಇಲ್ಲ. ಇದು ಲಕ್ಷದ್ವೀಪದ ಮಿನಿಕಾಯ್ ದ್ವೀಪದಿಂದ ಕೇವಲ 70 ನಾಟಿಕಲ್ ಮೈಲು ಮತ್ತು ಮುಖ್ಯ ಭೂಭಾಗದ ಪಶ್ಚಿಮ ಕರಾವಳಿಯಿಂದ 300 ನಾಟಿಕಲ್ ಮೈಲು ದೂರದಲ್ಲಿದೆ. ಹಿಂದೂ ಮಹಾಸಾಗರ ಪ್ರದೇಶದ (IOR) ಮೂಲಕ ಹಾದುಹೋಗುವ ಸಾಗರ ವಾಣಿಜ್ಯ ಮಾರ್ಗಗಳ ಕೇಂದ್ರದಲ್ಲಿ ಮಾಲ್ಡೀವ್ಸ್ ಇದೆ.
ಇದನ್ನೂ ಓದಿ: Maldives : ಭಾರತವನ್ನು ಎದುರು ಹಾಕಿಕೊಂಡ ಮಾಲ್ಡೀವ್ಸ್‌ಗೆ ಟೂರಿಸಂನಲ್ಲಿ ಸಿಕ್ಕಾಪಟ್ಟೆ ಲಾಸ್