ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂಥರಾ ಸವ್ಯಸಾಚಿ. ಯಾವುದೇ ವಿಷಯದ ಬಗ್ಗೆ ಅತ್ಯಂತ ಕರಾರುವಾಕ್ಕಾಗಿ ಮಾತನಾಡಬಲ್ಲರು. ಆಡಳಿತದ ಎಲ್ಲ ಅಂಗಗಳನ್ನು ಅವರನ್ನು ಸ್ಪಷ್ಟವಾಗಿ ಅರಿತವರು ಯಾರೂ ಇಲ್ಲ. ಸಾಹಿತ್ಯದಿಂದ ಹಿಡಿದು ವಿಜ್ಞಾನದವರೆಗೆ ಯಾವುದೇ ಸಂಗತಿಯಲ್ಲಿ ಸುಲಭವಾಗಿ ಗ್ರಹಿಸಬಲ್ಲ ಶಕ್ತಿ ಅವರದು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಯಾರನ್ನು ಬೇಕಾದರೂ ಗಂಟೆಗಟ್ಟಲೆ ಮಾತನಾಡಿಸಬಲ್ಲ ಕಲೆಗಾರಿಕೆಯೂ ಇದೆ. ಇಂಥ ಮೋದಿ ಅವರು ಶಿಮ್ಲಾದ ಬಿಜೆಪಿ ನಾಯಕರೊಬ್ಬರ ಪತ್ನಿಗೆ ಸಾಬಕ್ಕಿ ಖಿಚಡಿ ಮಾಡಲು ಕಲಿಸಿಕೊಂಡಿದ್ದಾರೆ ಅಂದ್ರೆ ನಂಬ್ತೀರಾ?
ಹೌದು, ಮೋದಿಯವರಿಗೂ ಅಡುಗೆಗೂ ಹತ್ತಿರದ ನಂಟು. ಸಣ್ಣ ವಯಸ್ಸಿನಲ್ಲೇ ಆರೆಸ್ಸೆಸ್ ಪ್ರಚಾರಕರಾಗಿ ಸೇವೆ ಮಾಡಿದ್ದರಿಂದ ಸ್ವಾವಲಂಬನೆಯ ಪಾಠವನ್ನು ಚೆನ್ನಾಗಿಯೇ ಕಲಿತಿದ್ದರು. ಹಾಗಾಗಿ ಅಡುಗೆ ಮಾಡುವುದು ಕೂಡಾ ತಿಳಿದಿತ್ತು. ಅಡುಗೆ ಮಾಡುವುದು, ಮಾಡಿದ ಅಡುಗೆಯನ್ನು ಚೆನ್ನಾಗಿ ಚಪ್ಪರಿಸಿ ತಿನ್ನುವುದು, ಅದರ ಗುಣ ವಿಶೇಷಗಳ ಚರ್ಚೆ ಮಾಡುವುದು ಅವರ ಹವ್ಯಾಸ. ಅಂಥ ಮೋದಿ ಬಿಜೆಪಿ ನಾಯಕರ ಪತ್ನಿಗೆ ಅಡುಗೆ ಕಲಿಸಿದ ಕಥೆ ಮಜವಾಗಿದೆ.
ಈ ಕಥೆ ಶುರುವಾಗಿದ್ದು ಹೀಗೆ…
ಕಳೆದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಜತೆ ಮಾತನಾಡುತ್ತಾ ಇಲ್ಲಿ ದೀಪಕ್ ಶರ್ಮಾ ಅಂತ ಇದ್ರಲ್ಲಾ ಅವರೆಲ್ಲಿ ಏಂದು ಪ್ರಶ್ನಿಸಿದ್ದರು. ಅನಂತರ ರಿಜ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಮೋದಿ ಅವರಿಗೆ ಹಿಮಾಚಲ ಪ್ರದೇಶದ ಸಾಮಾನ್ಯ ಬಿಜೆಪಿ ಕಾರ್ಯಕರ್ತರ ಜತೆಗೂ ಆತ್ಮೀಯವಾದ ಸಂಬಂಧ, ಸಂಪರ್ಕ ಇದೆ ಎಂದು ಹೇಳಿದರು. ನರೇಂದ್ರ ಮೋದಿ ಅವರು ʻದೀಪಕ್ ಶರ್ಮ ಈಗಲೂ ಜಾಖು ದೇವಸ್ಥಾನಕ್ಕೆ ಹೋಗುತ್ತಿದ್ದಾರಾʼ ಎಂದೂ ಕೇಳಿದ್ದರು.
ಯಾವಾಗ ಸಿಕ್ಕಿದ್ದು ಇವರೆಲ್ಲ?
ಮೋದಿ ಅವರು 1990ರ ದಶಕದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿ ಘಟಕದ ಉಸ್ತುವಾರಿಯಾಗಿದ್ದರು. ಆಗ ಪರಿಚಯವಾಗಿದ್ದವರು ಈಗ ಶಿಮ್ಲಾ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಕೌನ್ಸಿಲರ್ ಆಗಿರುವ ದೀಪಕ್ ಶರ್ಮ.
ಮೋದಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದು ಕೇಳಿ ದೀಪಕ್ ಶರ್ಮ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನಾನು ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಜಾಖು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ಮೋದಿ ಅವರು ಕೂಡಾ ಹತ್ತು-ಹನ್ನೆರಡು ಸಾರಿ ನನ್ನ ಜತೆಗೆ ಬಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ದೀಪಕ್ ಶರ್ಮ ಅವರ ಪತ್ನಿಯೇ ಈ ಖಿಚಡಿ ಕಥೆಯ ಹಿಂದಿರುವವರು. 1997-98ರ ಅವಧಿಯಲ್ಲಿ ಶಿಮ್ಲಾದಲ್ಲಿ ಬಿಜೆಪಿ ಉಸ್ತುವಾರಿಯಾಗಿ ಇದ್ದಾಗ ನರೇಂದ್ರ ಮೋದಿ ಅವರು ಮಾರ್ಕೆಟ್ ರಸ್ತೆಯಲ್ಲಿದ್ದ ದೀಪಕ್ ಶರ್ಮ ಅವರ ಭೋಜನಶಾಲೆ ದೀಪಕ್ ವೈಶವ ಭೋಜನಾಲಯಕ್ಕೆ ಆಗಾಗ ಹೋಗುತ್ತಿದ್ದರು. ಆಗಲೂ ಮೋದಿ ಅವರು ಎರಡು ನವರಾತ್ರಿಗಳನ್ನು ಉಪವಾಸದ ಮೂಲಕ ಆಚರಿಸುತ್ತಿದ್ದರಂತೆ. ಒಂದು ಮಾರ್ಚ್‌ನಲ್ಲಿ ಬರುವ ಮೊದಲ ನವರಾತ್ರಿ. ಈ ಸಂದರ್ಭದಲ್ಲಿ ಅವರು ಬರೀ ನೀರು ಮಾತ್ರ ಸೇವಿಸುತ್ತಿದ್ದರು. ಎರಡನೆಯದು ಎಲ್ಲ ಕಡೆ ನಡೆಯುವ ದಸರಾ ನವರಾತ್ರಿ. ಆಗ ಹಣ್ಣು ತಿನ್ನುತ್ತಿದ್ದರು. 1997ರಲ್ಲಿ ದಸರಾ ನವರಾತ್ರಿ ವೇಳೆ ಮೋದಿ ಅವರು ಶಿಮ್ಲಾದ ಪೀಟರ್ ಹಾಫ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅದೊಂದು ದಿನ ಅವರು ದೀಪಕ್ ಶರ್ಮಾ ಅವರ ಪತ್ನಿ ಸೀಮಾ ಶರ್ಮಾ ಅವರ ಬಳಿ ಒಂದು ಸ್ವಲ್ಪ ಖಿಚಡಿ ಮಾಡಿಕೊಡಬಹುದಾ ಎಂದು ಕೇಳಿದ್ದರು.
ಸೀಮಾ ಶರ್ಮ ಅವರು ಖುಷಿಯಿಂದ ಖಿಚಡಿ ಮಾಡಿ ಕೊಟ್ಟಿದ್ದರು. ಆದರೆ, ಅದು ಯಾಕೋ ಅದು ಸರಿಯಾಗಿರಲಿಲ್ಲ. ಅದನ್ನು ಖುಷಿಯಾಗಿಯೇ ತಿಂದ ಮೋದಿ ಅವರು ಸೀಮಾ ಶರ್ಮಾ ಅವರನ್ನು ಕರೆದು ಸಾಬಕ್ಕಿ ಖಿಚಡಿ ಹೇಗೆ ಮಾಡಿದರೆ ಚೆನ್ನಾಗಿ ಆಗುತ್ತದೆ ಎಂದು ಹೇಳಿಕೊಟ್ಟರಂತೆ. ʻʻನಂಗೆ ಪ್ರತಿ ಸಾರಿ ಸಾಬಕ್ಕಿ ಖಿಚಡಿ ಮಾಡುವಾಗಲೂ ಮೋದಿ ಅವರೇ ನೆನಪಾಗುತ್ತಾರೆ. ಆವತ್ತಿನ ಕ್ಷಣಗಳನ್ನು ಅವರ ಕಲಿಸುವ ಗುಣವನ್ನು ಯಾವತ್ತೂ ಮರೆಯಲಾರೆʼ ಎನ್ನುತ್ತಾರೆ ಸೀಮಾ ಶರ್ಮ.
ಇದನ್ನೂ ಓದಿ| Video: ರೋಡ್ ಶೋ ಮಧ್ಯೆ ಕಾರು ನಿಲ್ಲಿಸಿ ಅವಸರದಿಂದ ಕೆಳಗೆ ಇಳಿದ ಪ್ರಧಾನಿ ಮೋದಿ; ಹೋಗಿದ್ದೆಲ್ಲಿಗೆ?