2014ರ ಮೇ 26ರಂದು ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಸಂಸತ್ತಿನ ಮೆಟ್ಟಿಲುಗಳಿಗೆ ಹಣೆ ಹಚ್ಚಿ ನಮಸ್ಕರಿಸಿ, ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎರಡನೇ ಬಾರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಮತ್ತೆ ಆರಿಸಿ ಬಂದು ಮೂರು ವರ್ಷ ಪೂರೈಸಿದ್ದಾರೆ. ಈ ಎಂಟು ವರ್ಷಗಳಲ್ಲಿ ಅವರ ಆಡಳಿತದಿಂದ ಈ ದೇಶದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಒಳಿತೂ ಆಗಿವೆ, ಕೆಡುಕೂ ಆಗಿವೆ. ನಮ್ಮ ಕಣ್ಣಿಗೆ ನೇರವಾಗಿ ಕಾಣಿಸದೇ ಇರೋ ಹಲವು ಬದಲಾವಣೆಗಳೂ ಆಗಿವೆ. ಅವು ಯಾವುವು ಅಂತ ಇಲ್ಲಿದೆ ನೋಡಿ…
ಒಂದು
ಭಾರತ ಸ್ಟ್ರಾಂಗ್ ಆಗಿದೆ ಎಂಬ ಸಂದೇಶ ತಲುಪಬೇಕಾದಲ್ಲಿಗೆ ತಲುಪಿತು
1947ರಲ್ಲಿ ಬ್ರಿಟಿಷರು ಬಿಟ್ಟು ಹೋದಾಗ ಇದ್ದ ಬಡ ಭಾರತ ಈಗ ಹಾಗಿಲ್ಲ, ನಾವು ಯಾವ ದೇಶದ ಕಿರುಕುಳವನ್ನೂ ಸಹಿಸುವವರಲ್ಲ ಎಂಬ ಖಡಕ್ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ. 1962ರಲ್ಲಿ ಚೀನಾದ ಸೈನ್ಯ ಅರುಣಾಚಲ ಪ್ರದೇಶದಲ್ಲಿ ಸಾವಿರಾರು ಕಿಲೋಮೀಟರ್ ಒಳನುಗ್ಗಿ ಬಂದು ಝಂಡಾ ಊರಿತ್ತು. ಆಗ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಸೋಲು ಒಪ್ಪಿಕೊಂಡಿದ್ದರು. ನಂತರ ಚೀನಾದ ಸೈನ್ಯ ತಾನಾಗಿ ಹಿಂದೆ ಹೋಗಿತ್ತು. ಆದ್ರೆ 2020ರ ಮೇ ತಿಂಗಳಲ್ಲಿ ಹೀಗಾಗಲಿಲ್ಲ. ಹಿಮಾಲಯದ ಲಡಾಕ್‌ನ ಗಲ್ವಾನ್ ಭಾಗದಲ್ಲಿ ಚೀನಾದ ಸೈನಿಕರು ನಮ್ಮ ದೇಶದ ಒಳಗೆ ನುಗ್ಗೋಕೆ ಯತ್ನಿಸಿದಾಗ, ಭಾರತೀಯ ಸೈನಿಕರು ಪ್ರಬಲವಾಗಿ ಪ್ರತಿಭಟಿಸಿದರು. ಹೋರಾಟದ ಸಂದರ್ಭದಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾದರು, ಆದರೆ ಅಷ್ಟೇ ಸಂಖ್ಯೆಯ ಚೀನಾ ಸೈನಿಕರನ್ನು ಬಲಿ ತೆಗೆದುಕೊಂಡರು. ನಮ್ಮ ಸೈನಿಕರಿಗೆ ಈ ಕೆಚ್ಚು, ಈ ಪ್ರತಿಭಟನೆಯ ಕಾವು ಬಂದಿದ್ದು ಎಲ್ಲಿಂದ? ನಮ್ಮ ಹಿಂದೆ ನಮ್ಮ ಸರಕಾರ ಬಲವಾಗಿ ಬಂಡೆಯ ಹಾಗೆ ನಿಲ್ಲುತ್ತೆ ಎಂಬ ಭರವಸೆ ಇಲ್ಲದೇ ಹೋಗಿದ್ರೆ ಇದು ಸಾಧ್ಯವಾಗ್ತಾ ಇರಲಿಲ್ಲ.
ಹಾಗೇ ಉರಿ ವಾಯುಪಡೆ ನೆಲೆ ಮೇಲೆ ನಡೆದ ಉಗ್ರಗಾಮಿಗಳ ದಾಳಿ, ನಂತರ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಕ್ಯಾರವಾನ್ ಮೇಲೆ ನಡೆದ ಎಸ್‌ಯುವಿ ಅಟ್ಯಾಕ್‌ಗಳನ್ನು ಗಂಭೀರವಾಗಿ ಪರಿಗಣಿಸಿದ ನಮ್ಮ ಸೈನ್ಯ, ಪಾಕಿಸ್ತಾನದ ಒಳಗೆ ನುಗ್ಗಿ ಅಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಿತು. ಈ ಸರ್ಜಿಕಲ್ ಸ್ಟ್ರೈಕ್‌ಗಳು ನಮ್ಮ ಅಕ್ಕಪಕ್ಕದ ಶತ್ರು ದೇಶಗಳಲ್ಲಿ ನಡುಕ ಮೂಡಿಸಿದ್ದು ಖಂಡಿತಾ ಸುಳ್ಳಲ್ಲ. ತನ್ನ ಸಾರ್ವಭೌಮತೆಯನ್ನು ರಕ್ಷಿಸೋಕೆ ಭಾರತ ಯಾವ ಲೆವೆಲ್ಲಿಗೆ ಬೇಕಾದ್ರೂ ಹೋಗುತ್ತೆ ಎಂಬ ಸಂದೇಶವನ್ನು ಈ ಘಟನೆಗಳು ರವಾನಿಸಿದವು. ಇದರ ಜೊತೆಗೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು, ಚೀನಾವನ್ನು ಒಂಟಿಯಾಗಿ ಮಾಡೋಕೆ ನಮಗೆ ಸಾಧ್ಯವಾಯಿತು. ನಮ್ಮ ವಿದೇಶಾಂಗ ಸಚಿವರು, ಕಾರ್ಯದರ್ಶಿಗಳು ದಿಟ್ಟ ಧ್ವನಿಯಲ್ಲಿ ಮಾತನಾಡಿದರು. ಇನ್ನೆಂದೂ ಭಾರತವನ್ನು ಕಡೆಗಣಿಸೋಕೆ ಸಾಧ್ಯವಿಲ್ಲ ಅಂತ ಲೋಕಕ್ಕೇ ಅರ್ಥವಾಯಿತು.
ಎರಡು
ತೆರಿಗೆ ವಂಚಿಸೋಕೆ ಈಗ ಸಾಧ್ಯವೇ ಇಲ್ಲ
ಮೋದಿಯವರ ಸರಕಾರ ತಂದ ಎರಡು ಮುಖ್ಯವಾದ ಕ್ರಮಗಳೆಂದರೆ ಸಾವಿರ ರೂಪಾಯಿ ಹಾಗೂ ಐನೂರು ರೂಪಾಯಿ ಮುಖಬೆಲೆಯ ಕರೆನ್ಸಿಗಳನ್ನು ದಿಡೀರನೆ ಡಿಮಾನಿಟೈಸೇಷನ್ ಮಾಡಿದ್ದು ಹಾಗೂ ನಂತರ ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್(ಜಿಎಸ್‌ಟಿ) ಜಾರಿಗೆ ತಂದಿದ್ದು. ಡಿಮಾನಿಟೈಸೇಷನ್ ಸಂದರ್ಭದಲ್ಲಿ ಸಾಮಾನ್ಯ ಜನಕ್ಕೆ ಸಂಕಷ್ಟ ಆಗಿದ್ದು ನಿಜ. ಆದ್ರೆ, ಇನ್ನು ಮುಂದೆ ಕರೆನ್ಸಿಯಲ್ಲಿ ಕಪ್ಪು ಹಣದ ವ್ಯವಹಾರ ನಡೆಸೋಕೆ ಆಗಲ್ಲ ಎಂಬುದು ಭ್ರಷ್ಟಾಚಾರದ ವಹಿವಾಟು ನಡೆಸ್ತಾ ಇದ್ದ ಜನಕ್ಕೆ ಗೊತ್ತಾಗಿ ಹೋಯಿತು. ಅದರ ನಂತರದ ಎರಡನೇ ನಡೆಯಾಗಿ ಜಿಒಎಸ್‌ಟಿ ಜಾರಿಗೆ ತರಲಾಯ್ತು. ಆಗ ಒಟ್ಟಾರೆ ಟ್ಯಾಕ್ಸ್‌ಪೇಮೆಂಟ್ ಮಾಡುವ ರೀತಿನೀತಿಯೇ ಬದಲಾಗಿ ಹೋಯಿತು. ಟ್ಯಾಕ್ಸ್ ಪಾವತಿ ಸುಲಭವಾಯಿತು ಮಾತ್ರವಲ್ಲ ಹೆಚ್ಚು ಪಾರದರ್ಶಕವಾಯ್ತು. ತೆರಿಗೆ ಪಾವತಿ ಮಾಡದೇ ಇರೋರ ಮೇಲೆ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ಹದ್ದಿನಗಣ್ಣು ಇಟ್ಟಿತು. ಹೀಗಾಗಿ ತೆರಿಗೆ ವಂಚನೆ ಮಾಡೋದು ಈಗ ಸುಲಭವಲ್ಲ. 2014ರಲ್ಲಿ ಏಳು ಲಕ್ಷ ಕೋಟಿ ರೂಪಾಯಿ ಇದ್ದ ಟ್ಯಾಕ್ಸ್ ಕಲೆಕ್ಷನ್, ಈಗ ವರ್ಷಕ್ಕೆ 27 ಲಕ್ಷ ಕೋಟಿ ರೂಪಾಯಿಗೆ ಬಂದಿದೆ. ಅಂದರೆ ಎಂಟು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಿದೆ.
ಮೂರು
ಸರಕಾರದ ಕಾಸು ಒಂದು ಪೈಸೆಯೂ ವ್ಯರ್ಥವಾಗಲ್ಲ
ಸರಕಾರದ ಕಡೆಯಿಂದ ಒಂದು ರೂಪಾಯಿ ಬಿಡುಗಡೆಯಾದರೆ ಅದು ಕೊಟ್ಟ ಕೊನೆಯ ಹಳ್ಳಿಗನನ್ನು ತಲುಪುವಷ್ಟರಲ್ಲಿ ಹತ್ತು ಪೈಸೆ ಮಾತ್ರ ಉಳಿದಿರುತ್ತೆ- ಅಂತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಹಿಂದೊಮ್ಮೆ ಹೇಳಿದ್ರು. ಸರಕಾರದ ಎಲ್ಲಾ ದೊಡ್ಡ ದೊಡ್ಡ ಕಲ್ಯಾಣ ಕಾರ್ಯಕ್ರಮಗಳು, ಸೌಲಭ್ಯ ಸವಲತ್ತುಗಳು ಗ್ರಾಮೀಣ ಭಾರತದ ಕೊಟ್ಟ ಕೊನೆಯ ವ್ಯಕ್ತಿಯನ್ನು ತಲುಪುವ ಮೊದಲು ದಲ್ಲಾಳಿಗಳು ಶೇಕಡ ತೊಂಬತ್ತರಷ್ಟನ್ನು ನುಂಗಿ ಹಾಕ್ತಾ ಇದ್ರು. ಈಗ ಸರಕಾರದಿಂದ ಬಿಡುಗಡೆಯಾದ ಅಷ್ಟೂ ಹಣ ಫಲಾನುಭವಿಗಳನ್ನು ತಲುಪ್ತಾ ಇದೆ. ಬ್ಯಾಂಕಿಂಗ್ ಆರ್ಥಿಕ ವ್ಯವಸ್ಥೆಯಿಂದ ಹೊರಗುಳಿದಿದ್ದ ಜನರನ್ನು ವ್ಯವಸ್ಥೆಯೊಳಗೆ ಸೇರ್ಪಡೆಗೊಳಿಸುವ ರಾಷ್ಟ್ರೀಯ ಮಿಷನ್- ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಯನ್ನು ಆಗಸ್ಟ್ 15, 2014ರಂದು ಕೆಂಪು ಕೋಟೆಯಿಂದ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ ಘೋಷಿಸಿದರು. ವಿದ್ಯಾರ್ಥಿವೇತನಗಳು, ಸಬ್ಸಿಡಿಗಳು, ಪಿಂಚಣಿಗಳು ಮತ್ತು ಕೋವಿಡ್ ಪರಿಹಾರ ನಿಧಿಗಳಂತಹ ಪ್ರಯೋಜನಗಳನ್ನು ಜನ್ ಧನ್ ಖಾತೆಗಳು ಸೇರಿದಂತೆ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಲಾಗುತ್ತದೆ. ಈ ವರ್ಷದ ಜನವರಿ 2ರ ಹೊತ್ತಿಗೆ, ಜನ್ ಧನ್ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ 1.5 ಲಕ್ಷ ಕೋಟಿ ರೂಪಾಯಿ ದಾಟಿದೆ. ಹಣಕಾಸು ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2021ರ ಡಿಸೆಂಬರ್ ಅಂತ್ಯದ ವೇಳೆಗೆ 44.23 ಕೋಟಿ ಪಿಎಂಜೆಡಿವೈ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್ 1,50,939.36 ಕೋಟಿ ರೂ. ಆಗಿತ್ತು. ಅಂದರೆ, ಅಷ್ಟು ಹಣ ಸೇರಬೇಕಾದವರನ್ನು ನೇರವಾಗಿ ಸೇರಿದೆ ಎಂದು ಅರ್ಥ. ಇದರ ಜೊತೆಗೆ, ಮುದ್ರಾ ಯೋಜನೆಯ ಮೂಲಕ 35 ಕೋಟಿ ಮಂದಿಗೆ ಸಣ್ಣಪುಟ್ಟ ವ್ಯಾಪಾರಗಳಿಗೆ ಸಾಲ ನೀಡಲಾಗಿದೆ. ಇದು ವ್ಯಾಪಾರ ವಹಿವಾಟಿನಲ್ಲಿ ಒಂದು ಕ್ರಾಂತಿ.
ನಾಲ್ಕು
ಜೇಬಿನಲ್ಲಿ ಹಣವಿಲ್ಲದೇ ಇಡೀ ದೇಶ ಸುತ್ತಾಡಬಹುದು!
ಎಂಟು ಹತ್ತು ವರ್ಷಗಳಿಗೆ ಮೊದಲು ಡಿಜಿಟಲ್ ಪಾವತಿ ಅಂದ್ರೆ ಏನು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಮೆಟ್ರೋಗಳಲ್ಲಿ ಬ್ಲೂ ಕಾಲರ್ ಜಾಬ್‌ಗಳಲ್ಲಿ ಇರುವವರಿಗೆ ಕೂಡ ಆನ್‌ಲೈನ್ ಬ್ಯಾಂಕಿಂಗ್ ಗೊತ್ತಿತ್ತು ಬಿಟ್ರೆ, ತಮ್ಮ ಮೊಬೈಲ್‌ನಲ್ಲಿ ಒಂದು ಆಪ್ ಹಾಕಿಸಿಕೊಳ್ಳುವ ಮೂಲಕ ಎಷ್ಟೇ ದೊಡ್ಡ ಮೊತ್ತದ ಹಣದ ವಹಿವಾಟನ್ನೂ ಒಂದೇ ಒಂದು ಕ್ಲಿಕ್ಕಿನಲ್ಲಿ ಮಾಡಬಹುದು ಅನ್ನೋದು ಗೊತ್ತಿರಲಿಲ್ಲ. ಇಂದು ಹಣದ ವ್ಯವಹಾರಕ್ಕಾಗಿ ಬ್ಯಾಂಕಿಗೆ ಹೋಗೋರು, ಎಟಿಎಂಗೆ ಹೋಗೋರು ಬಹಳ ಕಡಿಮೆ ಸಂಖ್ಯೆಯ ಜನ. ಹೆಚ್ಚಿನವರ ಬಳಿ ಡಿಜಿಟಲ್ ಪಾವತಿ ಆಪ್‌ಗಳಿವೆ. ಎಲ್ಲರಿಗೂ ಯುಪಿಐ ಐಡಿ ದೊರೆಯುವಂತೆ ಮಾಡಿದೆ ಸರಕಾರ. ತರಕಾರಿ ಮಾರುವವರ ಬಳಿಯೂ ಭೀಮ್ ಆಪ್ ಇದೆ. ಒಂದು ರೂಪಾಯೀನ ಕೂಡ ನೀವು ಡಿಜಿಟಲ್ ಪೇಮೆಂಟ್ ಮಾಡಬಹುದು ಮತ್ತು ಜೇಬಿನಲ್ಲಿ ಒಂದು ಪೈಸೆ ಕೂಡ ಇಟ್ಟುಕೊಳ್ಳದೆ ಭಾರತ ತುಂಬಾ ಓಡಾಡಬಹುದು. ಐದು ವರ್ಷಗಳ ಹಿಂದೆ ನೀವು ಇದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಅಲ್ವಾ!
ಇದನ್ನೂ ಓದಿ: Modi 8 years: ಎಂಟು ವರ್ಷಗಳಲ್ಲಿ ಮೋದಿ ಮಾಡಿದ್ದು ಎಲ್ಲವೂ ಸರಿಯೆ? ಇಲ್ಲ, ಏಕೆಂದರೆ…
ಐದು
ಷೇರು ಮಾರುಕಟ್ಟೆ ಬಂಡವಾಳ ಮೂರು ಪಟ್ಟು ಹೆಚ್ಚಾಗಿದೆ
ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 8 ವರ್ಷಗಳಲ್ಲಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇನಲ್ಲಿ 3 ಪಟ್ಟು ಹೆಚ್ಚಳ ಆಗಿದೆ. 1,450 ಷೇರುಗಳ ಮೌಲ್ಯ ಇಮ್ಮಡಿಗೂ ಹೆಚ್ಚು ವೃದ್ಧಿಸಿದೆ. ಮೋದಿ ಸರಕಾರದ ಆರ್ಥಿಕ ಸುಧಾಣಾ ಕ್ರಮಗಳು, ಮಾರುಕಟ್ಟೆಯ ಅಚ್ಚುಕಟ್ಟಾದ ನಿಯಂತ್ರಕ ವ್ಯವಸ್ಥೆ ಸಕಾರಾತ್ಮಕ ಪ್ರಭಾವ ಬೀರಿದೆ. ಕಾರ್ಪೊರೇಟ್‌ಕಂಪನಿಗಳ ಆದಾಯ ವೃದ್ಧಿಗೆ ಸಹಕರಿಸಿದೆ. ಇದು ಅವುಗಳ ಷೇರುಗಳು ಲಾಭ ಗಳಿಸಲೂ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಬಿಎಸ್ಇ ಮಾರುಕಟ್ಟೆ ಬಂಡವಾಳ ಮೌಲ್ಯ 8 ವರ್ಷಗಳ ಹಿಂದೆ 85.20 ಲಕ್ಷ ಕೋಟಿ ರೂ.ಗಳಾಗಿತ್ತು. ಈಗ 253.79 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ 220 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಐಪಿಒ ಮೂಲಕ 3.2 ಲಕ್ಷ ಕೋಟಿ ರೂ.ಗೂ ಹೆಚ್ಚು ಬಂಡವಾಳವನ್ನು ಪಡೆದಿವೆ. ನೋಟು ಅಮಾನ್ಯತೆ, ಜಿಎಸ್‌ಟಿ, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ಗತಿ ಶಕ್ತಿ ಯೋಜನೆ, ಮೇಕಿಂಗ್‌ಇಂಡಿಯಾ, ಡಿಜಿಟಲ್‌ಇಂಡಿಯಾ ಇತ್ಯಾದಿ ಯೋಜನೆಗಳು ಷೇರು ಹೂಡಿಕೆದಾರರನ್ನು ಉತ್ತೇಜಿಸಿವೆ. ಮೋದಿ ನಾಯಕತ್ವದ ಭಾಜಪ ಚುನಾವಣೆಗಳಲ್ಲಿ ಗೆದ್ದಾಗಲೆಲ್ಲಾ ಷೇರು ಪೇಟೆ ಚೇತರಿಸಿದೆ.
ಆರು
ನೀವೀಗ ಕಾಶ್ಮೀರದಲ್ಲಿ ಹಣ ಹೂಡಬಹುದು
ಭೂಮಿಯ ಮೇಲಿನ ಸ್ವರ್ಗ ಎಂದೇ ಹೊಗಳಿಸಿಕೊಂಡಿದ್ದ ಜಮ್ಮು ಕಾಶ್ಮೀರದಲ್ಲಿ ಪ್ರಕೃತಿ ಸೌಂದರ್ಯ ಹೇರಳವಾಗಿ ಇದ್ರೂ, ಅಲ್ಲಿ ಭಾರತದ ಬೇರೆ ಕಡೆಯ ಜನ ಹೋಗೋಕೆ ಹೆದರ್ತಾ ಇದ್ರು. ಅಲ್ಲಿನ ಮೂಲಸೌಕರ್ಯ ಚೆನ್ನಾಗಿರಲಿಲ್ಲ. ಶಿಕ್ಷಣ, ಆರೋಗ್ಯ ಸೇವೆ ಚೆನ್ನಾಗಿರಲಿಲ್ಲ. ಸಾಫ್ಟ್‌ವೇರ್ ಮೊದಲಾದ ಇಂಡಸ್ಟ್ರಿಗಳು ಅಲ್ಲಿ ಯಾವತ್ತೂ ಕಾಲಿಡಲಿಲ್ಲ. ಈಗ ಹಾಗಲ್ಲ. ಆರ್ಟಿಕಲ್ 370 ರದ್ದು ಪಡಿಸಿರೋದರಿಂದಾಗಿ, ಕಾಶ್ಮೀರದ ವಿಶೇಷ ಸ್ಥಾನಮಾನಗಳ ರದ್ದಾಗಿ, ಕಾಶ್ಮೀರದವರಲ್ಲದ ವ್ಯಕ್ತಿಗಳೂ ಕೂಡ ಅಲ್ಲಿ ಉದ್ಯಮ ಆರಂಭಿಸಲು, ಜಮೀನು ಕೊಳ್ಳಲು, ವ್ಯವಹಾರ ನಡೆಸಲು ಸಾಧ್ಯವಾಗ್ತಿದೆ.
ಏಳು
ಒಂದೇ ಒಂದು ಹಗರಣವೂ ಇಲ್ಲ
ಸಾಮಾನ್ಯವಾಗಿ ಒಂದು ಸರಕಾರ ಐದು ವರ್ಷ ಆಡಳಿತ ನಡೆಸಿದಾಗ ಅದರ ಅವಧಿಯಲ್ಲಿ ನಡೆದ ಹಲವಾರು ಹಗರಣಗಳು ಹೊರಗೆ ಬೀಳುತ್ತವೆ. ಆದರೆ ಮೋದಿ ಅವರ ಎಂಟು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದ ಪ್ರಕರಣವೂ ಕಂಡುಬಂದಿಲ್ಲ. ಫ್ರಾನ್ಸ್‌ನಿಂದ 36 ರಫೇಲ್ ಜೆಟ್ ಫೈಟರ್‌ಗಳನ್ನು ಖರೀದಿಸಿದ ಪ್ರಕರಣದಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಆದರೆ ಈ ಆರೋಪವನ್ನು ಸಾಬೀತುಪಡಿಸೋಕೆ ಆಗದೆ, ಸ್ವತಃ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೇ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗಿ ಬಂತು. ಇನ್ನು ಮೋದಿ ಅವರ ಆಡಳಿತ ಇನ್ನಷ್ಟು ಪಾರದರ್ಶಕವಾಗಿ ಇರೋಕೆ ಕಾರಣ ಸ್ವತಃ ಪಾರದರ್ಶಕ ವ್ಯಕ್ತಿತ್ವ ಹೊಂದಿರೋ ವ್ಯಕ್ತಿಗಳನ್ನು ಇಲಾಖೆಯ ಸಚಿವರನ್ನಾಗಿ ಮಾಡಿರೋದು ಮತ್ತು ಜೈಶಂಕರ್ ಅವರಂಥ ಪ್ರಾಮಾಣಿಕ, ಪ್ರತಿಭಾವಂತ ಅಧಿಕಾರಿಗಳನ್ನು ಸಚಿವರ ಲೆವೆಲ್‌ಗೆ ತಂದಿರೋದು.
ಇದನ್ನೂ ಓದಿ: Modi 8 years: ಮೋದಿ – ಶಾ ನೇತೃತ್ವದಲ್ಲಿ ಬಿಜೆಪಿ ಈ ಪರಿ ಬೆಳೆದಿದ್ದು ಹೇಗೆ?
ಎಂಟು
ಮಹಿಳೆಯರಿಗೆ ಮೊದಲಿಗಿಂತ ಹೆಚ್ಚು ಗೌರವ
ಮೋದಿ ಸರಕಾರ ಸ್ತ್ರೀಯರ ಘನತೆ ಹೆಚ್ಚಿಸುವಂಥ ಅನೇಕ ಕಾನೂನುಗಳನ್ನು ತಂದಿದೆ, ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ ತ್ರಿವಳಿ ತಲಾಕ್ ರದ್ದು ಮಾಡಿದ ಕಾಯಿದೆಯಿಂದಾಗಿ, ಶತಮಾನಗಳಿಂದ ಮುಸ್ಲಿಂ ಮಹಿಳೆಯರು ಅನುಭವಿಸ್ತಾ ಇದ್ದ ತಾರತಮ್ಯ ಕೊನೆಯಾಗಿದೆ. ಈಗ ಮೊದಲಿನ ಹಾಗೆ ಗಂಡ ಮೂರು ಸಲ ತಲಾಕ್ ಎಂದು ಹೇಳಿ ಪತ್ನಿಯಿಂದ ಕಳಚಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಸಖಿ ಯೋಜನೆಗಳೆಲ್ಲಾ ವುಮನ್ ಎಂಪವರ್‌ಮೆಂಟ್‌ಗೆ ಪೂರಕವಾಗಿವೆ. ಹಾಗೇ ತಮ್ಮ ಕ್ಯಾಬೆನಟ್‌ನಲ್ಲಿ 11 ಮಹಿಳಾ ಸಚಿವರನ್ನು ಅವರ ಸೇರಿಸಿಕೊಂಡಿರೋದು ಕೂಡ ಮಹಿಳಾ ಪ್ರಾತಿನಿಧ್ಯಕ್ಕೆ ಒಂದು ದ್ಯೋತಕ ಅನ್ನಬಹುದು.
ಒಂಬತ್ತು
ಪರಿಸರ ಸಂರಕ್ಷಣೆಯಲ್ಲಿ ನಾವೇ ಲೀಡರ್
ದಿನೇ ದಿನೇ ಜಾಗತಿಕ ತಾಪಮಾನ ಹೆಚ್ಚಾಗ್ತಾ ಇದೆ. ಇದನ್ನು ತಡೆಯೋಕೆ ಎಲ್ಲಾ ದೇಶಗಳೂ ಸೇರಿ, ಮುಂದಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಕಡಿಮೆ ಮಾಡಿಕೊಳ್ಳೋಣ ಎಂದೆಲ್ಲಾ ಒಪ್ಪಂದ ಮಾಡಿಕೊಳ್ತಾ ಇವೆ. ಒಪ್ಪಂದಗಳೇನೋ ಸರಿ, ಆದರೆ ಎಷ್ಟು ದೇಶಗಳು ಅವನ್ನು ಪ್ರಾಮಾಣಿಕವಾಗಿ ಪಾಲಿಸ್ತಾ ಇವೆ ಅಂತ ಕೇಳಿದರೆ ಉತ್ತರ ಸಿಗೋಲ್ಲ. ಆದರೆ ಭಾರತ, ಸ್ಪಷ್ಟವಾಗಿ ತನ್ನ ಪೊಲ್ಯುಷನ್ ಕಂಟ್ರೋಲ್ ಗುರಿಯನ್ನು ಹೇಳಿರೋದು ಮಾತ್ರವಲ್ಲ, ಅದನ್ನು ಆಚರಿಸ್ತಾನೂ ಇದೆ. ಉದಾಹರಣೆಗೆ, ಕಲ್ಲಿದ್ದಲಿನಿಂದ ಉತ್ಪಾದಿಸೋ ವಿದ್ಯುತ್ ಪ್ರಮಾಣ ಕಡಿಮೆ ಮಾಡಿ, ಮರುಬಳಕೆ ಇಂಧನಗಳನ್ನು ಹೆಚ್ಚಾಗಿ ಬಳಸಬೇಕು ಎಂಬ ಗುರಿಯಿದೆ. ಭಾರತ ಈಗಾಗಲೇ ಶೇ.40ರಷ್ಟು ವಿದ್ಯುತ್ತನ್ನು ಕಲ್ಲಿದ್ದಲು ಹೊರತುಪಡಿಸಿ ಸೋಲಾರ್, ಗಾಳಿ ಮುಂತಾದವುಗಳಿಂದ ಉತ್ಪಾದಿಸ್ತಾ ಇದೆ. ಇನ್ನು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಎಷ್ಟು ಉತ್ತೇಜನ ಕೊಡ್ತಾ ಇದೆ ಅಂದರೆ, ಎಲ್ಲಾ ಅಟೋಮೊಬೈಲ್ ಕಂಪನಿಗಳೂ ಸರಕಾರದ ವೇಗಕ್ಕೆ ಸರಿಯಾಗಿ ಎಲೆಕ್ಟ್ರಿಕ್ ವೆಹಿಕಲ್‌ಗಳನ್ನು ಮಾರುಕಟ್ಟೆಗೆ ಬಿಡ್ತಾ ಇವೆ. 2030ರ ಹೊತ್ತಿಗೆ ಭಾರತದ ರಸ್ತೆಗಳಲ್ಲಿರೋ ವಾಹನಗಳಲ್ಲಿ ಶೇ.50ರಷ್ಟು ಇವಿಗಳಾಗಿರ್ತವೆ ಅಂತ ಅಂದಾಜಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಜಪಾನ್ ಮೊದಲಾದ ದೇಶಗಳ ಜೊತೆಗೆ ಸೋಲಾರ್ ಒಕ್ಕೂಟ ಸ್ಥಾಪಿಸಿದ್ದಾರೆ. ಬೇರೆ ಯಾವ ದೇಶವೂ ಭಾರತದಷ್ಟು ವೇಗವಾಗಿ ಪರಿಸರ ಸಂರಕ್ಷಣೆ ಗುರಿಗಳನ್ನು ಸಾಧಿಸಿಲ್ಲ. ಹೀಗಾಗಿ, ವಿಶ್ವಸಂಸ್ಥೆಯ ಅಧ್ಯಕ್ಷರು ಮೋದಿ ಅವರನ್ನು ʼʼಹಿ ಈಸ್‌ದಿ ಲೀಡರ್ ಆಫ್ ಟ್ಯಾಕ್ಲಿಂಗ್ ಕ್ಲೈಮ್ಯಾಟ್ ಚೇಂಜ್ʼʼ ಎಂದು ಹೇಳಿದ್ದರು.
ಹತ್ತು
ನೀವೀಗ ಗಂಗಾನದಿಯಲ್ಲಿ ಸ್ನಾನ ಮಾಡಬಹುದು!
ಕಳೆದ ಆರೇಳು ವರ್ಷಗಳ ಹಿಂದೆ, ವಾರಾಣಸಿಯಂಥ ತೀರ್ಥಕ್ಷೇತ್ರಗಳಲ್ಲಿ ಕೂಡ ಪವಿತ್ರ ಎನಿಸಿಕೊಂಡ ಗಂಗಾನದಿಯಲ್ಲಿ ಸ್ನಾನ ಮಾಡೋಕೆ ಸಾಧ್ಯವಿರಲಿಲ್ಲ. ಸುತ್ತಮುತ್ತಲಿನ ಕೈಗಾರಿಕೆಗಳ ಕಲುಷಿತ ನೀರು, ನಗರದ ಕಲ್ಮಷ, ಅರ್ಧ ಬೆಂದು ತೇಲಿಬಿಟ್ಟ ಹೆಣಗಳು ಇತ್ಯಾದಿಗಳೆಲ್ಲಾ ಸೇರಿಕೊಂಡು ಗಂಗಾನದಿಯನ್ನು ಮಾಲಿನ್ಯದ ಮಡುವಾಗುವಂತೆ ಮಾಡಿದ್ದವು. ಆದರೆ ಮೋದಿಯವರು ಆರಂಭಿಸಿದ ʼನಮಾಮಿ ಗಂಗಾʼ ಪ್ರಾಜೆಕ್ಟಿನ ಪರಿಣಾಮ ಈಗ ಗಂಗಾನದಿಯ ನೀರು ಸ್ನಾನ ಮಾಡುವಷ್ಟು ಆರೋಗ್ಯಕರವಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ. ಇದಕ್ಕಾಗಿ 5227 ಕಿಲೋಮೀಟರ್‌ನಷ್ಟು ಸೀವೇಜ್ ಟ್ರೀಟ್‌ಮೆಂಟ್ ನೆಟ್‌ವರ್ಕ್ ಸ್ಥಾಪಿಸಿ, ಪ್ರತಿದಿನ ಲಕ್ಷಾಂತರ ಲೀಟರ್ ಕೊಳಚೆ ನೀರನ್ನು ಶುದ್ಧೀಕರಿಸಲಾಗ್ತಾ ಇದೆ. ಅಂದ್ರೆ ನೀವೀಗ ವಾರಾಣಸಿಗೆ ಭೇಟಿ ನೀಡಿದರೆ ಗಂಗಾನದಿಯಲ್ಲಿ ಯಾವುದೇ ಆತಂಕವಿಲ್ಲದೇ ಸ್ನಾನ ಮಾಡಿ ಶುದ್ಧವಾದ ಅನುಭೂತಿ ಹೊಂದಬಹುದು.
ಇದನ್ನೂ ಓದಿ: Visual Info: ಮೋದಿಯ ಅಪ್ಪುಗೆ!