Site icon Vistara News

ಎಂಜಿನಿಯರಿಂಗ್‌ ಡ್ರಾಪೌಟ್‌ ಕಟ್ಟಿದ PhysicsWallah ಭಾರತದ 101ನೇ ಯೂನಿಕಾರ್ನ್

physicswallah

ನವ ದೆಹಲಿ: ಶೈಕ್ಷಣಿಕ ತಂತ್ರಜ್ಞಾನ ಸ್ಟಾರ್ಟ್ಅಪ್ PhysicsWallah, ಭಾರತದ 101ನೇ ಯೂನಿಕಾರ್ನ್‌ ಕಂಪನಿ ಎನಿಸಿಕೊಂಡಿದೆ. ಫಿಸಿಕ್ಸ್‌ವಾಲಾ, ಎಂಜಿನಿಯರಿಂಗ್‌ ಹಾಗೂ ಮೆಡಿಕಲ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ.

ಅತ್ಯಲ್ಪ ಅವಧಿಯಲ್ಲಿ 100 ಕೋಟಿ ಡಾಲರ್‌ ವ್ಯವಹಾರ ನಡೆಸಿದ ಕಂಪನಿಯನ್ನು ಯೂನಿಕಾರ್ನ್‌ ಎನ್ನಲಾಗುತ್ತದೆ. ತನ್ನ ಮೊದಲ ಸರಣಿ ಫಂಡಿಂಗ್ ಭಾಗವಾಗಿ ವೆಸ್ಟ್‌ಬ್ರಿಡ್ಜ್ ಕ್ಯಾಪಿಟಲ್ ಮತ್ತು ಜಿಎಸ್‌ವಿ ವೆಂಚರ್ಸ್‌ನಿಂದ 100 ದಶಲಕ್ಷ ಡಾಲರ್‌ ಮಿಲಿಯನ್ ಸಂಗ್ರಹಿಸಿದೆ ಎಂದು ಕಂಪನಿಯು ಜೂನ್ 7ರಂದು ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಫಿಸಿಕ್ಸ್‌ವಾಲಾ ಆರಂಭಿಸಿದವರು ಅಲಖ್‌ ಪಾಂಡೆ ಮತ್ತು ಪ್ರತೀಕ್‌ ಮಹೇಶ್ವರಿ ಎಂಬ ಇಬ್ಬರು ತರುಣರು, 2016ರಲ್ಲಿ. ಅಲಖ್‌ ಪಾಂಡೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನಿಸಿದವರು. 11ನೇ ತರಗತಿಯಲ್ಲೇ ಟ್ಯೂಷನ್‌ ಕೊಡತೊಡಗಿದರು. 10 ಮತ್ತು 12ನೇ ತರಗತಿಗಳಲ್ಲಿ ಟಾಪರ್‌ ಆದರೂ ಐಐಟಿ ಪರೀಕ್ಷೆ ಪಾಸಾಗಲು ಆಗಲಿಲ್ಲ. ಕಾನ್ಪುರದ ಟೆಕ್ನಿಕಲ್‌ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್‌ಗೆ ಸೇರಿ, ಮೂರನೇ ವರ್ಷದಲ್ಲಿ ಡ್ರಾಪೌಟ್‌ ಆದರು. 2016ರಲ್ಲಿ ಒಂದು ಯೂಟ್ಯೂಬ್‌ ಚಾನೆಲ್‌ ಆಗಿ ಫಿಸಿಕ್ಸ್‌ವಾಲಾ ಆರಂಭಿಸಿದರು. 2020ರಲ್ಲಿ ಆಪ್‌ ಹೊರತಂದರು. ಯುಎನ್‌ಅಕಾಡೆಮಿ ಎಂಬ ಇನ್ನೊಂದು ದೊಡ್ಡ ಎಜುಟೆಕ್‌ ಕಂಪನಿಯಲ್ಲಿ ಬಂದ ವಾರ್ಷಿಕ 40 ಕೋಟಿ ರೂ. ಸಂಬಳದ ಆಫರ್‌ ಅನ್ನು ನಿರಾಕರಿಸಿ, ತಮ್ಮ ಕಂಪನಿಯನ್ನು ಈ ಮಟ್ಟಕ್ಕೆ ಕಟ್ಟಿ ನಿಲ್ಲಿಸಿದ್ದಾರೆ.

ಇದನ್ನೂ ಓದಿ: Money Guide: ಜಾಗತಿಕ ಷೇರು ಮಾರುಕಟ್ಟೆ ಎತ್ತ ಸಾಗುತ್ತಿದೆ, ಭಾರತದ ಷೇರು ಪೇಟೆ ಹೇಗಿದೆ?

PhysicsWallah ಈ ವರ್ಷದ ಏಪ್ರಿಲ್‌ನಿಂದ ಅಸ್ಕರ್ ಯುನಿಕಾರ್ನ್ ಕ್ಲಬ್‌ಗೆ ಸೇರಿದ ಎರಡನೇ ಕಂಪನಿ. ವ್ಯವಹಾರ ವಿಸ್ತರಣೆ, ಬ್ರ್ಯಾಂಡಿಂಗ್, ಹೆಚ್ಚಿನ ಆಫ್‌ಲೈನ್ ಕಲಿಕಾ ಕೇಂದ್ರಗಳ ತೆರೆಯುವಿಕೆ, ಹೆಚ್ಚಿನ ಕೋರ್ಸ್‌ಗಳು ಕಂಪನಿಯಿಂದ ಬರಲಿವೆ ಎಂದು ಫಿಸಿಕ್ಸ್‌ವಾಲಾದ ಅಲಖ್‌ ಪಾಂಡೆ ಹೇಳಿದ್ದಾರೆ. ಕಂಪನಿಯು K-12 (ಕಿಂಡರ್‌ಗಾರ್ಟನ್‌ನಿಂದ 12ನೇ ತರಗತಿವರೆಗೆ) ವಿಭಾಗದಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗುವ ಚಿಂತನೆ ಹೊಂದಿದೆ.

PhysicsWallah ಇದುವರೆಗೆ 52 ಲಕ್ಷ ಪ್ಲೇಸ್ಟೋರ್‌ ಡೌನ್‌ಲೋಡ್‌ಗಳನ್ನು ಮತ್ತು 69 ಲಕ್ಷ ಚಂದಾದಾರರನ್ನು ಯೂಟ್ಯೂಬ್‌ನಲ್ಲಿ ಹೊಂದಿರುವುದಾಗಿ ಹೇಳಿಕೊಂಡಿದೆ. 2020 ಮತ್ತು 2021ರಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು NEET ಮತ್ತು JEE (ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮಿಂದ ತರಬೇತಿ ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ.

ಫಿಸಿಕ್ಸ್‌ವಾಲಾ ಪ್ರಸ್ತುತ 1900 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 500 ಶಿಕ್ಷಕರು ಮತ್ತು ಸುಮಾರು 100 ಟೆಕ್ ತಜ್ಞರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು 200 ಅಸೋಸಿಯೇಟ್ ಪ್ರೊಫೆಸರ್‌ಗಳು ಜತೆಗಿದ್ದಾರೆ. ಪರೀಕ್ಷೆಯ ಪ್ರಶ್ನೆಗಳು ಮತ್ತು ಟರ್ಮ್ ಪೇಪರ್‌ಗಳನ್ನು ರಚಿಸಲು 200 ವೃತ್ತಿಪರರನ್ನು ಹೊಂದಿದೆ. ಕಂಪನಿಯ ಆದಾಯ 2020-2021ಕ್ಕೆ ಹೋಲಿಸಿದರೆ 2021-2022ರಲ್ಲಿ ಒಂಬತ್ತು ಪಟ್ಟು ಹೆಚ್ಚಾಗಿದೆ. ಬೆಂಗಾಲಿ, ಮರಾಠಿ, ತಮಿಳು, ತೆಲುಗು, ಗುಜರಾತಿ, ಒಡಿಯಾ, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಒಂಬತ್ತು ಸ್ಥಳೀಯ ಭಾಷೆಗಳಲ್ಲಿ ಶೈಕ್ಷಣಿಕ ಕಂಟೆಂಟ್‌ಗಳನ್ನು ಪ್ರಾರಂಭಿಸಲು ಕಂಪನಿ ಮುಂದಾಗಿದೆ. 2025ರ ವೇಳೆಗೆ 25 ಕೋಟಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸುವುದು ಕಂಪನಿಯ ಗುರಿ.

ಫಿಸಿಕ್ಸ್‌ವಾಲಾ 20 ಆಫ್‌ಲೈನ್ ಕೋಚಿಂಗ್ ತರಗತಿಗಳನ್ನು ತೆರೆದಿದ್ದು, 18 ನಗರಗಳಲ್ಲಿ 20ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಿದೆ. 2022-2023 ಅವಧಿಗೆ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಭಾರತೀಯ ಎಜುಟೆಕ್‌ ವ್ಯವಸ್ಥೆಯು ಕಳೆದ ಎರಡು ವರ್ಷಗಳಲ್ಲಿ ಗಣನೀಯವಾಗಿ ಬೆಳೆದಿದೆ.

ಇದನ್ನೂ ಓದಿ: Vistara Explainer: ಇಸ್ಲಾಮಿಕ್ ದೇಶಗಳ ಅಧಿಕ ಪ್ರಸಂಗ!

Exit mobile version