ಪಾಟ್ನಾದ ಶಾಸ್ತ್ರಿನಗರದಲ್ಲಿರುವ ಸ್ಲಮ್ ಏರಿಯಾವೊಂದರಲ್ಲಿ ಭಯಂಕರ ಬೆಂಕಿ (Patna Fire) ಕಾಣಿಸಿಕೊಂಡು, ಅಲ್ಲಿನ ನಿವಾಸಿಗಳು ಗಾಬರಿಯಿಂದ ಓಡಿದ್ದಾರೆ. ಆ ಕೊಳೆಗೇರಿ ಪ್ರದೇಶದಲ್ಲಿ ಪುಟ್ಟಪುಟ್ಟ ಗುಡಿಸಿಲಿನಂಥ ಮನೆಗಳಿದ್ದವು. ಒಂದಾದ ಬಳಿಕ ಒಂದು ಮನೆಗೆ ಬೆಂಕಿ ಆವರಿಸಿಕೊಂಡು ಹೋಗಿದೆ. ಇದರಿಂದಾಗಿ ಸ್ಥಳೀಯರು ತಮ್ಮತಮ್ಮ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್, ಟ್ರಂಕ್ಗಳು, ಬಟ್ಟೆಬರೆಗಳೆಲ್ಲ ಸೇರಿ, ಕೈಯಿಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಹೊರಗೆ ಓಡಿದ್ದಾರೆ. ಇನ್ನೂ ಕೆಲವರು ದೊಡ್ಡದಾಗಿ ಕೂಗುತ್ತ, ಎಲ್ಲರೂ ಬೇಗ ಓಡಿಓಡಿ ಎಂದು ಹೇಳುತ್ತ ತಾವೂ ಓಡಿದ್ದಾರೆ. ಭಾರಿ ಬೆಂಕಿ ಬಿದ್ದು, ಆಕಾಶದೆತ್ತರಕ್ಕೆ ಹೊಗೆ ಎದ್ದಿರುವ, ಜನರೆಲ್ಲ ಓಡುತ್ತಿರುವ, ಗಾಬರಿಯಾಗಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶಾಸ್ತ್ರಿನಗರದಲ್ಲಿರುವ ಈ ಸ್ಲಮ್ನಲ್ಲಿ ಮನೆಗಳಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಚಿಕ್ಕಚಿಕ್ಕ ಮನೆಗಳೆಲ್ಲ ಹತ್ತಿರಹತ್ತಿರವೇ ಇರುವುದರಿಂದ ಬಹುಬೇಗನೇ ಪಸರಿಸಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರು ಅಲ್ಲಿನ ಜನರನ್ನು, ಸಾಕುಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯದವರೆಗೆ ಯಾವುದೇ ಸಾವಿನ ವರದಿಯಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ.
ಇದನ್ನೂ ಓದಿ: Kerala Train Fire : ಬೋಗಿಗೆ ಬೆಂಕಿ ಹಚ್ಚಿ 3 ಜನರ ಕೊಂದ ಆರೋಪಿ ಸೆರೆ, ಪೊಲೀಸರ ಕಾರ್ಯಾಚರಣೆ ಹೇಗಿತ್ತು?