ಭೋಪಾಲ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ (Kailash Vijayvargiya) ಅವರ ಆಪ್ತ ಮನೋಜ್ (ಮೋನು) ಕಲ್ಯಾಣೆ (Manoj Kalyane) ಅವರನ್ನು ಇಂದೋರ್‌ನಲ್ಲಿ ಇಬ್ಬರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ನಗರದ ಚಿಮನ್ ಬಾಗ್ ಕ್ರಾಸಿಂಗ್‌ಗೆ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಬಿಜೆಪಿ ನಾಯಕ ಮೋನು ಕಲ್ಯಾಣೆ ಅವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ಅರ್ಜುನ್ ಮತ್ತು ಪಿಯೂಷ್ ಎಂದು ಗುರುತಿಸಲಾಗಿದ್ದು, ಕೊಲೆಯ ಹಿಂದಿನ ಕಾರಣ ‘ಹಳೆಯ ದ್ವೇಷ’ವಾಗಿರಬಹುದು. ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಎಂಜಿ ರಸ್ತೆಯ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ನ್ಯಾಯ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಂದೋರ್ ನಗರದ ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿದ್ದ ಮನೋಜ್ ಕಲ್ಯಾಣೆ ಅವರು ಕೈಲಾಶ್ ವಿಜಯವರ್ಗೀಯ ಅವರ ಮಗ ಆಕಾಶ್ ವಿಜಯವರ್ಗಿಯಾ ಸೇರಿದಂತೆ ಅವರ ಕುಟುಂಬಕ್ಕೆ ಆಪ್ತರಾಗಿದ್ದರು. ಬಿಜೆಪಿ ಶಾಸಕ ಗೋಲು ಶುಕ್ಲಾ ಅವರ ಸೂಚನೆಯ ಮೇರೆಗೆ ಇಂದೋರ್ -3 ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಸಂಬಂಧಿಸಿದ ಕೆಲಸಗಳನ್ನು ಅವರು ನಿರ್ವಹಿಸುತ್ತಿದ್ದರು. ಸದ್ಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಸಿಪಿ ಹೇಳಿದ್ದೇನು?
ಇಂದೋರ್ ಎಸಿಪಿ ವಿನೋದ್ ದೀಕ್ಷಿತ್ ಮಾತನಾಡಿ, “ಚಿಮನ್ ಬಾಗ್ ಅಡ್ಡರಸ್ತೆಯ ಬಳಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಅಲ್ಲಿ ಭಾನುವಾರ ಮುಂಜಾನೆ ಬಿಜೆಪಿ ಮುಖಂಡ ಮೋನು ಕಲ್ಯಾಣೆ ಅವರ ಎದೆಗೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ನಾವು ಪಡೆಗಳನ್ನು ನಿಯೋಜಿಸಿದ್ದೇವೆʼʼ ಎಂದು ತಿಳಿಸಿದ್ದಾರೆ. ಗುಂಡು ಹಾರಿಸಿದ ತಕ್ಷಣ ಅಲ್ಲಿದ್ದವರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ ಅವರು ಗಾಳಿಯಲ್ಲಿ ಗುಂಡು ಹಾರಿಸಿ ತಪ್ಪಿಸಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ; ಕಚೇರಿಗೆ ನುಗ್ಗಿ ಒಂದೇ ಸಮನೆ ಗುಂಡು ಹಾರಿಸಿದ ಇಬ್ಬರು ದುಷ್ಕರ್ಮಿಗಳು
ದೆಹಲಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ
ಕಳೆದ ವರ್ಷ ದೆಹಲಿಯ ಬಿಜೆಪಿ ಮುಖಂಡ ಸುರೇಂದ್ರ ಮಟಿಯಾಳ ಎಂಬುವರನ್ನು ಇಬ್ಬರು ಅಪರಿಚಿತರು ಗುಂಡಿಕ್ಕಿ ಇದೇ ರೀತಿ ಕೊಲೆ ಮಾಡಿ ಪರಾರಿಯಾಗಿದ್ದರು. ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ಇರುವ ಕಚೇರಿಯಲ್ಲಿ ಸುರೇಂದ್ರ ಅವರು ಟಿವಿ ನೋಡುತ್ತ ಕುಳಿತಿದ್ದರು. ಸುಮಾರು 7.30ರ ಹೊತ್ತಿಗೆ ಇಬ್ಬರು ಅಪರಿಚಿತರು ಆಫೀಸ್ಗೆ ನುಗ್ಗಿ ಅವರಿಗೆ ಒಂದೇ ಸಮ ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರು. ಸುರೇಂದ್ರ ಅವರ ದೇಹಕ್ಕೆ 4-5 ಗುಂಡುಗಳು ನುಗ್ಗಿದ್ದವು. ಬಳಿಕ ಇಬ್ಬರೂ ಪರಾರಿಯಾಗಿದ್ದರು. ಕೂಡಲೇ ಸುರೇಂದ್ರ ಮಟಿಯಾಳ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಾದರೂ ಅವರು ಅಷ್ಟರಲ್ಲೇ ಮೃತಪಟ್ಟಿದ್ದರು.
ಇನ್ನು ಈ ವರ್ಷದ ಆರಂಭದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕನನ್ನು ರಾಜ್ಯದ ಛತ್ತರ್‌ಪುರ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಹೇಂದ್ರ ಗುಪ್ತಾ ಮೃತರು. ಮಹೇಂದ್ರ ಗುಪ್ತಾ ಅವರಿಗೆ ಸಾಗರ್ ರಸ್ತೆಯ ಬಳಿ ತಲೆಗೆ ಗುಂಡು ಹಾರಿಸಲಾಗಿತ್ತು. ಮೋಟಾರ್ ಸೈಕಲ್‌ನಲ್ಲಿ ಬಂದ ವ್ಯಕ್ತಿ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ.