Site icon Vistara News

Microsoft Global Outage: ವಿಶ್ವಾದ್ಯಂತ ನೆಲಕಚ್ಚಿದ ಮೈಕ್ರೋಸಾಫ್ಟ್‌; ವಿಂಡೋಸ್‌ನಲ್ಲಿ ತಾಂತ್ರಿಕ ದೋಷ

Microsoft Global Outage

Microsoft Global Outage

ನವದೆಹಲಿ: ಮೈಕ್ರೋಸಾಫ್ಟ್‌ನ ವಿಂಡೋಸ್‌ನಲ್ಲಿ ಇಂದು ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ವಿಶ್ವಾದ್ಯಂತದ ಬಳಕೆದಾರರು ಪರದಾಡಿದರು (Microsoft Global Outage). ಇದ್ದಕ್ಕಿದ್ದಂತೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ರಿಸ್ಟಾರ್ಟ್‌ ಆಗಿ ಹೈರಾಣಾದರು. ಓಪರೇಟಿಂಗ್‌ ಸಿಸ್ಟಮ್‌ (OS) ಸಮಸ್ಯೆಯಲ್ಲಿ ಸಿಲುಕಿದೆ ಎಂಬ ಸಂದೇಶ ನೀಲಿ ಬಣ್ಣದ ಸಂದೇಶ ಡಿಸ್‌ಪ್ಲೇಯಲ್ಲಿ ಮೂಡಿರುವುದಾಗಿ ಅನೇಕ ಬಳಕೆದಾರರು ತಿಳಿಸಿದ್ದಾರೆ. ಈ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿ ಮೈಕ್ರೋಸಾಫ್ಟ್ ಮತ್ತು ಸಿಇಒ ಸತ್ಯ ನಾದೆಲ್ಲಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಮೈಕ್ರೊಸಾಫ್ಟ್‌ ಕಂಪನಿ, “ಕ್ರೌಡ್‌ಸ್ಟ್ರೈಕ್‌ ಅಪ್‌ಡೇಟ್‌ ಪರಿಣಾಮವಾಗಿ ಈ ಸಮಸ್ಯೆ ಕಂಡು ಬಂದಿದೆ. ಆತಂಕಗೊಳ್ಳಬೇಡಿ, ಇದು ಸರಿಯಾಗಲಿದೆʼʼ ಎಂದಿದೆ.

“ವಿಂಡೋಸ್ ಕಂಪ್ಯೂಟರ್‌ನ ಸ್ಕ್ರೀನ್‌ ಸಡನ್‌ ಆಫ್‌ ಆಯ್ತು”, “ಕಂಪ್ಯೂಟರ್‌ ಆಗಾಗ ರಿಸ್ಟ್ರಾರ್ಟ್‌ ಆಗುತ್ತಿದೆ” ಎಂದೆಲ್ಲ ಕೆಲವರು ಪೋಸ್ಟ್‌ ಮಾಡಿದ್ದಾರೆ. ʼʼನಿಮ್ಮ ಡಿವೈಸ್‌ನಲ್ಲಿ ಸಮಸ್ಯೆ ಇದೆ. ರಿಸ್ಟಾರ್ಟ್‌ ಮಾಡಬೇಕು. ಎರರ್‌ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆʼʼ ಮುಂತಾದ ಸಂದೇಶ ಪರದೆ ಮೇಲೆ ಮೂಡಿದೆ ಎಂದು ಹಲವರು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್‌ ಸೇವೆಗಳಲ್ಲಿನ ಈ ಎರರ್‌ ವಿಮಾನಯಾನ, ಬ್ಯಾಂಕುಗಳು ಸೇರಿ ವಿಶ್ವದಾದ್ಯಂತದ ಹಲವು ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಸ್ಪೈಸ್ ಜೆಟ್, ಅಕಾಸಾ ಏರ್‌ಲೈನ್ಸ್‌ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಸೇರಿದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳೂ ತೊಂದರೆಗೆ ಒಳಗಾಗಿವೆ. ಇದು ವಿಮಾನ ರದ್ದತಿ ಮತ್ತು ವಿಳಂಬಕ್ಕೆ ಕಾರಣವಾಗಿದೆ. “ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ನಮ್ಮ ತಂಡವು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ಸಮಸ್ಯೆಯನ್ನು ಪರಿಹರಿಸಿದ ನಂತರ ನಿಮಗೆ ಮಾಹಿತಿ ನೀಡುತ್ತೇವೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು” ಎಂದು ಸ್ಪೈಸ್ ಜೆಟ್ ಹೇಳಿದೆ.

2023ರಲ್ಲಿಯೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿತ್ತು. ಇದೀಗ ಶೀಘ್ರ ಸರಿಪಡಿಸುವುದಾಗಿ ಕಂಪನಿ ಬಳಕೆದಾರರಿಗೆ ಭರವಸೆ ನೀಡಿದೆ.

ಇದನ್ನೂ ಓದಿ: Facebook Server: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

Exit mobile version