Site icon Vistara News

Moon: ಭೂಮಿಯಿಂದ ದೂರ ಹೊರಟ ಚಂದ್ರ, ಮುಂದೆ ದಿನಕ್ಕೆ 24 ಅಲ್ಲ 25 ಗಂಟೆಗಳು ಇರಲಿವೆ!

Moon

ನವದೆಹಲಿ: ಚಂದಿರನಿಗೂ ಮಾನವನಿಗೂ ಎಲ್ಲಿಲ್ಲದ ನಂಟು. ಚಂದಿರನನ್ನು ತೋರಿಸಿ ಅಮ್ಮ ಕೈತುತ್ತು ತಿನಿಸಿದ, ಚಂದ್ರನ ಬೆಳಕಿನಲ್ಲಿ ರಾತ್ರಿ ರೈತ ಜಮೀನಿನಲ್ಲಿ ಕೆಲಸ ಮಾಡಿದ, ಚಂದಿರನ ಬೆಳದಿಂಗಳಲ್ಲಿ ಊರೆಲ್ಲ ಸುತ್ತಾಡಿದ ನೆನಪುಗಳು ಕಾಡುತ್ತವೆ. ಇನ್ನು ದೇಶದ ಕವಿಗಳೂ ಅಷ್ಟೇ, ಚಂದಿರನ ಬಗ್ಗೆ ಬಗೆಬಗೆಯ ಕವಿತೆಗಳನ್ನು ಬರೆಯುವ ಮೂಲಕ ನಮಗೆ ಚಂದಿರ ಏಕೆ ಮುಖ್ಯ ಎಂಬುದನ್ನು ಸಾರಿದ್ದಾರೆ. ಚಂದಮಾಮ ಎಂದೂ ಕೂಡ ವರ್ಣಿಸಿದ್ದಾರೆ. ಇಂತಹ ಚಂದಮಾಮ ಈಗ ಭೂಮಿಯಿಂದ ದೂರವಾಗುತ್ತಿದ್ದಾನೆ. ಅಷ್ಟೇ ಅಲ್ಲ, ಮುಂದೆ ನಮಗೆ ದಿನದಲ್ಲಿ 24 ಗಂಟೆ ಬದಲು 25 ಗಂಟೆ ಇರಲಿವೆ ಎಂದು ಅಧ್ಯಯನವೊಂದು ಭೀಕರ ಮಾಹಿತಿಯನ್ನು ಬಿಚ್ಚಿಟ್ಟಿದೆ.

ಹೌದು, ವರ್ಷದಿಂದ ವರ್ಷಕ್ಕೆ ಚಂದಿರನು ಭೂಮಿಯಿಂದ ದೂರವಾಗುತ್ತಿದ್ದಾನೆ ಎಂದು ಅಮೆರಿಕದ ಯುನಿವರ್ಸಿಟಿ ಆಫ್‌ ವಿಸ್ಕಾನ್ಸಿನ್-ಮ್ಯಾಡಿಸನ್‌ನ ತಜ್ಞರು ಮಾಡಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 90 ದಶಲಕ್ಷ ವರ್ಷದಷ್ಟು ಹಳೆಯದಾದ ಶಿಲೆಯ ಮೇಲೆ ಗಮನ ಕೇಂದ್ರೀಕರಿಸಿ ಅಧ್ಯಯನ ನಡೆಸಲಾಗಿದ್ದು, ಭೂಮಿಯಿಂದ ಚಂದ್ರನು ಬೇರ್ಪಡುವುದರಿಂದ ಆಗುವ ಪರಿಣಾಮಗಳ ಕುರಿತು ಕೂಡ ಅವರು ಬೆಳಕು ಚೆಲ್ಲಿದ್ದಾರೆ. ಈ ಅಧ್ಯಯನ ವರದಿ ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ.

ದಿನಕ್ಕೆ 25 ಗಂಟೆ ಹೇಗೆ?

ಪ್ರತಿ ವರ್ಷ ಚಂದ್ರನು ಭೂಮಿಯಿಂದ 3.8 ಸೆಂಟಿಮೀಟರ್‌ ದೂರವಾಗುತ್ತಿದ್ದಾನೆ. ಇದರಿಂದಾಗಿ ಭೂಮಿಯ ಒಂದು ದಿನದ ಅವಧಿಯು ಹೆಚ್ಚಾಗುತ್ತದೆ. ಅಂದರೆ, ಈಗ ದಿನಕ್ಕೆ 24 ಗಂಟೆ ಇದ್ದರೆ, ಮುಂಬರುವ ವರ್ಷಗಳಲ್ಲಿ ದಿನಕ್ಕೆ 25 ಗಂಟೆ ಇರಲಿವೆ. ಕಾಲಕಾಲಕ್ಕೆ ಭೂಮಿಯ ಮೇಲಿನ ಒಂದು ದಿನದಲ್ಲಿರುವ ಗಂಟೆಗಳ ಸಂಖ್ಯೆ ಹೆಚ್ಚಾಗುತ್ತದೆ. ಇದು ಸಹಜ ಪ್ರಕ್ರಿಯೆಯಾಗಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಮುಂದಿನ 200 ದಶಲಕ್ಷ ವರ್ಷಗಳ ಬಳಿಕ ದಿನದಲ್ಲಿ 25 ಗಂಟೆ ಇರಲಿವೆ ಎಂದು ವಿಜ್ಞಾನಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸುಮಾರು 1.4 ಶತಕೋಟಿ ವರ್ಷಗಳ ಹಿಂದೆ, ಭೂಮಿಯ ಅವಧಿಯು ದಿನಕ್ಕೆ ಕೇವಲ 18 ಗಂಟೆಯಾಗಿತ್ತು. ಕಾಲಕಾಲಕ್ಕೆ ಅದು ಹೆಚ್ಚಾಗುತ್ತ 24 ಗಂಟೆಗೆ ಏರಿಕೆಯಾಗಿದೆ. “ಭೂಮಿಯಿಂದ ಸೂರ್ಯನು ದೂರವಾಗುತ್ತ ಹೋದರೆ, ಭೂಮಿಯ ಮೇಲಿನ ಒಂದು ದಿನದ ಅವಧಿಯು ವಿಸ್ತರಣೆಯಾಗುತ್ತದೆ” ಎಂದು ವಿವಿ ಪ್ರೊಫೆಸರ್‌ ಸ್ಟೀಫನ್‌ ಮೇಯರ್ಸ್‌ ಹೇಳಿದ್ದಾರೆ.

ಇದನ್ನೂ ಓದಿ: DMK leader Controversy: ಶ್ರೀರಾಮನ ಅಸ್ತಿತ್ವಕ್ಕೆ ಪುರಾವೆಗಳೇ ಇಲ್ಲ: ಡಿಎಂಕೆ ನಾಯಕನ ವಿಡಿಯೋ ಫುಲ್‌ ವೈರಲ್‌

Exit mobile version