ಮುಂಬೈ: ಅಧಿಕಾರ ದುರುಪಯೋಗದ ಆರೋಪದ ಮೇಲೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆಗೊಂಡಿರುವ ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ (Pooja Khedkar) ಸದ್ಯ ವಿವಾದದ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದಾಳೆ. ಇದೀಗ ಆಕೆಯ ತಾಯಿ ಮನೋರಮಾ ಖೇಡ್ಕರ್ (Manorama Khedkar) ವಿರುದ್ಧವೂ ಗಂಭೀರ ಆರೋಪ ಕೇಳಿ ಬಂದಿದ್ದು ಎಫ್‌ಆರ್‌ಐ ದಾಖಲಾಗಿದೆ. ಬಂದೂಕು ಹಿಡಿದು ಜನರನ್ನು ಹೆದರಿಸಿರುವ ಘಟನೆಗೆ ಸಂಬಂಧಿಸಿದಂತೆ ಪೂಜಾ ಖೇಡ್ಕರ್ ಪೋಷಕರಾದ ಮನೋರಮಾ ಖೇಡ್ಕರ್, ದಿಲೀಪ್ ಖೇಡ್ಕರ್ ಮತ್ತು ಇತರ ಐವರ ವಿರುದ್ಧ ಪುಣೆ ಗ್ರಾಮೀಣ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ʼʼಪೌಡ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಐಪಿಸಿ ಸೆಕ್ಷನ್ 323, 504, 506ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆʼʼ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಯಾದವ್ ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
Now a video of #PujaKhedkar's mother Manorama Khedkar has emerged. In this video, she can be seen threatening a villager with a pistol in her hand in Mulshi region of #Pune. https://t.co/rcP3RB4lTl pic.twitter.com/cfKC95iUyE
— Prateek Goyal (@tweets_prateekg) July 12, 2024
ಮನೋರಮಾ ಖೇಡ್ಕರ್ ಬಂದೂಕು ಹಿಡಿದು ಜನರ ಗುಂಪೊಂದಕ್ಕೆ ಬೆದರಿಕೆ ಹಾಕುತ್ತಿರುವ ವಿಡಿಯೊ ವೈರಲ್ ಆದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಇದು ವಿವಾದಾತ್ಮಕ ಅಧಿಕಾರಿ ಪೂಜಾ ಖೇಡ್ಕರ್‌ಗೆ ಇನ್ನಷ್ಟು ಸಂಕಷ್ಟ ತಂದಿತ್ತಿದೆ. ʼʼಮನೋರಮಾ ಖೇಡ್ಕರ್ ಹಿಡಿದುಕೊಂಡಿರುವ ಬಂದೂಕಿಗೆ ಪರವಾನಗಿ ಹೊಂದಿದ್ದಳೆ ಎನ್ನುವುದು ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲಾಗುವುದು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ವಿವಾದ?
ಪೂಜಾಳ ತಂದೆ ದಿಲೀಪ್ ಖೆಡ್ಕರ್ ಒಬ್ಬ ನಿವೃತ ಐಎಎಸ್ ಅಧಿಕಾರಿಯಾಗಿದ್ದು, ಕೋಟ್ಯಂತರ ರೂ.ಗಳ ಆಸ್ತಿ ಹೊಂದಿದ್ದಾರೆ. ಪುಣೆ ಜಿಲ್ಲೆಯ ಮುಲ್ಶಿ ತಾಲೂಕು ಸೇರಿದಂತೆ ಬೇರೆ ಬೇರೆ ಜಾಗಗಳಲ್ಲಿ 25ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಹೊಂದಿದ್ದಾರೆ. ಆದರೆ ಅಕ್ಕಪಕ್ಕದ ರೈತರ ಜಮೀನನ್ನೂ ಕಬಳಿಸಲು ಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರೈತರು ಇದನ್ನು ವಿರೋಧಿಸಿದಾಗ, ಮನೋರಮಾ ಖೇಡ್ಕರ್ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ರೈತರನ್ನು ಬೆದರಿಸಲು ಯತ್ನಿಸಿದ್ದಾಳೆ ಎನ್ನಲಾಗಿದೆ.
ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿದ ಎರಡು ನಿಮಿಷಗಳ ವಿಡಿಯೊದಲ್ಲಿ, ಮನೋರಮಾ ಖೇಡ್ಕರ್ ಕೈಯಲ್ಲಿ ಪಾಕೆಟ್ ಪಿಸ್ತೂಲ್ ಹಿಡಿದು ವ್ಯಕ್ತಿಯೊಬ್ಬನ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು. ಆಕೆ ರೈತನ ಬಳಿ ತೆರಳಿ ಪಿಸ್ತೂಲ್ ತೋರಿಸಿ ಮರಾಠಿಯಲ್ಲಿ ಹೆದರಿಸುತ್ತಾಳೆ. ನನಗೆ ಭೂಮಿಯ ದಾಖಲೆಗಳನ್ನು ತೋರಿಸಿ. ಜಮೀನಿನ ದಾಖಲೆಗಳು ನನ್ನ ಹೆಸರನ್ನು ಹೊಂದಿವೆ ಎಂದು ಹೇಳುತ್ತಾಳೆ. ಮರಾಠಿಯಲ್ಲಿ ವ್ಯಕ್ತಿಯನ್ನು ಎಚ್ಚರಿಸುತ್ತಾಳೆ. ಆಗ ಆ ವ್ಯಕ್ತಿ ಜಮೀನಿನ ದಾಖಲೆಯಲ್ಲಿ ತಮ್ಮ ಹೆಸರಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಉತ್ತರಿಸುತ್ತಾರೆ. ನಂತರ ಮನೋರಮಾ ನ್ಯಾಯಾಲಯದ ಆದೇಶವನ್ನು ತೋರಿಸಿ ಎಂದು ಕೇಳುತ್ತಾಳೆ ಮತ್ತು “ನನಗೆ ನಿಯಮಗಳನ್ನು ಕಲಿಸಬೇಡ” ಎಂದು ಆ ವ್ಯಕ್ತಿಗೆ ಎಚ್ಚರಿಕೆ ನೀಡುತ್ತಾಳೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: Pooja Khedkar: ಯಾರು ಈ ಪೂಜಾ ಖೇಡ್ಕರ್? ವಿಐಪಿ ದರ್ಬಾರ್ ನಡೆಸಿ ಸಿಕ್ಕಿಹಾಕಿಕೊಂಡ ಐಎಎಸ್ ಅಧಿಕಾರಿ!
ಇನ್ನು ಪೂಜಾ ಖೇಡ್ಕರ್ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಕಲಿ ಅಂಗವೈಕಲ್ಯ ಮತ್ತು ಇತರ ಹಿಂದುಳಿದ ವರ್ಗ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಕೆಂಪು-ನೀಲಿ ಬೀಕನ್ ಲೈಟ್ ಮತ್ತು ವಿಐಪಿ ನಂಬರ್ ಪ್ಲೇಟ್‌ನೊಂದಿಗೆ ಖಾಸಗಿ ಆಡಿ ಕಾರನ್ನು ಬಳಸಿದ್ದಕ್ಕಾಗಿ ತನಿಖೆಗೆ ಪೂಜಾ ಖೇಡ್ಕರ್ ಅನ್ನು ಒಳಪಡಿಸಿದಾಗ ಒಬಿಸಿ ಮತ್ತು ದೃಷ್ಟಿಹೀನ ವರ್ಗಗಳ ಅಡಿಯಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ಹಾಜರಾಗಿದ್ದು ಮತ್ತು ಮಾನಸಿಕ ಅಸ್ವಸ್ಥತೆಯ ಪ್ರಮಾಣಪತ್ರವನ್ನೂ ಸಲ್ಲಿಸಿದ್ದು ಬಯಲಾಗಿತ್ತು. ಇದು ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ.