Site icon Vistara News

Modi Meditation: ಕನ್ಯಾಕುಮಾರಿಯಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಸೂರ್ಯ ವಂದನೆ; ವಿಡಿಯೊ ನೋಡಿ

Modi Meditation

Modi Meditation

ಚೆನ್ನೈ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ನಡೆಸುತ್ತಿದ್ದಾರೆ. ಮೋದಿ ಅವರ ಧ್ಯಾನ ಶನಿವಾರ ಕೊನೆಯ ದಿನಕ್ಕೆ ಕಾಲಿಟ್ಟಿದೆ (Modi Meditation). ಮೋದಿ ಧ್ಯಾನ ಮಾಡುತ್ತಿರುವ ವಿಡಿಯೊ ಸದ್ಯ ಹೊರ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಶನಿವಾರ ಬೆಳಗಿನ ಜಾವವೇ ಎದ್ದ ಪ್ರಧಾನಿ ಮೋದಿ ಭಕ್ತಿಯ ಪ್ರತೀಕವಾಗಿರುವ ಕಾವಿ ಉಡುಗೆ ತೊಟ್ಟು ಹಣೆಗೆ ವಿಭೂತಿ ಮತ್ತು ತಿಲಕವನ್ನಿಟ್ಟು ಕೈಯಲ್ಲಿ ಜಪಮಣಿಯೊಂದಿಗೆ ಮಂತ್ರ ಪಠಿಸುತ್ತಾ ಸೂರ್ಯೋದಯ ವೀಕ್ಷಿಸಿದರು ಮತ್ತು ಸೂರ್ಯನಿಗೆ ವಂದನೆ ಸಲ್ಲಿಸಿದರು.

ಮೋದಿ ದಿನಚರಿ ಹೀಗಿದೆ

ಸೂರ್ಯೋದಯದ ವೇಳೆ ವಿವೇಕಾನಂದ ಶಿಲೆ ಸ್ಮಾರಕದಲ್ಲಿ ಮೋದಿ ಸೂರ್ಯ ಆರ್ಘ್ಯವನ್ನೂ ಅರ್ಪಿಸಿದರು. ಸೂರ್ಯನ ರೂಪದಲ್ಲಿ ಪ್ರಕಟವಾದ ಸರ್ವಶಕ್ತನಿಗೆ ನಮಸ್ಕರಿಸುವ ಆಧ್ಯಾತ್ಮಿಕ ರೀತಿಗೆ ‘ಸೂರ್ಯ ಅರ್ಘ್ಯ’ ಎಂದು ಕರೆಯಲಾಗುತ್ತದೆ. ಸಣ್ಣ ಪಾತ್ರೆಯಿಂದ ಸ್ವಲ್ಪ ನೀರನ್ನು ಸಮುದ್ರಕ್ಕೆ ಅರ್ಘ್ಯವಾಗಿ ಸುರಿದ ಪ್ರಧಾನಿ ಜಪಮಾಲೆ ಬಳಸಿ ಪ್ರಾರ್ಥಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಜತೆಗೆ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮೋದಿ ಪುಷ್ಪ ನಮನ ಸಲ್ಲಿಸಿದರು. ಅವರು ಕೈಯಲ್ಲಿ ಜಪಮಾಲೆ ಹಿಡಿದು ಮಂಟಪದ ಸುತ್ತಲೂ ಹೆಜ್ಜೆ ಹಾಕಿದರು. ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ನಂತರ ಅವರು ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಸ್ವಲ್ಪ ಹೊತ್ತು ಕುಳಿತುಕೊಂಡರು.

ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ. ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು. ಇದೇ ಕಾರಣಕ್ಕಾಗಿ ವಿವೇಕಾನಂದ ರಾಕ್‌ ಮೆಮೋರಿಯಲ್‌ನಲ್ಲಿ ಮೋದಿ ಅವರು ಧ್ಯಾನ ಮಾಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ವಿವೇಕಾನಂದ ಬಂಡೆಯ ಮಹತ್ವ ಏನು?

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು. ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Exit mobile version