ಹೊಸದಿಲ್ಲಿ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ (Mathura Krishna Janmabhoomi) ದೇಗುಲದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ (Shahi Eidgah mosque) ಸಮೀಕ್ಷೆಗೆ ಅಡ್ವೊಕೇಟ್ ಕಮಿಷನರ್ ನೇಮಕ ಮಾಡಿರುವ ಅಲಹಾಬಾದ್ ಹೈಕೋರ್ಟ್ (Allahabad high court) ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme court) ಮಂಗಳವಾರ ತಡೆಯಾಜ್ಞೆ ನೀಡಿದೆ.
ಸ್ಥಳೀಯ ಆಯುಕ್ತರ ನೇಮಕವನ್ನು ಕೋರಿ ಸಲ್ಲಿಸಲಾದ ಅರ್ಜಿಯು ಅಸ್ಪಷ್ಟವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಆದರೂ, ಮೊಕದ್ದಮೆಗಳ ವಿಚಾರಣೆಯನ್ನು ಮುಂದುವರಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಜನವರಿ 23ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
“ಸಮೀಕ್ಷೆಗೆ ಕಮಿಷನರ್ ನೇಮಿಸಲು ಕೋರಿದ ಅರ್ಜಿಯು ತುಂಬಾ ಅಸ್ಪಷ್ಟವಾಗಿದೆ. ಇದು ನಿರ್ದಿಷ್ಟವಾಗಿರಬೇಕು. ನಿಮಗೆ ಕಮಿಷನರ್ ಯಾವುದಕ್ಕಾಗಿ ಬೇಕು ಎಂದು ನೀವು ಸ್ಪಷ್ಟವಾಗಿ ಹೇಳಬೇಕು. ಆದರೆ ನೀವು ಅದನ್ನು ನ್ಯಾಯಾಲಯಕ್ಕೆ ಬಿಡುತ್ತೀರಿ. ಇದು ಗೊಂದಲಕರ ಅರ್ಜಿಯಾಗಿದೆ” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಹೇಳಿತು.
ಮಸೀದಿಯ ಸಮೀಕ್ಷೆಯ ಮೇಲ್ವಿಚಾರಣೆಗೆ ವಕೀಲ- ಕಮಿಷನರ್ ನೇಮಕಕ್ಕೆ ಡಿಸೆಂಬರ್ 14ರಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕೆ ತಡೆ ನೀಡಿದ ಸುಪ್ರೀಂ ಪೀಠ, ಹಿಂದೂ ವಾದಿಗಳ ಮನವಿಯ ಹಿಂದಿನ ತಾರ್ಕಿಕತೆಯನ್ನು ನಿರ್ದಿಷ್ಟಪಡಿಸಿಲ್ಲ ಎಂದು ಒತ್ತಿ ಹೇಳಿದೆ. “ಕಮಿಷನರ್ ಅನ್ನು ನೇಮಿಸಿ ಎಂದು ನೀವು ಕೇಳುವ ಮುನ್ನ ನೀವು ನಿಖರವಾಗಿ ಏನನ್ನು ಕೇಳುತ್ತಿದ್ದೀರಿ ಎಂಬುದು ಸ್ಪಷ್ಟವಾಗಬೇಕು. ಈ ರೀತಿ ಅರ್ಜಿ ಸಲ್ಲಿಸಲಾಗದು. ಅರ್ಜಿಯನ್ನು ನಾವು ಕಾಯ್ದಿರಿಸಿದ್ದೇವೆ. ಇದು ತುಂಬಾ ಅಸ್ಪಷ್ಟವಾಗಿದೆ” ಎಂದು ಪೀಠವು ಪ್ರಕರಣದಲ್ಲಿ ಹಿಂದೂ ಫಿರ್ಯಾದಿಗಳ ಪರ ಹಾಜರಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರಿಗೆ ತಿಳಿಸಿದೆ.
ದಿವಾನ್ ಇದನ್ನು ವಿರೋಧಿಸಿ, ಕನಿಷ್ಠ ಸಮೀಕ್ಷೆಯ ವಿಧಿವಿಧಾನಗಳನ್ನು ಆರಂಭಿಸಲು ಹೈಕೋರ್ಟ್‌ಗೆ ಅವಕಾಶ ನೀಡಬಹುದು ಎಂದು ಸೇರಿಸಿದರೆ, ಹಾಗೆ ಸದ್ಯಕ್ಕೆ ಮಾಡಲಾಗುವುದಿಲ್ಲ ಎಂದು ಪೀಠವು ಉತ್ತರಿಸಿತು. ವಕೀಲ-ಕಮಿಷನರ್ ನೇಮಕದ ಅರ್ಜಿಯ ಮೇಲಿನ ಪ್ರಶ್ನೆಗಳ ಹೊರತಾಗಿ, ಮೊಕದ್ದಮೆಯ ನಿರ್ವಹಣೆಯ ಬಗ್ಗೆ ಪ್ರಾಥಮಿಕ ಅವಶ್ಯಕತೆಯನ್ನೂ ಪೂರೈಸದೆ ಮಧ್ಯಂತರ ಆದೇಶವನ್ನು ಹೊರಡಿಸಿರುವ ಕಾನೂನು ಸಮಸ್ಯೆಗಳೂ ಪ್ರಕರಣದಲ್ಲಿ ಉದ್ಭವಿಸಿವೆ ಎಂದು ನ್ಯಾಯಾಲಯ ಹೇಳಿದೆ.
ಈದ್ಗಾ ಸಮಿತಿ ಮತ್ತು ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ ಪರ ವಕೀಲ ತಸ್ನೀಮ್ ಅಹ್ಮದಿ ವಾದ ಮಂಡಿಸಿದ್ದರು. ಕೃಷ್ಣ ಜನ್ಮಸ್ಥಾನ-ಶಾಹಿ ಈದ್ಗಾ ಜಮೀನು ವಿವಾದಕ್ಕೆ ಸಂಬಂಧಿಸಿದ ಸುಮಾರು 18 ಮೊಕದ್ದಮೆಗಳನ್ನು ಮಥುರಾದ ವಿವಿಧ ಸಿವಿಲ್ ನ್ಯಾಯಾಲಯಗಳಿಂದ ತನಗೆ ವರ್ಗಾಯಿಸಿಕೊಂಡ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಕೂಡ ಈದ್ಗಾ ಸಮಿತಿ ಪ್ರಶ್ನಿಸಿದೆ. ಜನವರಿ 23ರಂದು ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯದ ಮೇ 26ರ ಆದೇಶದ ಕುರಿತ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಮಸೀದಿ ಭೂಮಿಯ ಮೇಲೆ ಹಕ್ಕು ಸಾಧಿಸುವ ಹಿಂದೂ ಕಕ್ಷಿಗಳು ಸಲ್ಲಿಸಿದ ಎಲ್ಲಾ ಮೊಕದ್ದಮೆಗಳನ್ನು ಹೈಕೋರ್ಟ್ ತನಗೆ ವರ್ಗಾಯಿಸಿಕೊಂಡಿತ್ತು.
ಮಸೀದಿ ಸಮಿತಿಯು 600 ಕಿಲೋಮೀಟರ್ ದೂರದಲ್ಲಿರುವ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೊಕದ್ದಮೆಗಳನ್ನು ಎದುರಿಸಲು ಹಣಕಾಸಿನ ಮೂಲವನ್ನು ಹೊಂದಿಲ್ಲ ಮತ್ತು ಕೇವಲ 150 ಕಿಲೋಮೀಟರ್ ದೂರದಲ್ಲಿರುವ ದೆಹಲಿಯಲ್ಲಿ ಅದನ್ನು ಎದುರಿಸಲು ಬಯಸುತ್ತದೆ ಎಂದು ವಾದಿಸಿದೆ.
ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಥುರಾದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿರುವ ಹಲವು ಮೊಕದ್ದಮೆಗಳು ಮಸೀದಿ ಇರುವ 13.37 ಎಕರೆ ಭೂಮಿಯನ್ನು ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಹಿಂದಿರುಗಿಸಬೇಕೆಂಬ ಸಾಮಾನ್ಯ ಬೇಡಿಕೆಯನ್ನು ಹೊಂದಿವೆ. ಮಸೀದಿಯು ದೇವಸ್ಥಾನದ ಪಕ್ಕದಲ್ಲಿದೆ. 1968ರಲ್ಲಿ ಮಸೀದಿ ಸಮಿತಿ ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘದ ನಡುವೆ ತಾತ್ಕಾಲಿಕ ಸಂಧಾನ ನಡೆದಿತ್ತು.
ಇದನ್ನೂ ಓದಿ: Krishna Janmabhoomi | 4 ತಿಂಗಳಲ್ಲಿ ಕೃಷ್ಣ ಜನ್ಮಭೂಮಿ ಸಮೀಕ್ಷೆ ಕುರಿತು ಆದೇಶಿಸಿ, ಮಥುರಾ ಕೋರ್ಟ್‌ಗೆ ಸೂಚನೆ