Site icon Vistara News

ಶಾಲೆ ಸಮೀಪದ ಚರಂಡಿಯಲ್ಲಿ 4 ವರ್ಷದ ಮಗುವಿನ ಮೃತದೇಹ ಪತ್ತೆ; ಭುಗಿಲೆದ್ದ ಹಿಂಸಾಚಾರ

Crime News

Crime News

ಪಟನಾ: ನಾಲ್ಕು ವರ್ಷದ ಬಾಲಕನೊಬ್ಬನ ಮೃತದೇಹ ಖಾಸಗಿ ಶಾಲೆಯ ಪಕ್ಕದ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಬಿಹಾರದ ಪಟನಾದಲ್ಲಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಉದ್ರಿಕ್ತರ ಗುಂಪೊಂದು ಶಾಲೆ ಎದುರು ಉಗ್ರ ಪ್ರತಿಭಟನೆ ನಡೆಸಿದ್ದು, ಬೆಂಕಿ ಹಚ್ಚಲು ಯತ್ನಿಸಿದೆ.

ಬಾಲಕನ ಹತ್ಯೆ ಪ್ರಕರಣದ ತನಿಖೆಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಚಂದ್ರ ಪ್ರಕಾಶ್ ಮಾತನಾಡಿ, ʼʼಪಟನಾದ ದಿಘಾ ಪ್ರದೇಶದಲ್ಲಿರುವ ಖಾಸಗಿ ಶಾಲೆಯ ಪಕ್ಕದಲ್ಲಿರುವ ಮಗುವಿನ ಮೃತದೇಹ ಪತ್ತೆಯಾಗಿದೆ. ಸಿಸಿ ಕ್ಯಾಮೆರಾ ಪರಿಶೀಲಸಿದಾಗ ಮಗು ಶಾಲೆಯ ಒಳಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಆದರೆ ಹೊರ ಬಂದಿರುವುದು ದಾಖಲಾಗಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ.

“ನಾವು ಇದನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ನಾವು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಮೃತ ಮಗುವನ್ನು ದಿಘಾದ ರಾಮ್‌ಜಿ ಚಾಕ್ ನಿವಾಸಿ ಶೈಲೇಂದ್ರ ರೈ ಅವರ ಪುತ್ರ ಆಯುಷ್ ಕುಮಾರ್ (4) ಎಂದು ಗುರುತಿಸಲಾಗಿದೆʼʼ ಎಂದು ಅವರು ವಿವರಿಸಿದ್ದಾರೆ.

ಗುರುವಾರ ಸಂಜೆಯಾದರೂ ಮಗು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಶಾಲೆ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸಂಶಯ ಮೂಡಿತ್ತು ಎಂದು ಪೋಷಕರು ಹೇಳಿದ್ದಾರೆ. ಬಳಿಕ ಶಾಲೆ ಆವರಣದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿತ್ತು. ತಮ್ಮ ಮಗುವಿಗೆ ಏನು ಸಂಭವಿಸಿದೆ ಎನ್ನುವ ವಿಚಾರವನ್ನು ಶಾಲೆ ಮುಚ್ಚಿಡುತ್ತಿದೆ ಎಂದು ಪೋಷಕರು ದೂರಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಯುಷ್ ಶಾಲೆಯಲ್ಲಿ ಕಾಣಿಸಿಕೊಂಡಿದ್ದಾನೆ. ಅದಾದ ಬಳಿಕ ನಾಪತ್ತೆಯಾಗಿದ್ದ ಎಂದು ಹೇಳಿದ್ದಾರೆ.

ʼʼಆಯುಷ್ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಶಾಲೆಗೆ ತೆರಳುತ್ತಿದ್ದ. ಸಂಜೆ 5 ಗಂಟೆಗೆ ಮನೆಗೆ ಮರಳುತ್ತಿದ್ದ. ಆದರೆ ಗುರುವಾರ ಆತ ಶಾಲೆಗೆ ಬಂದಿಲ್ಲ ಎಂದು ಪ್ರಿನ್ಸಿಪಾಲ್‌ ತಿಳಿಸಿದ್ದರು. ಬಳಿಕ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ಆತ ಶಾಲೆಯೊಳಗೆ ಪ್ರವೇಶಿಸುತ್ತಿರುವುದು ಪತ್ತೆಯಾಗಿತ್ತು. ಇದರಿಂದ ಸಂಶಯ ಮೂಡಿತ್ತುʼʼ ಎಂದು ಬಾಲಕನ ತಂದೆ ಹೇಳಿದ್ದಾರೆ.

ಸಾವಿಗೆ ಕಾರಣವಾಗಿದ್ದೇನು?

ಬಾಲಕ ಮಧ್ಯಾಹ್ನದ ತನಕದ ತರಗತಿಗೆ ಹಾಜರಾಗಿದ್ದ. ಬಳಿಕ ಶಾಲೆಯಲ್ಲೇ ನಡೆಯುವ ಟ್ಯೂಷನ್‌ಗೂ ತೆರಳಿದ್ದ. ಈ ವೇಳೆ ಆತ ಸ್ಲೈಡರ್‌ನಿಂದ ಜಾರಿ ಬಿದ್ದಿದ್ದು, ತಲೆಗೆ ಏಟಾಗಿತ್ತು. ಅಲ್ಲದೆ ಪ್ರಜ್ಞೆ ಕಳೆದುಕೊಂಡಿದ್ದ. ಇದರಿಂದ ಭಯಭೀತರಾದ ಶಾಲೆಯ ಪ್ರಿನ್ಸಿಪಾಲ್‌ ಮಗ, ಆಡಳಿತ ನಿರ್ದೇಶಕ ಬಾಲಕನನ್ನು ಎತ್ತಿಕೊಂಡು ಹೋಗಿ ಚರಂಡಿಗೆ ಎಸೆದಿದ್ದ ಎಂದು ಮೂಲವೊಂದು ತಿಳಿಸಿದೆ.

ಪ್ರತಿಭಟನೆ

ಮಗುವಿನ ಮೃತದೇಹ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಉಗ್ರ ಪ್ರತಿಭಟನೆ ಆರಂಭಿಸಿದ್ದಾರೆ. ಶಾಲೆ ಎದುರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಶಾಲೆಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಘಟನೆಯಲ್ಲಿ ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ಮಾತ್ರವಲ್ಲ ಶಾಲಾ ವಾಹನಗಳೂ ಜಖಂಗೊಂಡಿವೆ. ಘಟನೆ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯ ಪೊಲೀಸರನ್ನು ಶಾಲೆಯ ಹೊರಗೆ ನಿಯೋಜಿಸಲಾಗಿದೆ. ಸದ್ಯ ಶಾಲಾ ಕಟ್ಟಡದಲ್ಲಿನ ಬೆಂಕಿಯನ್ನು ನಂದಿಸಲಾಗಿದೆ ಮತ್ತು ಶಾಂತಿ ಕಾಪಾಡುವಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ. ಮಾತ್ರವಲ್ಲ ಪ್ರತಿಭಟನಾಕಾರರು ಡಣಾಪುರ-ಗಾಂಧಿ ಮೈದಾನ ರಸ್ತೆ ತಡೆ ನಡೆಸಿದ್ದಾರೆ. ಇದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

Exit mobile version