Site icon Vistara News

Manipur Bomb Blast: ಮಾಜಿ ಶಾಸಕನ ಮನೆಯಲ್ಲಿ ಬಾಂಬ್‌ ಬ್ಲಾಸ್ಟ್‌; ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ

Manipur Bomb Blast

ಇಂಫಾಲ್‌: ಸದಾ ಒಂದಿಲ್ಲೊಂದು ಹಿಂಸಾಕೃತ್ಯದಿಂದಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಭಾರೀ ಸುದ್ದಿಯಲ್ಲಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಬಾಂಬ್‌ ಸ್ಫೋಟ(Manipur Bomb Blast) ಸಂಭವಿಸಿದೆ. ಇಂಫಾಲ್ ಪೂರ್ವದ ಕೇಸ್ತ್ರಿಗಾವೊ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ(Ex MLA)ರೊಬ್ಬರ ನಿವಾಸದಲ್ಲಿ ಶನಿವಾರ ರಾತ್ರಿ 10:30 ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಶಾಸಕ ನಹಕ್‌ಪಂ ಇಂದ್ರಜಿತ್ ಅವರ ಮುಖ್ಯ ಗೇಟ್‌ನಲ್ಲಿ ಹ್ಯಾಂಡ್ ಗ್ರೆನೇಡ್ ಎಂದು ಶಂಕಿಸಲಾದ ಬಾಂಬ್ ಅನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಎಸೆದಿದ್ದು, ಅದು ಸ್ಫೋಟಗೊಂಡಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ದುಷ್ಕರ್ಮಿಗಳು ನಾಲ್ಕು ಚಕ್ರದ ವಾಹನದಲ್ಲಿ ಬಂದಿದ್ದರು. ಮಣಿಪುರ ಪೊಲೀಸರು, ಫೋರೆನ್ಸಿಕ್ಸ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ನಿನ್ನೆ ಮಣಿಪುರದ ಇಂಫಾಲ್ ಪೂರ್ವದ ಪೊರೊಂಪತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಜುಲೈ 25 ರಂದು, ಮಣಿಪುರದ ನಿಷೇಧಿತ ಉಗ್ರ ಸಂಘಟನೆಯಾದ ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ-ಮಿಲಿಟರಿ ಕೌನ್ಸಿಲ್ (ಪ್ರಗತಿಶೀಲ) (ಕೆಸಿಪಿ-ಎಂಸಿ, ಪ್ರಗತಿಪರ) ಬಣವು ಮಾದಕವಸ್ತು ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಂಘಟನೆಗೆ ಶರಣಾಗುವಂತೆ ಮಾಜಿ ಶಾಸಕನಿಗೆ ಎಚ್ಚರಿಕೆ ನೀಡಿತ್ತು. ನಿಗದಿತ ಸಮಯದೊಳಗೆ ಶರಣಾಗಲು ವಿಫಲವಾದರೆ ಮಾಜಿ ಶಾಸಕನ ವಿರುದ್ಧ ‘ಕಂಡಲ್ಲಿ ಗುಂಡೇಟು’ ಆದೇಶವನ್ನೂ ಅವರು ಘೋಷಿಸಿದ್ದರು.

ಕಳೆದ ಒಂದು ವರ್ಷದಿಂದ ಹಿಂಸಾಚಾರದಿಂದ ನಲುಗಿ ಹೋಗುತ್ತಿರುವ ಮಣಿಪುರದಲ್ಲಿ ಜುಲೈ 14 ಮತ್ತೆ ಹಿಂಸಾಚಾರ ಭುಗಿಲೆದ್ದಿತ್ತು. ಶಸ್ತ್ರಸಜ್ಜಿತ ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಚಕಮಕಿ ವೇಳೆ ಸಿಆರ್‌ಪಿಎಫ್‌ನ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಹಾಗೆಯೇ, ಮತ್ತೊಬ್ಬ ಸಿಆರ್‌ಪಿಎಫ್‌ ಯೋಧ ಹಾಗೂ ಇಬ್ಬರು ಪೊಲೀಸ್‌ ಕಮಾಂಡೋಗಳು ಗಾಯಗೊಂಡಿದ್ದಾರೆ.

ಮಣಿಪುರದ ಜಿರಿಬಮ್‌ ಜಿಲ್ಲೆಯ ಮೊಂಗ್‌ಬಂಗ್‌ ಹಾಗೂ ಸೀಜಾಂಗ್‌ ಗ್ರಾಮಗಳ ಬಳಿ ಬೆಳಗ್ಗೆ 9.30ರ ಸುಮಾರಿಗೆ ಉದ್ರಿಕ್ತರ ಗುಂಪೊಂದು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಕೂಡ ಪ್ರತಿದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಅಜಯ್‌ ಕುಮಾರ್‌ ಝಾ (43) ಎಂಬ ಸಿಆರ್‌ಪಿಎಫ್‌ನ ಚಾಲಕನ ತಲೆಗೆ ಗುಂಡು ತಗುಲಿದೆ. ಕೂಡಲೇ ಅವರನ್ನು ಜಿರಿಬಮ್‌ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಗುಂಡಿನ ದಾಳಿಗೆ ಒಬ್ಬ ಯೋಧ ಹುತಾತ್ಮ, ಮೂವರಿಗೆ ಗಾಯ

Exit mobile version