Site icon Vistara News

Money Guide: ಇದು ಖುಷಿಯ ಸುದ್ದಿ… ಐದು ವರ್ಷದ ಆರ್‌ಡಿ ಖಾತೆ ಬಡ್ಡಿ ದರ ಶೇ.6.7ಕ್ಕೆ ಹೆಚ್ಚಳ!

interest Rate Hike

ಆರ್‌ಡಿ ಮೂಲಕ ಹಣ ಉಳಿತಾಯ ಮಾಡುವವರಿಗೆ ಇದು ಶುಭ ಶುದ್ದಿ. ಐದು ವರ್ಷಗಳ ಮರುಕಳಿಸುವ ಠೇವಣಿ (recurring deposit – RD) ಯೋಜನೆಗಳ ಬಡ್ಡಿ ದರವನ್ನು (Interest Rate) ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕಕ್ಕೆ ಶೇ.6.5ರಿಂದ ಶೇ.6.7ಕ್ಕೆ ಹೆಚ್ಚಿಸಲಾಗಿದೆ. ಇದೇ ವೇಳೆ, ಇತರ ಯಾವುದೇ ಸಣ್ಣ ಉಳಿತಾಯದ ಯೋಜನೆಗಳ (Small Saving Scheme) ಬಡ್ಡಿ ದರಗಳಲ್ಲಿ ವ್ಯತ್ಯಾಸವನ್ನು ಮಾಡಿಲ್ಲ. ಅವು ಹಿಂದಿನಂತೆಯೇ ಮುಂದುವರಿಯಲಿವೆ ಎಂದು ಕೇಂದ್ರ ಹಣಕಾಸು ಸುತ್ತೋಲೆಯಲ್ಲಿ (ministry of finance) ತಿಳಿಸಲಾಗಿದೆ. ಅಲ್ಲದೇ, ಐದು ವರ್ಷದ ಆರ್‌ಡಿ ಹೊರತುಪಡಿಸಿದರೆ, ಉಳಿದ ಆರ್‌ಡಿಗಳ ಬಡ್ಡಿ ದರದಲ್ಲೂ ಯಾವುದೇ ವ್ಯತ್ಯಾಸವಿಲ್ಲ. ಅವು ಕೂಡ ಈ ಹಿಂದಿದ್ದ ಬಡ್ಡಿಯಂತೆ ಮುಂದುವರಿಯಲಿವೆ. ಅಂದರೆ, ಒಂದು ವರ್ಷದ ಉಳಿತಾಯ ಠೇವಣಿಯ ಮೇಲಿನ ಬಡ್ಡಿದರ ಶೇ.4 ರಷ್ಟು ಮತ್ತು ಒಂದು ವರ್ಷದ ಅವಧಿಯ ಠೇವಣಿ ಮೇಲೆ ಶೇ. 6.9 ರಷ್ಟು ಇರಲಿದೆ. ಇದು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ದರವೇ ಆಗಿದೆ(Money Guide).

ಎರಡು ವರ್ಷ ಮತ್ತು ಮೂರು ವರ್ಷಗಳ ಅವಧಿಯ ಠೇವಣಿ ಮೇಲಿನ ಬಡ್ಡಿ ದರವು ಶೇ.7 ರಷ್ಟಿದ್ದರೆ, ಐದು ವರ್ಷಗಳ ಅವಧಿಯ ಠೇವಣಿಯ ದರವು ಶೇ. 7.5 ರಷ್ಟಿದೆ. ಇನ್ನು, ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಸುತ್ತೋಲೆಯ ಪ್ರಕಾರ ಶೇ.8.2 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ ಎಂದು ಹಣಕಾಸು ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಾಸಿಕ ಆದಾಯ ಖಾತೆ ಯೋಜನೆಯಲ್ಲಿ ಬಡ್ಡಿ ದರವು 7.4 ಪ್ರತಿಶತವಾಗಿದ್ದರೆ, ಇದು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಶೇ.7.7 ಮತ್ತು ಪಿಪಿಎಫ್ ಯೋಜನೆಯಲ್ಲಿ ಶೇ.7.1 ಇರಲಿದೆ. ಅದೇ ರೀತಿ, ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ದರವು ಶೇ. 7.5 ಇರಲಿದ್ದು, ಹೂಡಿಕೆಗಳು 115 ತಿಂಗಳುಗಳಲ್ಲಿ ಮೆಚ್ಯೂರ್ ಆಗಲಿವೆ.

ಸುಕನ್ಯಾ ಸಮೃದ್ಧಿ ಖಾತೆ

ಹೆಣ್ಣು ಮಕ್ಕಳ ಯೋಜನೆ ಸುಕನ್ಯಾ ಸಮೃದ್ಧಿ ಖಾತೆಯ ಬಡ್ಡಿ ದರ ಶೇ. 8ರಷ್ಟಿದೆ. ಮುಖ್ಯವಾಗಿ ಅಂಚೆ ಕಚೇರಿಗಳಿಂದ ನಿರ್ವಹಿಸಲಾಗುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಬಹಿರಂಗಗೊಳಿಸುತ್ತದೆ. ಆದರೆ, ವಿಶ್ಲೇಷಕರ ಪ್ರಕಾರ, ಈ ಯೋಜನೆಗಳಲ್ಲಿ ಡಿಸೆಂಬರ್ ತ್ರೈಮಾಸಿಕದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವ ಅಗತ್ಯವಿಲ್ಲ.

ಜೂನ್ ತಿಂಗಳಲ್ಲಿ ಪರಿಷ್ಕರಣೆ ನಡೆದಿತ್ತು

2023ರ ಜೂನ್‌ 30ರಂದು ಕೇಂದ್ರ ಸರ್ಕಾರವು ವಿವಿಧ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿತ್ತು. ಈ ವೇಳೆ ಸರ್ಕಾರವು ಹಲವಾರು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿತ್ತು. 1-ವರ್ಷ ಮತ್ತು 2-ವರ್ಷದ ಪೋಸ್ಟ್ ಆಫೀಸ್ ಯೋಜನೆಯ ಠೇವಣಿಗಳು ಮತ್ತು 5 ವರ್ಷದ ಆರ್ ಡಿ ಗಳ ಮೇಲಿನ ಬಡ್ಡಿಯನ್ನು ಪರಿಷ್ಕರಣೆ ಮಾಡಿತ್ತು.

ಈ ಸುದ್ದಿಯನ್ನೂ ಓದಿ: Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!

ಮಹಿಳಾ ಸಮ್ಮಾನ್ ಬಚತ್ ಪತ್ರ

ಸರ್ಕಾರವು ಒನ್ ಟೈಮ್ ಸಣ್ಣ ಉಳಿತಾಯ ಮಹಿಳಾ ಸಮ್ಮಾನ್ ಬಚತ್ ಪತ್ರ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಮಹಿಳಾ ಸಮ್ಮಾನ್ ಬಚತ್ ಪತ್ರವನ್ನು ಈಗ 12 ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ನಾಲ್ಕು ಖಾಸಗಿ ವಲಯದ ಬ್ಯಾಂಕುಗಳಲ್ಲಿ ತೆರೆಯಬಹುದಾಗಿದೆ. ಈ ಯೋಜನೆಯನ್ನು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಮೊದಲು ಈ ಯೋಜನೆ ಅಂಚೆ ಕಚೇರಿಗಳ ಮೂಲಕ ಮಾತ್ರ ಲಭ್ಯವಿತ್ತು.

ಹಣ ನಿರ್ವಹಣೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version