ಮುಂಬೈ: ಮರಾಠಿಗರ ಬಹು ದಿನಗಳ ಕನಸು ನನಸಾಗಿದೆ. ಮಹಾರಾಷ್ಟ್ರದ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ (Martha) ಸಮುದಾಯಗಳಿಗೆ ಮೀಸಲಾತಿ ಸಿಗಬೇಕು ಎನ್ನುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ (Manoj Jarange Patil) ಅವರ ಬೇಡಿಕೆಗೆ ಮಹಾರಾಷ್ಟ್ರ ಸರ್ಕಾರ ಅಸ್ತು ಎಂದಿದೆ. ಮನೋಜ್ ಅವರು ಮಂಡಿಸಿದ್ದ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿ, ಸುಗ್ರೀವಾಜ್ಞೆ ಹೊರಡಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಶನಿವಾರ (ಜನವರಿ 27) ಮನೋಜ್ ಜಾರಂಗೆ ಪ್ರತಿಭಟನೆ ಹಿಂಪಡೆದುಕೊಂಡಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಅವರು, “ಮರಾಠ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಯಾರು ಈ ಮನೋಜ್ ಜಾರಂಗೆ ಪಾಟೀಲ್ ? ಅವರ ಹೋರಾಟ ಹೇಗಿತ್ತು? ಎನ್ನುವ ವಿವರ ಇಲ್ಲಿದೆ.
ಭರವಸೆಯ ನಾಯಕ
41ರ ಹರೆಯದ ಮನೋಜ್ ಜಾರಂಗೆ ಈ ಹಿಂದೆ ಕೃಷಿಕರಾಗಿದ್ದರು. ಜಲ್ನಾ ಮೂಲದ ಇವರು ಸದ್ಯ ಮರಾಠ ಸಮುದಾಯದ ಹೊಸ ಹೀರೋ ಆಗಿ ಉದಯಿಸಿದ್ದಾರೆ. ಎಲ್ಲ ಮರಾಠರಿಗೆ ಕುಣಬಿ ಪ್ರಮಾಣ ಪತ್ರ ಒದಗಿಸಬೇಕು, ಶಿಶು ವಿಹಾರದಿಂದ ಸ್ನಾತಕೋತ್ತರ ಹಂತದವರೆಗೆ ಉಚಿತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಗಳಲ್ಲಿ ಮರಾಠರಿಗೆ ಮೀಸಲಾತಿ ನೀಡಬೇಕು ಎನ್ನುವ ಅವರ ಬೇಡಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಒಪ್ಪಿಗೆ ಸೂಚಿಸಿದ್ದು ಅವರ ದೀರ್ಘ ಹೋರಾಟಕ್ಕೆ ಸಂದ ಜಯ ಎಂದೇ ವಿಶ್ಲೇಷಿಸಲಾಗುತ್ತಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಮರಾಠಿಗರು ಮನೋಜ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲೂ ಯುವ ಜನತೆಯ ಸಂಖ್ಯೆ ಅಧಿಕ ಪ್ರಮಾಣದಲ್ಲಿದೆ ಎನ್ನುವುದು ವಿಶೇಷ.
ಹೋರಾಟದ ಹಾದಿ
ಮಹಾರಾಷ್ಟ್ರ ಜನಸಂಖ್ಯೆಯ ಪೈಕಿ ಶೇ. 33ರಷ್ಟು ಮರಾಠಿಗರಿದ್ದಾರೆ. ಈ ಸಮುದಾಯದಲ್ಲಿ ವಿವಿಧ ಜಾತಿಗಳಿವೆ. ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರೂ ಬಹುತೇಕ ಮರಾಠಿಗರ ಜೀವನ ಇಂದಿಗೂ ಕಷ್ಟದಲ್ಲಿದೆ. ಇವರಲ್ಲಿ ಬಹುತೇಕ ಮಂದಿ ಕಡಿಮೆ ಭೂಮಿ ಹೊಂದಿದವರಾಗಿದ್ದು, ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಲಭಿಸಬೇಕು ಎನ್ನುವುದು ಇವರ ಬೇಡಿಕೆ. ಇದಕ್ಕಾಗಿ ಮನೋಜ್ ಜಾರಂಗೆ ಹಲವು ವರ್ಷಗಳಿಂದ ಹೋರಾಟದ ಹಾದಿ ಹಿಡಿದಿದ್ದಾರೆ.
ಈ ವರ್ಷಾರಂಭದಲ್ಲಿ ಚಲೋ ಮುಂಬೈ ಮೂಲಕ ತಮ್ಮ ಆಂದೋಲನದ ಮೂರನೇ ಹಂತವನ್ನು ಪ್ರಾರಂಭಿಸುವ ಮೊದಲು ಮನೋಜ್ ಜಾರಂಗೆ ಕಳೆದ ವರ್ಷ ಎರಡು ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದರು. 2023ರ ಆಗಸ್ಟ್ 29ರಂದು ಪ್ರಾರಂಭವಾದ ಮೊದಲನೆಯ ಸತ್ಯಾಗ್ರಹ 17 ದಿನಗಳ ಕಾಲ ನಡೆಯಿತು. ಅಕ್ಟೋಬರ್ 25ರಂದು ಪ್ರಾರಂಭವಾದ ಎರಡನೆಯದು ಒಂಬತ್ತು ದಿನಗಳವರೆಗೆ ಮುಂದುವರಿದಿತ್ತು. ನಿವೃತ್ತ ನ್ಯಾಯಾಧೀಶರಾದ ಎಂ.ಜಿ.ಗಾಯಕ್ವಾಡ್ ಮತ್ತು ಸುನಿಲ್ ಶುಕ್ರೆ ಹಾಗೂ ನಾಲ್ವರು ಸಚಿವರಾದ ಉದಯ್ ಸಮಂತ್, ಧನಂಜಯ್ ಮುಂಡೆ, ಸಂದೀಪನ್ ಭೂಮಾರೆ ಮತ್ತು ಅತುಲ್ ಸಾವೆ ಅವರನ್ನೊಳಗೊಂಡ ನಿಯೋಗದ ಮನವೊಲಿಸಿದ ನಂತರ ಮನೋಜ್ ಜಾರಂಗೆ ಅವರು ನವೆಂಬರ್ 2ರಂದು ತಮ್ಮ ಎರಡನೇ ಉಪವಾಸ ಸತ್ಯಾಗ್ರಹವನ್ನು ಹಿಂದೆಗೆದುಕೊಂಡಿದ್ದರು. ಬೇಡಿಕೆ ಈಡೇರಿಕೆಗೆ 2 ತಿಂಗಳ ಕಾಲವಕಾಶ ನೀಡಬೇಕೆಂದು ಕೋರಿದ್ದರು. ಆದರೆ ಬೇಡಿಕೆಯನ್ನು ನೆರವೇರಿಸದ ಕಾರಣ ಮತ್ತೆ ಪ್ರತಿಭಟನೆಯ ಅಸ್ತ್ರ ಪ್ರಯೋಗಿಸಿದ್ದರು.
#WATCH | Navi Mumbai: Maratha reservation activists celebrate after Manoj Jarange Patil announces to end the protests today as the government has accepted their demands pic.twitter.com/V1KxosEHRm
— ANI (@ANI) January 27, 2024
ಬೇಡಿಕೆಗೆ ಮಣಿದ ಸರ್ಕಾರ
ಕೊನೆಗೂ ಮನೋಜ್ ಜಾರಂಗೆ ಅವರ ಹೋರಾಟಕ್ಕೆ ಮಣಿದ ಸಿಎಂ ಏಕನಾಥ ಶಿಂದೆ ಜ್ಯೂಸ್ ಕುಡಿಸುವ ಮೂಲಕ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. 57 ಲಕ್ಷ ಮರಾಠರಿಗೆ ಒಬಿಸಿ ವರ್ಗದಲ್ಲಿ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುವಂತೆ ಕುಣಬಿ ಪ್ರಮಾಣಪತ್ರಗಳನ್ನು ನೀಡುವ ಕರಡು ಅಧಿಸೂಚನೆಯ ಪ್ರತಿಯನ್ನು ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಶಿಂದೆ ಅವರು ಮನೋಜ್ ಅವರ ಹೋರಾಟವನ್ನು ಪ್ರಸಂಶಿಸಿದ್ದಾರೆ. ʼʼಮರಾಠ ಸಮುದಾಯಕ್ಕಾಗಿ ಶ್ರಮಿಸುತ್ತಿರುವ ಮನೋಜ್ ಅವರ ಹೋರಾಟ ಮಾದರಿʼʼ ಎಂದು ಹೇಳಿದ್ದಾರೆ. ಇನ್ನು ವಾಶಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ, “ನಾವು ದೇವರನ್ನು ನೋಡಿಲ್ಲ. ಆದರೆ ನೀವು ದೇವರಿಗಿಂತ ಕಡಿಮೆಯಿಲ್ಲ” ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು.
ಹೋರಾಟಕ್ಕಾಗಿ ಜಮೀನು ಮಾರಾಟ
ಮನೋಜ್ ಜಾರಂಗೆ ಪಾಟೀಲ್ ಮೂಲತಃ ಬೀಡ್ ಜಿಲ್ಲೆಯ ಮೋಟೋರಿ ಗ್ರಾಮದ ನಿವಾಸಿ. ಪ್ರಸ್ತುತ ಜಲ್ನಾ ಜಿಲ್ಲೆಯ ಶಾಹಗಢದಲ್ಲಿ ನೆಲೆಸಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಅವರು ಮರಾಠ ಮೀಸಲಾತಿ ಹೋರಾಟಕ್ಕೆ ಧುಮುಕಿದರು. ಇದಕ್ಕಾಗಿ ಹಲವು ಚಳವಳಿ, ಪ್ರತಿಭಟನೆ ನಡೆಸಿದರು. ಇದಕ್ಕಾಗಿ ತಮ್ಮ 2.5 ಎಕ್ರೆ ಹೊಲವನ್ನೂ ಮಾರಾಟ ಮಾಡಿದ್ದರು. ಅವರ ಮೊದಲ 12 ದಿನಗಳ ಉಪವಾಸ ಸತ್ಯಾಗ್ರಹವು 2021ರ ಜನವರಿಯಲ್ಲಿ ನಡೆಯಿತು. ಜಲ್ನಾ ಜಿಲ್ಲೆಯ ಸಾಶ್ತ್-ಪಿಂಪಲ್ಗಾಂವ್ ಗ್ರಾಮವು ಸಾರ್ವಜನಿಕರು ಇದಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದರು. ನಂತರ ಅವರು ಅದೇ ಗ್ರಾಮದಲ್ಲಿ ಮೂರು ತಿಂಗಳ ಆಂದೋಲನವನ್ನು ನಡೆಸಿದ್ದರು. ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಸಭೆಗೆ ಆಹ್ವಾನಿಸಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು.
ಇದನ್ನೂ ಓದಿ: Manoj Jarange Patil: ಮರಾಠ ಮೀಸಲಾತಿ ಹೋರಾಟಕ್ಕೆ ಜಯ; ಮನೋಜ್ ಜಾರಂಗೆ ಪ್ರತಿಭಟನೆ ಅಂತ್ಯ
ಹೋರಾಟ ನಿಲ್ಲಲ್ಲ
ʼʼನಮ್ಮ ಚಳವಳಿ ಮುಗಿದಿಲ್ಲ. ಸರ್ಕಾರ ಭರವಸೆ ನೀಡಿದೆ ಅಷ್ಟೇ. ಈ ಬಗ್ಗೆ ಈಗಾಗಲೇ ಸರ್ಕಾರ ನಮ್ಮ ಜತೆಗೆ ಮಾತನಾಡಿದೆ. ಆದರೆ ಆ ಭರವಸೆ ಕಾನೂನು ರೂಪಕ್ಕೆ ಬರುವವರೆಗೆ ಸಮಾಧಾನವಿಲ್ಲ. ಒಂದು ವೇಳೆ ಸರ್ಕಾರ ಉಲ್ಟಾ ಹೊಡೆದರೆ ಮತ್ತೆ ಈ ಚಳವಳಿ ಮುಂದುವರಿಸುತ್ತೇನೆ. ಮೀಸಲಾತಿ ಪಡೆಯಲು ಅಥವಾ ಕುಣಬಿ ಪ್ರಮಾಣ ಪತ್ರಗಳನ್ನು ಪಡೆಯಲು ಜನರು ಯಾವುದೇ ತೊಂದರೆಗಳನ್ನು ಎದುರಿಸಿದರೆ ಅವರಿಗಾಗಿ ಹೋರಾಡುತ್ತೇವೆ” ಎಂದು ಮನೋಜ್ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ