Site icon Vistara News

ದೇಶದ ಕಾಲು ಭಾಗ ಗರ್ಭಪಾತಗಳು ಮನೆಯಲ್ಲೇ ನಡೆಯುತ್ತವೆ!

abortion

ನವ ದೆಹಲಿ: ಭಾರತದಲ್ಲಿ ನಡೆಯುವ ಗರ್ಭಪಾತಗಳ ಪೈಕಿ ಶೇ.27ರಷ್ಟನ್ನು ಮಹಿಳೆಯರು ಮನೆಯಲ್ಲೇ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಗರ್ಭಪಾತ ಮಾಡಿಕೊಳ್ಳುವ ವಿಧಾನಗಳೂ ಅಸುರಕ್ಷಿತವಾಗಿವೆ. ಕೆಲವರಿಗಷ್ಟೇ ಸುರಕ್ಷಿತ ಗರ್ಭಪಾತದ ಬಗ್ಗೆ ಮಾಹಿತಿ ಇದೆ. ಅಸುರಕ್ಷಿತ ಗರ್ಭಪಾತದ ಪರಿಣಾಮ ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಸೂಕ್ತ ತಿಳಿವಳಿಕೆ, ಜಾಗೃತಿ ನೀಡುವ ಮೂಲಕ ಇವುಗಳನ್ನು ತಡೆಗಟ್ಟಿದಲ್ಲಿ ಗರ್ಭಿಣಿಯರ ಸಾವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಇತ್ತೀಚೆಗಿನ ಒಂದು ಸಮೀಕ್ಷೆ ಹೇಳಿದೆ.

ಈ ಅಂಶಗಳು ಹೊರಬಿದ್ದಿರುವುದು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5ರಲ್ಲಿ. ಇದಕ್ಕಾಗಿ 2015-16ರಿಂದ 2019-21rವರೆಗೆ ಕಲೆ ಹಾಕಲಾಗಿರುವ ಮಾಹಿತಿಯನ್ನು ಮಾಧ್ಯಮಗಳು ವಿಶ್ಲೇಷಿಸಿದ್ದು, ಮನೆಯಲ್ಲೇ ಅಸುರಕ್ಷಿತ ರೀತಿಯಲ್ಲಿ ಗರ್ಭಪಾತ ಮಾಡಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳವೂ ಕಂಡುಬಂದಿದೆ.

ಮನೆಯಲ್ಲೇ ಗರ್ಭಪಾತ ಮಾಡಿಕೊಳ್ಳುವುದು ನಗರ ಪ್ರದೇಶಗಳಿಗಿಂತ (ಶೇ. 22.1) ಗ್ರಾಮೀಣ ಭಾಗಗಳಲ್ಲೇ (ಶೇ. 28.7) ಹೆಚ್ಚು ಎಂಬುದು ಕಂಡುಬಂದಿದೆ. 1971ರಲ್ಲೇ ಭಾರತದಲ್ಲಿ ಅನಿವಾರ್ಯ ಕಾರಣಗಳಿಗಾಗಿ ವೈದ್ಯಕೀಯವಾಗಿ ಗರ್ಭಪಾತ ಮಾಡುವುದಕ್ಕೆ ಕಾನೂನಿನ ಮಾನ್ಯತೆ ದೊರೆತಿದೆ. ಆದರೆ ಇಂಥ ಸುರಕ್ಷಿತ ಸೌಲಭ್ಯಗಳ ಲಭ್ಯತೆಯೇ ತೊಡಕಾಗಿದೆ.  ಸಾಮಾಜಿಕ ಕಾರಣಗಳೂ ಸಾಕಷ್ಟು ಇವೆ. ಇನ್ನು, ಶೇ. 55ರಷ್ಟು ಮಹಿಳೆಯರು ಗರ್ಭಪಾತ ಅಗತ್ಯವಾದಲ್ಲಿ ತಾವು ವೈದ್ಯರಲ್ಲಿಗೇ ಹೋಗುವುದಾಗಿ ಹೇಳಿದ್ದಾರೆ.

ಶೇ. 48ರಷ್ಟು ಮಹಿಳೆಯರು ಅನಿರೀಕ್ಷಿತವಾಗಿ ಗರ್ಭ ಧರಿಸಿದ್ದೇ ಗರ್ಭಪಾತಕ್ಕೆ ಮುಖ್ಯ ಕಾರಣವೆಂದು ಹೇಳಿದರೆ, ತಮ್ಮ ಆರೋಗ್ಯ ಇದಕ್ಕೆ ಅವಕಾಶ ನೀಡುತ್ತಿಲ್ಲವೆಂದೋ ಅಥವಾ ಮೊದಲನೇ ಮಗು ತೀರಾ ಚಿಕ್ಕದು ಎಂಬ ಕಾರಣಗಳನ್ನೋ ಉಳಿದವರು ನೀಡಿದ್ದಾರೆ. ಹೆಚ್ಚಿನ ಗರ್ಭಪಾತಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ (ಶೇ. 53) ಮಾಡಿಸಲಾಗಿದ್ದು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾಡಿಸಿದ ಪ್ರಮಾಣ ಕಡಿಮೆ (ಶೇ. 20). ಅದರಲ್ಲೂ, ಬಿಹಾರ (ಶೇ. 49.1), ರಾಜಸ್ಥಾನ (ಶೇ. 37.9) ಮತ್ತು ಉತ್ತರಪ್ರದೇಶಗಳಲ್ಲಿ (ಶೇ. 33.9) ದೇಶದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಮನೆಯಲ್ಲೇ ಅಸುರಕ್ಷಿತ ರೀತಿಯಲ್ಲಿ ಗರ್ಭಪಾತಗಳು ನಡೆಯುತ್ತಿದೆ ಎಂದು ಸಮೀಕ್ಷಾ ವರದಿ ಹೇಳಿದೆ.  

ಇದನ್ನೂ ಓದಿ: World Food Safety Day: ನಿಮ್ಮ ಆಹಾರ ಆರೋಗ್ಯಕರ ಎನಿಸಬೇಕಾದರೆ…

Exit mobile version