ಲಾಹೋರ್: ಕಾಂಗ್ರೆಸ್ (Congress) ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ (Mani Shankar Aiyar) ಅವರು ಪಾಕಿಸ್ತಾನದಲ್ಲಿ (Pakistan) ಅಲ್ಲಿನವರ ಆತಿಥ್ಯವನ್ನು ಶ್ಲಾಘಿಸಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಟೀಕಿಸಿದ್ದಾರೆ. ಪಾಕಿಸ್ತಾನೀಯರನ್ನು ಅವರು “ಭಾರತದ ಅತಿದೊಡ್ಡ ಆಸ್ತಿ” ಎಂದು ಹೇಳಿದ್ದು, ಅವರ ಹೇಳಿಕೆಯೀಗ ಬಿಜೆಪಿಗರ ಕೆಂಗಣ್ಣಿಗೆ ತುತ್ತಾಗಿದೆ.
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಯ್ಯರ್ ಟೀಕಿಸಿದ್ದಾರೆ. ಈ ಹಿಂದೆ ವಿವಾದಾತ್ಮಕ ಹೇಳಿಕೆಗಳಿಂದಾಗಿ ಭಾರತೀಯ ಜನತಾ ಪಕ್ಷದ ಕಟು ಟೀಕೆಗಳನ್ನು ಎದುರಿಸಿದ್ದ ಮಣಿಶಂಕರ್ ಅಯ್ಯರ್ ಅವರು ಮತ್ತೆ ಅಂಥದೇ ಎಡವಟ್ಟು ಮಾಡಿಕೊಂಡಿದ್ದಾರೆ.
“ಪಾಕಿಸ್ತಾನದವರು, ನನ್ನ ಅನುಭವದ ಪ್ರಕಾರ, ಬಹುಶಃ ಎದುರಿನವರಿಗೆ ಅತಿಯಾಗಿ ಪ್ರತಿಕ್ರಿಯಿಸುವ ಜನರು. ನಾವು ಸ್ನೇಹಪರರಾಗಿದ್ದರೆ ಅವರು ಅತಿಯಾದ ಸ್ನೇಹಪರರಾಗಿರುತ್ತಾರೆ ಮತ್ತು ನಾವು ದ್ವೇಷಿಸಿದರೆ ಅವರು ತುಂಬಾ ದ್ವೇಷಿಸಬಲ್ಲರು. ಪಾಕಿಸ್ತಾನದಂತೆ ನನ್ನನ್ನು ತೆರೆದ ತೋಳುಗಳಿಂದ ಸ್ವಾಗತಿಸಿದ ಇನ್ನೊಂದು ದೇಶಕ್ಕೆ ನಾನು ಯಾವತ್ತೂ ಹೋಗಿಲ್ಲ” ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಪಾಕಿಸ್ತಾನದ ಲಾಹೋರ್‌ನ ಅಲ್‌ಹಮ್ರಾದಲ್ಲಿ ನಡೆದ ʼಫೈಜ್ ಉತ್ಸವʼದ ಎರಡನೇ ದಿನದಂದು ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು. ಮಾತಿನ ನಡುವೆ ನರೇಂದ್ರ ಮೋದಿಯವರನ್ನು ಟೀಕಿಸಿದ ಮಣಿಶಂಕರ್ ಅಯ್ಯರ್, “ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಿರಾಕರಿಸುವ ಮೂಲಕ ಮೋದಿ ದೊಡ್ಡ ತಪ್ಪು ಮಾಡಿದ್ದಾರೆ” ಎಂದರು.
“ಇಸ್ಲಾಮಾಬಾದ್‌ನಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಐವರು ಭಾರತೀಯ ಹೈಕಮಿಷನರ್‌ಗಳು ಇದ್ದರು. ಅವರಲ್ಲಿ ಐವರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ, ನಾವು ಪಾಕಿಸ್ತಾನದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ನಾವು ಮಾಡಿದ ದೊಡ್ಡ ತಪ್ಪು ಎಂದರೆ ಮಾತುಕತೆ ನಿರಾಕರಿಸಿದ್ದು. ನಿಮ್ಮ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುವ ಧೈರ್ಯ ನಮಗಿದೆ, ಆದರೆ ಒಂದೇ ಮೇಜಿನಲ್ಲಿ ಕುಳಿತು ಮಾತನಾಡುವ ಧೈರ್ಯ ನಮಗಿಲ್ಲ” ಎಂದರು ಅಯ್ಯರ್.
“ಮೋದಿ ಎಂದಿಗೂ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿಲ್ಲ. ಆದರೆ ನಮ್ಮ ವ್ಯವಸ್ಥೆ ಹೇಗಿದೆ ಎಂದರೆ, ಯಾರಾದರೂ ಮೂರನೇ ಒಂದು ಭಾಗದಷ್ಟು ಮತಗಳನ್ನು ಹೊಂದಿದರೆ ಅವರು ಮೂರನೇ ಎರಡರಷ್ಟು ಸ್ಥಾನಗಳನ್ನು ಹೊಂದುತ್ತಾರೆ” ಎಂದು ಅವರು ಹೇಳಿದರು. “…ಆದ್ದರಿಂದ ಮೂರನೇ ಎರಡರಷ್ಟು ಭಾರತೀಯರು ನಿಮ್ಮ ಕಡೆಗೆ (ಪಾಕಿಸ್ತಾನದವರು) ಬರಲು ಸಿದ್ಧರಾಗಿದ್ದಾರೆ” ಎಂದು ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಸಂವಾದಕ್ಕೆ ಕರೆ ನೀಡಿದ ಅಯ್ಯರ್, “ಸರ್ಕಾರಗಳು ಎಚ್ಚರಗೊಳ್ಳುವವರೆಗೂ ಎರಡೂ ದೇಶಗಳು ಮಾತುಕತೆಯನ್ನು ಮುಂದುವರೆಸಬೇಕು. ಆದರೆ ವೀಸಾ ಸಮಸ್ಯೆಗಳಿಂದಾಗಿ ಪಾಕಿಸ್ತಾನ ಅಥವಾ ಭಾರತ ಇದನ್ನು ಮಾಡಲಾಗುವುದಿಲ್ಲ. ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳನ್ನು ಬೈಪಾಸ್ ಮಾಡಿ ಮಾತುಕತೆ ಮುಂದುವರಿಸಬೇಕು” ಎಂದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೂಡ ಅಯ್ಯರ್ ಅವರು ಪಾಕಿಸ್ತಾನದೊಂದಿಗಿನ ಮಾತುಕತೆಯ ಕುರಿತು ಮೋದಿಯವರನ್ನು ಟೀಕಿಸಿದ್ದರು. “ಮೋದಿಗಿಂತ ಹಿಂದಿನ ಎಲ್ಲ ಪ್ರಧಾನಿಗಳೂ ಪಾಕಿಸ್ತಾನದೊಂದಿಗೆ ಹಲವು ರೀತಿಯ ಮಾತುಕತೆಗೆ ಪ್ರಯತ್ನಿಸಿದ್ದರು. ಆದರೆ ಈಗ ಪರಿಸ್ಥಿತಿಯಾಗಿದೆ ಶೀತಲವಾಗಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: Ayodhya Ram Mandir: ʼಗೆಟ್ ಔಟ್ʼ: ಅಯೋಧ್ಯೆ ರಾಮ ಮಂದಿರ ಟೀಕಿಸಿದ ಮಣಿಶಂಕರ ಅಯ್ಯರ್‌ಗೆ ನೋಟಿಸ್