Site icon Vistara News

Mayur Mohite: ಶಾಸಕನ ಸೋದರಳಿಯ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಯುವಕ ಸಾವು

Mayur Mohite

Mayur Mohite

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯಮಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗ ಮದ್ಯ ಸೇವಿಸಿ ಐಷಾರಾಮಿ ಪೋರ್ಷೆ ಕಾರು (Pune Porsche Accident) ಓಡಿಸಿ ಇಬ್ಬರ ಸಾವಿಗೆ ಕಾರಣವಾದ ಘಟನೆ ನಡೆದು ಒಂದು ತಿಂಗಳೊಳಗೆ ಅಂತಹದ್ದೇ ಮತ್ತೊಂದು ಪ್ರಕರಣ ಪುಣೆ-ನಾಸಿಕ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮಹಾರಾಷ್ಟ್ರದ ಶಾಸಕರೊಬ್ಬರ ಸಂಬಂಧಿ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು 19 ವರ್ಷದ ಯುವಕ ಅಸುನೀಗಿದ್ದಾನೆ. ಸದ್ಯ ಆರೋಪಿ 34 ವರ್ಷದ ಮಯೂರ್‌ ಮೋಹಿತೆ (Mayur Mohite)ಯನ್ನು ಪೊಲೀಸರು ಬಂಧಿಸಿದ್ದಾರೆ.

ಮಯೂರ್‌ ಮೋಹಿತೆ ಪುಣೆ ಜಿಲ್ಲೆಯ ಖೇಡ್ ಅಲಂಡಿ ವಿಧಾನಸಭಾ ಕ್ಷೇತ್ರದ ಶಾಸಕ ದಿಲೀಪ್ ಮೋಹಿತೆ ಪಾಟೀಲ್ ಅವರ ಸೋದರಳಿಯ. ದಿಲೀಪ್ ಮೋಹಿತೆ ಪಾಟೀಲ್ ಎನ್‌ಸಿಪಿ (ಅಜಿತ್ ಪವಾರ್ ಬಣ) ಶಾಸಕರು. ಮೃತನನ್ನು 19 ವರ್ಷದ ಓಂ ಭಲೇರಾವ್‌ ಎಂದು ಗುರುತಿಸಲಾಗಿದೆ.

ಮಯೂರ್‌ ಮೋಹಿತೆ ಚಲಾಯಿಸುತ್ತಿದ್ದ ಟೊಯೊಟಾ ಫಾರ್ಚೂನರ್‌ ಎಸ್‌ಯುವಿ ರಾಂಗ್‌ ಸೈಡ್‌ನಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ದಿಲೀಪ್ ಮೋಹಿತೆ ಪಾಟೀಲ್, ʼʼಅಪಘಾತದ ನಂತರ ಸೋದರಳಿಯ ಮಯೂರ್‌ ಮೋಹಿತೆ ಸ್ಥಳದಿಂದ ಪಲಾಯನ ಮಾಡಿಲ್ಲ. ಅಲ್ಲದೆ ಡ್ರೈವಿಂಗ್‌ ವೇಳೆ ಆತ ಮದ್ಯ ಸೇವಿಸಿರಲಿಲ್ಲʼʼ ಎಂದು ತಿಳಿಸಿದ್ದಾರೆ.

ಇಬ್ಬರನ್ನು ಕೊಂದ ಉದ್ಯಮಿಯ ಮಗ

ಕಳೆದ ತಿಂಗಳು ಪುಣೆಯಲ್ಲಿ ಶ್ರೀಮಂತ ಉದ್ಯಮಿಯ ಮಗ, 17 ವರ್ಷದ ಅಪ್ರಾಪ್ತನೋರ್ವ ಐಷಾರಾಮಿ ಪೋರ್ಷೆ ಕಾರು ಓಡಿಸಿ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣನಾಗಿದ್ದ. ಆರಂಭದಲ್ಲಿ ಆತನಿಗೆ ಜಾಮೀನು ನೀಡಲಾಗಿತ್ತು. ಬಳಿಕ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಕೇಸ್‌ನ ದಾರಿ ತಪ್ಪಿಸಲು ಯತ್ನಿಸಿದ ಬಾಲಕನ ತಂದೆ, ತಾಯಿ, ಅಜ್ಜ, ವೈದ್ಯಕೀಯ ಸಿಬ್ಬಂದಿಯನ್ನೂ ಬಳಿಕ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಚೆನ್ನೈಯಲ್ಲಿಯೂ ಇದೇ ಮಾದರಿ ಘಟನೆ

ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈಯಲ್ಲಿಯೂ ಇದೇ ಮಾದರಿಯ ಘಟನೆ ವರದಿಯಾಗಿತ್ತು. ರಾಜ್ಯಸಭಾ ಸದಸ್ಯರೊಬ್ಬರ ಮಗಳು ಬಿಎಂಡಬ್ಲ್ಯು (BMW) ಕಾರು ಓಡಿಸಿ 24 ವರ್ಷದ ಯುವಕನನ್ನು ಕೊಂದಿದ್ದಳು. ಅದಾಗ್ಯೂ ಆಕೆಗೆ ಜಾಮೀನು ಲಭಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವೈಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ಸೋಮವಾರ (ಜೂ. 17) ರಾತ್ರಿ ತನ್ನ ಸ್ನೇಹಿತೆಯೊಂದಿಗೆ ಬಿಎಂಡಬ್ಲ್ಯು ಕಾರನ್ನು ಓಡಿಸುತ್ತಿದ್ದಳು. ಈ ವೇಳೆ ಚೆನ್ನೈಯ ಬೆಸೆಂಟ್ ನಗರದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ 24 ವರ್ಷದ ಪೈಂಟರ್‌ ಸೂರ್ಯ ಎಂಬಾತನ ಮೇಲೆ ಕಾರನ್ನು ಚಲಾಯಿಸಿ ಕೊಂದಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿತ್ತು.

ಅಪಘಾತ ನಡೆದ ತಕ್ಷಣ ಮಾಧುರಿ ಸ್ಥಳದಿಂದ ಪರಾರಿಯಾಗಿದ್ದರೆ, ಆಕೆಯ ಸ್ನೇಹಿತೆ ಕಾರಿನಿಂದ ಇಳಿದು ಗುಂಪುಗೂಡಿದ್ದ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವಳೂ ಹೊರಟು ಹೋಗಿದ್ದಳು. ಗಾಯಗೊಂಡಿದ್ದ ಸೂರ್ಯನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ಪ್ರತ್ಯಕ್ಷರ್ಶಿಗಳು ಮಾಹಿತಿ ನೀಡಿದ್ದರು.

ಇದನ್ನೂ ಓದಿ: Pune Porsche Accident: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ಲಂಚ ಪಡೆದಿದ್ದ ವೈದ್ಯರು; ಆಸ್ಪತ್ರೆ ಜವಾನ ಅರೆಸ್ಟ್‌

Exit mobile version