ಮುಂಬೈ, ಮಹಾರಾಷ್ಟ್ರ: ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ಬಿಜೆಪಿಯ ಥಿಂಕ್ ಟ್ಯಾಂಕ್‌ನಲ್ಲಿ ಪರ್ಯಾಯ ಯೋಚನೆಗೆ ಕಾರಣವಾಗಿದೆಯೇ? ಹೌದು, ಇಂಥದೊಂದು ಅನುಮಾನ ಬರಲು ಕಾರಣವಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಮುಖವಾಣಿಯಾಗಿರುವ ಆರ್ಗೈನಸರ್ (Organizer) ವಾರ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಇದಕ್ಕೆ ಪುಷ್ಟಿ ನೀಡುತ್ತದೆ. ಚುನಾವಣೆ ಗೆಲ್ಲಲು ಮೋದಿ (Modi Magic) ನಾಮಬಲ, ಹಿಂದುತ್ವವು (hindutva) ಪ್ರತಿಬಾರಿಯೂ ಕೆಲಸ ಮಾಡುವುದಿಲ್ಲ ಎಂದು ಕಟುವಾಗಿ ಟೀಕಿಸಿದೆ.
ಕರ್ನಾಟಕದಲ್ಲಿನ ಹೀನಾಯ ಸೋಲು ಮತ್ತು ಮುಂಬರುವ 2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ವರದಿಯು ಮಹತ್ವ ಪಡೆದುಕೊಂಡಿದೆ. ಬಿಜೆಪಿಯ ಎಲ್ಲ ಚುನಾವಣೆಗಳನ್ನು ಮೋದಿ ಮ್ಯಾಜಿಕ್‌ನಿಂದಲೇ ನಡೆಯುತ್ತದೆ ಎಂದು ಭಾವಿಸುತ್ತದೆ. ಆದರೆ, ಈಗ ಮೋದಿ ಮ್ಯಾಜಿಕ್ ನಡೆಯುತ್ತಿಲ್ಲ ಎಂಬುದು ಸಾಬೀತಾಗಿದೆ ಎಂಬ ರೀತಿಯಲ್ಲಿ ಆರೆಸ್ಸೆಸ್ ಮುಖವಾಣಿ ವರದಿಯನ್ನು ಪ್ರಕಟಿಸಿದೆ. ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಪ್ರಭಾವಿ ನಾಯಕತ್ವ ಅಗತ್ಯವಾಗಿದೆ. ಪ್ರಾದೇಶಿಕವಾಗಿ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಾದೇಶಿಕ ಮಟ್ಟದಲ್ಲಿ ಪ್ರಬಲ ನಾಯಕತ್ವ ಮತ್ತು ಪರಿಣಾಮಕಾರಿ ಪ್ರಯತ್ನವಿಲ್ಲದೇ, ಪ್ರಧಾನಿ ಮೋದಿಯವರ ವರ್ಚಸ್ಸು ಮತ್ತು ಹಿಂದುತ್ವವು ಸೈದ್ಧಾಂತಿಕ ವಿಷಯಗಳು ಚುನಾವಣೆ ಗೆಲ್ಲಲು ಸಾಕಾಗುವುದಿಲ್ಲ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಕರ್ನಾಟಕ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪರವಾಗಿ ಹೊರಬಂದಿವೆ. ಆದರೆ 2024 ರ ಲೋಕಸಭೆ ಚುನಾವಣೆಯಲ್ಲಿ ಸೋಲುವುದು ಒಳ್ಳೆಯ ಹಾದಿಯಂತೂ ಅಲ್ಲ. ಹಾಗಾಗಿ, ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿಗೆ ಇದು ಸರಿಯಾದ ಸಮಯ ಎಂದು ಅದು ಹೇಳಿದೆ.
ಕರ್ನಾಟಕದ ಚುನಾವಣೆಯಲ್ಲಿ ಭ್ರಷ್ಟಾಚಾರವು ಪ್ರಮುಖ ವಿಷಯವಾಗಿತ್ತು. ಮೋದಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭ್ರಷ್ಟಾಚಾರದ ಆರೋಪಗಳನ್ನು ಸಮರ್ಥಿಸಿಕೊಳ್ಳಬೇಕಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Jagadish Shettar: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿಯೇ ಸೋತಿದೆ: ಜಗದೀಶ್ ಶೆಟ್ಟರ್
ಕರ್ನಾಟಕ ಚುನಾವಣೆಯಲ್ಲಿ ಆಡಳಿತ ಪಕ್ಷವು (ಬಿಜೆಪಿ) ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳೊಂದಿಗೆ ಮತದಾರರನ್ನು ಹುರಿದುಂಬಿಸಲು ಅತ್ಯುತ್ತಮವಾಗಿ ಪ್ರಯತ್ನಿಸಿತು. ಆದರೆ, ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ತನ್ನ ದಾಳಿ ಉರುಳಿಸಿತು. ಹಾಗಾಗಿ, ಅತಿ ಹೆಚ್ಚು ಮತದಾನವಾದ ಈ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಈ ಹಿಂದಿನ ಮತ ಪ್ರಮಾಣವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಇದರಿಂದ ಹೀನಾಯವಾಗಿ ಸೋತಿತು. ಹಾಲಿ ಸಚಿವರ ವಿರುದ್ಧದ ಆಡಳಿತ ವಿರೋಧಿ ನಿಲುವು ಬಿಜೆಪಿಗೆ ಮುಳುವಾಯಿತು ಎಂದು ಆರ್ಗನೈಸರ್ ಹೇಳಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.