ನವದೆಹಲಿ: ಲೆ.ಜನರಲ್ ಮನೋಜ್ ಪಾಂಡೆ ದೇಶದ 29ನೇ ಭೂಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈವರೆಗೆ ಸೇನಾ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದು ಮೇ 1ರಿಂದ ಮುಂದಿನ ಸೇನಾ ಮುಖ್ಯಸ್ಥರಾಗಿ ಕಾರ್ಯೋನ್ಮುಖರಾಗಲಿದ್ದಾರೆ. ಪ್ರಸ್ತುತ ಭೂಸೇನಾ ಮುಖ್ಯಸ್ಥರಾಗಿರುವ ಮನೋಜ್ ಮುಕುಂದ್ ನರವಣೆ ಅವರ ಅಧಿಕಾರಾವಧಿ ಏಪ್ರಿಲ್ 30ಕ್ಕೆ ಮುಕ್ತಾಯವಾಗಲಿದೆ. ಮನೋಜ್ ಮುಕುಂದ್ 28 ತಿಂಗಳ ಕಾಲ ಭೂಸೇನಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.
ʼಸೇನೆಯ ಮುಖ್ಯಸ್ಥರಾಗಿ ಲೆ. ಜನರಲ್ ಮನೋಜ್ ಪಾಂಡೆಯವರನ್ನು ಸರ್ಕಾರ ನೇಮಕ ಮಾಡಿದೆ.ʼ
ಮನೋಜ್ ಪಾಂಡೆ ಪಯಣ:
- ಮನೋಜ್ ಪಾಂಡೆ ಮೂಲತಃ ನಾಗಪುರದವರು. ಬಾಂಬೆ ಸ್ಯಾಪ್ಪರ್ಸ್ ವಿಭಾಗದಲ್ಲಿ ಕಾರ್ಯನಿರ್ವಹಣೆ.
- ಮೇಜರ್ ಜನರಲ್ ರ್ಯಾಂಕ್ ಪಡೆದು ಲಡಾಖ್ನ ಪಶ್ಚಿಮ ಭಾಗದ 8 ಪರ್ವತ ವಿಭಾಗದ ಕಮಾಂಡರ್.
- ಸೇನಾ ಕೇಂದ್ರಕಚೇರಿಯಲ್ಲಿ ಹೆಚ್ಚುವರಿ ಮಹಾ ನಿರ್ದೇಶಕ(ADG) ಹಾಗೂ ಮಹಾನಿರ್ದೇಶಕರಾಗಿ(DG) ಕಾರ್ಯ.
- ಅಂಡಮಾನ್ ಹಾಗೂ ನಿಕೋಬಾರ್ನ ಮುಖ್ಯ ಕಮಾಂಡರ್ (Commander-in-Chief, Andaman and Nicobar Command).
- ಪೂರ್ವ ಕಮಾಂಡ್ನಲ್ಲಿ ಮುಖ್ಯ ನಿರ್ದೇಶಕ ಹಾಗೂ ಮುಖ್ಯ ಕಮಾಂಡರ್ ಆಗಿ ಕಾರ್ಯನಿರ್ವಹಣೆ.
- ಸೇನಾ ಮುಖ್ಯಸ್ಥರಾಗಿ ನೇಮಕವಾಗಿರುವ ಮನೋಜ್ ಪಾಂಡೆ, ಸೇನಾ ಮುಖ್ಯಸ್ಥರ ಸ್ಥಾನಕ್ಕೆ ನೇಮಕಗೊಂಡ ಮೊದಲ ಇಂಜಿನಿಯರ್ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.
- ಮನೋಜ್ ಈವರೆಗೆ 117 ಇಂಜಿನಿಯರ್ ರೆಜಿಮೆಂಟ್ನ ಮುಂದಾಳತ್ವ ವಹಿಸಿದ್ದಾರೆ.
- ಜಮ್ಮು ಹಾಗೂ ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಭಾಗದಲ್ಲಿ ʼಆಪರೇಶನ್ ಪರಾಕ್ರಮ್ʼನಲ್ಲಿ ಇಂಜಿನಿಯರ್ ರೆಜಿಮೆಂಟ್ ನೇತೃತ್ವ ವಹಿಸಿದ ಹಿರಿಮೆ.
ಪ್ರಶಸ್ತಿಗಳು:
ಲೆ. ಜನರಲ್ ಮನೋಜ್ ಪಾಂಡೆ ಸೇನೆಯಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ್ದಾರೆ. ಮನೋಜ್ ಅವರ ಸಾಧನೆ, ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಕಾರ್ಯವನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
- ವಿಶಿಷ್ಟ ಸೇವಾ ಪದಕ
- ಅತಿ ವಿಶಿಷ್ಟ ಸೇವಾ ಪದಕ
- ಪರಮ ವಿಶಿಷ್ಟ ಸೇವಾ ಪದಕ
ಏನಿದು ಆಪರೇಶನ್ ಪರಾಕ್ರಮ್?
2001ರ ಡಿಸೆಂಬರ್‌ನಲ್ಲಿ ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಆ ಭಯೋತ್ಪಾದಕರನ್ನು ಭಾರತದ ಪಶ್ಚಿಮ ಗಡಿಯತ್ತ ಕ್ರೋಢೀಕರಿಸಲು ಭಾರತ ಸೇನೆ ʼಆಪರೇಶನ್ ಪರಾಕ್ರಮ್ʼ ಎಂಬ ಸಾಹಸೀ ಕಾರ್ಯಾಚರಣೆ ನಡೆಸಿತ್ತು.
ಸೇನೆಯ ಜತೆಗಿನ ಸಂಬಂಧ
ನಾಗಪುರ ಮೂಲದ ಮನೋಜ್ ಪಾಂಡೆ ಸೇನೆಯೊಡನೆ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಮನೋಜ್ ಕುಟುಂಬದವರು ಸಹ ಸೇನೆಯ ಭಾಗವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮನೋಜ್ ಪಾಂಡೆ ಸಹೋದರ ಸಾಕೇತ್ ಪಾಂಡೆ ಕೂಡ ಸೇನೆಯಲ್ಲಿ ಕರ್ನಲ್ ಹುದ್ದೆಯಲ್ಲಿದ್ದು ನಿವೃತ್ತರಾದವರು. ಮನೋಜ್ ಪುತ್ರ ಅಕ್ಷಯ ಸಹ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶದ ಮೊದಲ ಸಿಡಿಎಸ್ ಬಿಪಿನ್ ರಾವತ್ ಮರಣದಿಂದ ತೆರವಾಗಿರುವ ಸ್ಥಾನಕ್ಕೆ ಈವರೆಗೆ ಯಾವುದೇ ನೇಮಕಾತಿ ನಡೆದಿಲ್ಲ.
ಹೆಚ್ಚಿನ ಓದಿಗಾಗಿ: Explainer: ಏನಿದು ಪಿಎಫ್‌ಐ? ಯಾಕೆ ಬ್ಯಾನ್ ಒತ್ತಾಯ?