ಬರ್ಲಿನ್: ಐರೋಪ್ಯ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಮದ್ರ ಮೋದಿ ಸೋಮವಾರ ಜರ್ಮನ್ ಚಾನ್ಸಲರ್ ಒಲಾಫ್ ಶೋಲ್ಜ್ ಅವರನ್ನು ಭೇಟಿ ಮಾಡಿದರು. ಇಬ್ಬರೂ ನಾಯಕರು ರಾಜತಾಂತ್ರಿಕ, ಪ್ರಾದೇಶಿಕ ಹಾಗೂ ಜಾಗತಿಕ ವಿಚಾರಗಳಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಮೂರು ದೇಶಗಳ ಪ್ರವಾಸ ಮಾಡಲಿರುವ ಮೋದಿ ಮೊದಲಿಗೆ ಜರ್ಮನಿ ಪ್ರವಾಸದಲ್ಲಿದ್ದಾರೆ. ನಂತರದ ಎರಡು ದಿನ ಡೆನ್ಮಾರ್ಕ್ ಹಾಗೂ ಫ್ರಾನ್ಸ್ ಪ್ರವಾಸಕ್ಕೆ ತೆರಳಲಿದ್ದಾರೆ. ಇಡೀ ಯುರೋಪ್ ರಷ್ಯಾ ವಿರುದ್ಧ ತಿರುಗಿಬಿದ್ದಿರುವ ಸಮಯದಲ್ಲಿ ಪ್ರಧಾನಿ ಮೋದಿ ಇದೇ ದೇಶಗಳಿಗೆ ಪ್ರವಾಸ ಮಾಡುತ್ತಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ಖಂಡಿಸಬೇಕು ಎಂದು ಭಾರತವನ್ನು ಐರೋಪ್ಯ ರಾಷ್ಟ್ರಗಳು ಹಾಗೂ ಅಮೆರಿಕ ಒತ್ತಾಯ ಮಾಡಿದ್ದವು. ಆದರೆ ಭಾರತ ಮಾತ್ರ ಉಕ್ರೇನ್‌ನಲ್ಲಿ ನಡೆಯುತ್ತಿರುವ ಮಾನವ ಹತ್ಯೆಗಳನ್ನು ಖಂಡಿಸಿತೇ ವಿನಃ ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿಲ್ಲ. ಹೀಗಾಗಿ ಪ್ರಧಾನಿ ಮೋದಿ ಪ್ರವಾಸದ ವೇಳೆ ಐರೋಪ್ಯ ದೇಶಗಳು ಈ ಕುರಿತು ಒತ್ತಾಯ ಮಾಡುವ ಸಾಧ್ಯತೆಗಳೂ ಇವೆ.
ಬೆಳಗ್ಗಿನ ಸಮಯದಲ್ಲಿ ಬರ್ಲಿನ್‌ಗೆ ಆಗಮಿಸಿದ ಮೋದಿ ಅವರನ್ನು ಚಾನ್ಸಲರ್ ಒಲಾಫ್ ಶೋಲ್ಜ್ ಬರಮಾಡಿಕೊಂಡರು. ಬರ್ಲಿನ್‌ನಲ್ಲಿರುವ ಅನುವಾಸಿ ಭಾರತೀಯರು ಪ್ರಧಾನಿಯವರ ಬರುವಿಕೆಯನ್ನು ಕಾದು ಸ್ವಾಗತಿಸಿದರು.
ಆಗಮನದ ನಂತರ ಟ್ವೀಟ್ ಮಾಡಿದ ಮೋದಿ, ಬರ್ಲಿನ್‌ಗೆ ಆಗಮಿಸಿದ್ದೇನೆ. ಚಾನ್ಸಲರ್ ಒಲಾಫ್ ಶೋಲ್ಜ್ ಅವರ ಜತೆಗೆ ಹಾಗೂ ಉದ್ಯಮ ನಾಯಕರ ಜತೆಗೆ ಚರ್ಚೆ ನಡೆಸಲಿದ್ದೇನೆ ಹಾಗೂ ಸಮುದಾಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದೇನೆ. ಭಾರತ ಹಾಗೂ ಜರ್ಮನಿ ನಡುವಿನ ಸ್ನೇಹವನ್ನು ಈ ಭೇಟಿ ಉತ್ತೇಜಿಸುತ್ತದೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ.