Site icon Vistara News

ಬಿಜೆಪಿಯೇತರ ಸರ್ಕಾರಗಳಿಂದ ಜನರಿಗೆ ಅನ್ಯಾಯ: ಇಂಧನ ತೆರಿಗೆ ಇಳಿಸಿದ ಬೊಮ್ಮಾಯಿ ಸರ್ಕಾರಕ್ಕೆ ಮೋದಿ ಶ್ಲಾಘನೆ

ಬೆಂಗಳೂರು: ದೇಶದಲ್ಲಿ ದಿನೇದಿನೆ ಇಂಧನ ದರ ಹೆಚ್ಚಳವಾಗುತ್ತ ಜನರ ಜೇಬನ್ನು ಸುಡುತ್ತಿದೆ. ಕೇಂದ್ರ ಸರ್ಕಾರದ ಕೋರಿಕೆಯನ್ನು ಮನ್ನಿಸದೆ ಅನೇಕ ರಾಜ್ಯ ಸರ್ಕಾರಗಳು ಇಂಧನದ ಮೇಲಿನ ತಮ್ಮ ತೆರಿಗೆಯನ್ನು ಕಡಿತ ಮಾಡದ ಪರಿಣಾಮವಾಗಿ ಆ ರಾಜ್ಯಗಳ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಬುಧವಾರ ದೂಷಿಸಿದ್ದಾರೆ.

ಕೋವಿಡ್‌-19 ಪರಿಸ್ಥಿತಿ ಕುರಿತು ಚರ್ಚಿಸಲು ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಯೋಜಿಸಲಾಗಿದ್ದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಆರೋಗ್ಯ ಸಚಿವರ ಸಭೆಯನ್ನುದ್ದೇಸಿಸಿ ಮೋದಿ ಮಾತನಾಡಿದರು. (ಕಾರ್ಯಕ್ರಮದಲ್ಲಿ ಮೋದಿ ಭಾಷಣದ ಪೂರ್ಣ ಪಾಠಕ್ಕಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ)

ತಮ್ಮ 20 ನಿಮಿಷದ ಭಾಷಣದ ಆರಂಭದಲ್ಲಿ ಕೋವಿಡ್‌ ಕುರಿತು ಮಾತನಾಡಿದ ಮೋದಿ, ಅಂತಿಮ ಹಂತದಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಪ್ರಸ್ತಾಪಿಸಿದರು. ಕೋವಿಡ್‌ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದ್ದರಿಂದಲೇ ದೇಶದಲ್ಲಿ ಸೋಂಕನ್ನು ಹತ್ತಿಕ್ಕಲು ಸಾಧ್ಯವಾಯಿತು ಎಂದು ಶ್ಲಾಘಿಸಿದ ಮೋದಿ, ಇಂಧನ ವಿಚಾರಕ್ಕೆ ಹೊರಳಿದರು.

ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕ ನಿರ್ಣಯಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಂಯೋಜನೆ ಹಿಂದಿಗಿಂತ ಹೆಚ್ಚು ಅವಶ್ಯಕವಿದೆ. ಇದೀಗ ಯುದ್ಧ ಪರಿಸ್ಥಿತಿ ಉಂಟಾಗಿದೆ. ಸಪ್ಲೈ ಚೈನ್‌ ಪರಿಣಾಮ ನೋಡಿದರೆ, ಪ್ರತಿದಿನ ಸವಾಲು ಹೆಚ್ಚಾಗುತ್ತಿದೆ. ಈ ಯುದ್ಧ ಅನೇಕ ಸವಾಲು ತಂದೊಡ್ಡುತ್ತಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಮನ್ವಯತೆಯನ್ನು ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ.

ಪೆಟ್ರೋಲ್‌ ಡೀಸೆಲ್‌ ದರ ಹೆಚ್ಚಳವಾಗಿರುವುದರ ಕುರಿತು ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ದೇಶವಾಸಿಗಳ ಮೇಲೆ ಇದರ ಭಾರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಸುಂಕ ಕಡಿಮೆ ಮಾಡಿದೆ. ರಾಜ್ಯಗಳೂ ತಮ್ಮ ತೆರಿಗೆಯನ್ನು ಕಡಿತ ಮಾಡಲು ಕಳೆದ ನವೆಂಬರ್‌ನಲ್ಲೆ ಆಗ್ರಹ ಮಾಡಲಾಗಿತ್ತು. ಇದರ ಲಾಭವನ್ನು ನಾಗರಿಕರಿಗೆ ತಲುಪಿಸಲು ಕೋರಿದ್ದೆವು. ಕೆಲವು ರಾಜ್ಯಗಳು ಕಡಿಮೆ ಮಾಡಿದವು. ಆದರೆ ಕೆಲವು ರಾಜ್ಯಗಳಿಂದಾಗಿ ಅವರ ನಾಗರಿಕರಿಗೆ ಅದರ ಲಾಭ ಸಿಕ್ಕಿಲ್ಲ. ಇದರಿಂದಾಗಿ ಈ ರಾಜ್ಯಗಳಲ್ಲಿ ಬೇರೆಯವರ ಹೋಲಿಕೆಯಲ್ಲಿ ಇಂಧನ ದರ ಹೆಚ್ಚಿದೆ. ಇದು ಈ ರಾಜ್ಯಗಳ ಜನರಿಗೆ ಅನ್ಯಾಯ ಹಾಗೂ ಪಕ್ಕದ ರಾಜ್ಯಗಳ ಮೇಲೆಯೂ ಹೊರೆಯಾಗುತ್ತಿದೆ ಎಂದರು.

ಇದನ್ನೂ ಓದಿ: ಪ್ರತಿ ಪ್ರಧಾನಿಯನ್ನೂ ಸ್ಮರಿಸುವ ಪ್ರಯತ್ನ: ‘ಮನ್ ಕಿ ಬಾತ್’ ನಲ್ಲಿ PM ಸಂಗ್ರಹಾಲಯ ಪ್ರಸ್ತಾಪಿಸಿದ ಮೋದಿ

ಕೇಂದ್ರದ ಕೋರಿಕೆಯನ್ನು ಮನ್ನಿಸಿ ರಾಜ್ಯಗಳ ಅಬಕಾರಿ ಸುಂಕವನ್ನು ಕಡಿತ ಮಾಡಿದ ಕರ್ನಾಟಕ ಹಾಗೂ ಗುಜರಾತ್‌ ಸರ್ಕಾರಗಳನ್ನು ಪ್ರಸ್ತಾಪಿಸಿದ ಮೋದಿ ಪರೋಕ್ಷವಾಗಿ ಶ್ಲಾಘನೆ ವ್ಯಕ್ತಪಡಿಸಿದರು. 2021ರ ನವೆಂಬರ್‌ ತಿಂಗಳಿನಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಹೆಚ್ಚಿದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುತಮ್ಮ ತೆರಿಗೆಯನ್ನು ಕಡಿತ ಮಾಡಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು. ಈ ಸಮಯದಲ್ಲಿ ಪೆಟ್ರೋಲ್‌ ಮೇಲಿನ ಅಬಕಾರಿ ತೆರಿಗೆಯನ್ನು ₹5 ಹಾಗೂ ಡೀಸೆಲ್‌ ಮೇಲಿನ ಅಬಕಾರಿ ತೆರಿಗೆಯನ್ನು ₹10 ಕಡಿತ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ದೀಪಾವಳಿ ಉತ್ಸವಕ್ಕೂ ಮುನ್ನ ಕೈಗೊಂಡ ಈ ನಿರ್ಧಾರವನ್ನು ರಾಜ್ಯ ಸರ್ಕಾರಗಳೂ ಅನುಸರಿಸಲು ಕೋರಲಾಗಿತ್ತು.ʼ

ರಾಜ್ಯ ಸರ್ಕಾರಗಳು ಇಂಧನದ ಮೇಲೆ ವಿಧಿಸುವ ತೆರಿಗೆಯನ್ನು ಕಡಿತ ಮಾಡಿ, ಜನರಗೆ ಅನುಕೂಲ ಮಾಡಿಕೊಡಲು ತಿಳಿಸಲಾಗಿತ್ತು. ಈ ಕರೆಗೆ ಓಗೊಟ್ಟ ಕರ್ನಾಟಕ, ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತನ್ನ ತೆರಿಗೆ ಪಾಲನ್ನು ಕಡಿತ ಮಾಡಿತ್ತು. ₹104.50 ಇದ್ದ ಡೀಸೆಲ್‌ ದರ ₹19.47 ಕಡಿಮೆಯಾಗಿ ₹85.03 ಹಾಗೂ ಪೆಟ್ರೋಲ್‌ ದರ ₹113.93ರಿಂದ ₹13.30 ಕಡಿಮೆಯಾಗಿ ₹100.63 ಆಗಿತ್ತು. ಕೇಂದ್ರ ಸರ್ಕಾರದ ಕರೆಗೆ ಓಗೊಟ್ಟು ಜನಪರ ತೀರ್ಮಾನ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಎಂದು ಎಂದು ಸಿಎಂ. ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಆನಂತರದಲ್ಲಿ ಗುಜರಾತ್‌ ಸೇರಿ ಕೆಲವು ರಾಜ್ಯಗಳು ಇದೇ ಕ್ರಮವನ್ನು ಅನುಸರಿಸಿದ್ದವು.

ಈ ವಿಚಾರವನ್ನು ಬುಧವಾರದ ಭಾಷಣದಲ್ಲಿ ಮೋದಿ ಪ್ರಸ್ತಾಪಿಸಿದರು. ಕರ್ನಾಟಕ ತೆರಿಗೆ ಕಡಿತ ಮಾಡದಿದ್ದರೆ ₹5,000 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತಿತ್ತು. ಅದೇ ರೀತಿ ತೆರಿಗೆ ಕಡಿಮೆ ಮಾಡಿದ್ದರಿಂದ ಗುಜರಾತ್‌ ರಾಜ್ಯಕ್ಕೆ ಸುಮಾರು ₹3,500 ಕೋಟಿ ತೆರಿಗೆ ನಷ್ಟವಾಗಿದೆ. ಇದೇ ವೇಳೆ ಗುಜರಾತ್‌ ಹಾಗೂ ಕರ್ನಾಟಕದ ಪಕ್ಕದ ರಾಜ್ಯಗಳು ₹3,500-₹5,000 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹಿಸಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ಜಾರ್ಖಂಡ್‌ ಸೇರಿ ಅನೇಕ ಕಾರಣಗಳಿಂದ ಕೇಂದ್ರದ ಮಾತನ್ನು ಕೇಳಿಲ್ಲ. ಆ ರಾಜ್ಯದ ಜನರ ಮೇಲಿನ ಹೊರೆ ಮುಂದುವರಿದಿದೆ. ಈ ರಾಜ್ಯಗಳು ಹೆಚ್ಚು ಆದಾಯ ಗಳಿಸಿವೆ. ದೇಶ ಹಿತದಲ್ಲಿ, ಕಳೆದ ನವೆಂಬರ್‌ನಲ್ಲಿ ತೆರಿಗೆ ಕಡಿಮೆ ಮಾಬೇಕಿತ್ತು. ಈಗಲಾದರೂ ನಿಮ್ಮ ರಾಜ್ಯದ ನಾಗರಿಕರಿಗೆ ಇದರ ಲಾಭ ವರ್ಗಾವಣೆ ಮಾಡಿ ಎಂದು ಕೋರುತ್ತೇನೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯದಲ್ಲಿ 42% ರಾಜ್ಯಗಳಿಗೇ ಸಿಗುತ್ತದೆ. ಜಾಗತಿಕ ಸಂಕಷ್ಟದ ಸಮಯದಲ್ಲಿ ಒಂದು ತಂಡವಾಗಿ ನಾವೆಲ್ಲರೂ ಕೆಲಸ ಮಾಡಬೇಕು. ರಸಗೊಬ್ಬರಕ್ಕಾಗಿ ನಾವು ಬೇರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ರೈತರ ಮೇಲೆ ನಾವು ಹೊರೆ ಹೊರಿಸಿಲ್ಲ. ನಿಮ್ಮ ರಾಜ್ಯ, ನೆರೆ ರಾಜ್ಯ ಹಾಗೂ ದೇಶವಾಸಿಗಳ ಹಿತದಲ್ಲಿ ಪ್ರಾಥಮಿಕತೆ ನೀಡಿ ಎಂದರು.

ಇಷ್ಟಕ್ಕೇ ಮಾತು ನಿಲ್ಲಿಸದ ಮೋದಿ, ಪ್ರತಿ ರಾಜ್ಯದ ಹೆಸರು ಹೇಳಿ ನೆರೆಯ ರಾಜ್ಯದೊಂದಿಗೆ ಹೋಲಿಕೆ ಮಾಡಿದರು. ತೆರಿಗೆ ಕಡಿತ ಮಾಡದಿದ್ದದ್ದಕ್ಕೆ ಚೆನ್ನೈನಲ್ಲಿ ಪೆಟ್ರೋಲ್‌ ದರ ₹112, ಜೈಪುರದಲ್ಲಿ ₹118, ಹೈದರಾಬಾದ್‌ನಲ್ಲಿ ₹119, ಕೊಲ್ಕತಾದಲ್ಲಿ ₹115, ಮುಂಬೈಯಲ್ಲಿ ₹120ಕ್ಕಿಂತ ಹೆಚ್ಚಿದೆ. ಅದೇ ತೆರಿಗೆ ಕಡಿತ ಮಾಡಿರುವ ದಿಯು ದಮನ್‌ನಲ್ಲಿ ₹ 102, ಲಖನೌನಲ್ಲಿ ₹ 101, ಜಮ್ಮುವಿನಲ್ಲಿ ₹106, ಗುವಾಹಟಿಯಲ್ಲಿ ₹105, ಗುರುಗ್ರಾಮ್‌ನಲ್ಲಿ ₹103, ಡೆಹ್ರಾಡೂನ್‌ನಲ್ಲಿ ₹105 ಇದೆ. ಆರು ತಿಂಗಳಲ್ಲಿ ಎಷ್ಟು ಸಂಪಾದಿಸಿದರೋ ಅರು ಒಂದೆಡೆ. ಈಗಲಾದರೂ ದೇಶದೊಂದಿಗೆ ಸಹಯೋಗ ನೀಡಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ.

ಗುಜರಾತ್‌ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿವೆ. ಎರಡೂ ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿಯೂ ಪ್ರಧಾನಿ ಮೋದಿಯವರ ಮಾತು ಗಮನಾರ್ಹವಾಗಿದೆ. ಒಂದೇ ಭಾಷಣದಲ್ಲಿ ಬಿಜೆಪಿಯೇತರ ರಾಜ್ಯಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಹೇರಿರುವ ಒತ್ತಡ ರಾಜಕೀಯ ವಾಗ್ವಾದಗಳಿಗೂ ಕಾರಣವಾಗುವ ಲಕ್ಷಣಗಳಿವೆ.

Exit mobile version