ಮಣಿಪುರ: ಈಶಾನ್ಯ ರಾಜ್ಯವಾದ ಮಣಿಪುರ(Manipur Violence)ದಲ್ಲಿ ಕಳೆದ ವರ್ಷ ಉಂಟಾಗಿದ್ದು, ಜನಾಂಗೀಯ ಹಿಂಸಾಚಾರಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅರೆಸ್ಟ್ ಮಾಡಿದೆ. ಬಂಧಿತನನ್ನು ಥಾಂಗ್ಮಿಂಥಾಂಗ್ ಹಾಕಿಪ್ ಅಲಿಯಾಸ್ ತಂಗ್ಬೋಯಿ ಹಾಕಿಪ್ ಅಲಿಯಾಸ್ ರೋಜರ್ ಎಂದು ಗುರುತಿಸಲಾಗಿದ್ದು, ಈತನನ್ನು ಇಂಫಾಲ್(Impal Airport) ಏರ್‌ಪೋರ್ಟ್‌ನಲ್ಲಿ ಎನ್‌ಐಎ ಅಧಿಕಾರಿಗಳು ಹೆಡೆಮುರಿಕಟ್ಟಿದ್ದಾರೆ.
ಕುಕಿ ನ್ಯಾಷನಲ್ ಫ್ರಂಟ್-ಮಿಲಿಟರಿ ಕೌನ್ಸಿಲ್ (KNF-MC) ಸದಸ್ಯನಾಗಿರುವ ರೋಜರ್‌ನ ವಿರುದ್ಧ ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲು ಹಿಂಸಾಚಾರ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪ ಇದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಕಳೆದ ವರ್ಷ ಜು. 19ರಂದು ಎನ್‌ಐಎ ಈತನ ವಿರುದ್ಧ ಸೂಮೋಟೋ ಕೇಸ್ ದಾಖಲಿಸಿಕೊಂಡಿತ್ತು.
ಎನ್‌ಐಎ ಆರೋಪ ಏನು?
ಎನ್‌ಐಎ ತನಿಖೆಯ ಪ್ರಕಾರ, ಈಶಾನ್ಯ ರಾಜ್ಯಗಳು ಮತ್ತು ನೆರೆಯ ಮ್ಯಾನ್ಮಾರ್‌ನಲ್ಲಿರುವ ಭಯೋತ್ಪಾದಕ ಸಂಘಟನೆಗಳ ಬೆಂಬಲದೊಂದಿಗೆ ಕುಕಿ ಮತ್ತು ಜೋಮಿ ಬಂಡುಕೋರರು ಈ ಪ್ರದೇಶದಲ್ಲಿ ಪ್ರಸ್ತುತ ಜನಾಂಗೀಯ ಅಶಾಂತಿಯನ್ನು ಸೃಷ್ಟಿಸಲು ಮತ್ತು ಸರ್ಕಾರದ ವಿರುದ್ಧ ದಂಗೆ ಉದ್ದೇಶದಿಂದ ಸಂಚು ರೂಪಿಸಿದ್ದಾರೆ. ಆರೋಪಿಯು ಕಳೆದ ವರ್ಷದಿಂದ ನಡೆಯುತ್ತಿರುವ ದಂಗೆ ಮತ್ತು ಹಿಂಸಾಚಾರದ ವೇಳೆ ವಿವಿಧ ಸ್ಥಳಗಳಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಮಣಿಪುರ ರಾಜ್ಯದಲ್ಲಿನ ಅಸ್ಥಿರ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಮತ್ತು ಜನರ ಮನಸ್ಸಿನಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಲು ಮ್ಯಾನ್ಮಾರ್‌ನ ಕುಕಿ ನ್ಯಾಷನಲ್ ಫ್ರಂಟ್ (ಕೆಎನ್‌ಎಫ್)-ಬಿ ಉಗ್ರರ ಜೊತೆ ರೋಜರ್‌ಗೆ ಸಂಪರ್ಕ ಇರುವುದು ಕಂಡು ಬಂದಿದೆ. ಅಲ್ಲದೇ ಈತ ಹಿಂಸಾಚಾರದಲ್ಲಿ ಬಳಸಲು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೂರೈಸಲು ಪಿಡಿಎಫ್ / ಕೆಎನ್‌ಎಫ್-ಬಿ (ಮ್ಯಾನ್ಮಾರ್) ನಾಯಕರನ್ನು ಭೇಟಿಯಾಗಿದ್ದ ಎಂದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.
ಮಣಿಪುರ ಹಿಂಸಾಚಾರ
ಮೇ 3, 2023 ರಂದು ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೊದಲ ಬಾರಿಗೆ ಘರ್ಷಣೆಗಳು ಪ್ರಾರಂಭವಾದವು, ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ನಂತರ ಈ ಸಂಘರ್ಷ ಆರಂಭವಾಗಿತ್ತು. ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದ ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಸುಮಾರು 10,000 ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಣಿಪುರದಲ್ಲಿ ಭುಗಿಲೆದ್ದಿರುವ ಮಣಿಪುರದಲ್ಲಿ ಮೈತೆಯಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು ಮತ್ತು 310 ಜನರು ಗಾಯಗೊಂಡಿದ್ದಾರೆ. ರಾಜ್ಯದ ಹೊರಗಿನ ನಿರಾಶ್ರಿತರ ಶಿಬಿರಗಳಲ್ಲಿ ಸಾವಿರಾರು ಜನರು ಇದ್ದಾರೆ ಮತ್ತು ಲಕ್ಷಗಟ್ಟಲೆ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಸರ್ಕಾರ 11 ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಇದನ್ನೂ ಓದಿ:Road Accident: ಗೂಡ್ಸ್ ವಾಹನ-ಕಾರು ಡಿಕ್ಕಿ; ಇಬ್ಬರ ಸಾವು, ಐವರಿಗೆ ಗಂಭೀರ ಗಾಯ