Site icon Vistara News

ರೈತರಿಗೆ ಬೆಂಬಲ ಬೆಲೆ ಜಾರಿ ಮಾಡದಿರಲು ಮೋದಿ ಫ್ರೆಂಡ್‌ ಅದಾನಿ ಕಾರಣ ಎಂದ ಸತ್ಯಪಾಲ್‌ ಮಲಿಕ್‌

sathyapal malik

ಗುರುಗ್ರಾಮ: ದೇಶದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ನೀಡದೆ ಇರುವ ವಿಚಾರದಲ್ಲಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದ ರೈತರನ್ನು ನೀವು ಸೋಲಿಸಲಾರಿರಿ ಮತ್ತು ಅವರು ತಮ್ಮ ಬೇಡಿಕೆ ಈಡೇರುವವವರೆಗೆ ತೀವ್ರ ಪ್ರತಿಭಟನೆಯನ್ನು ನಡೆಸಲಿದ್ದಾರೆ ಎಂದು ಘೋಷಿಸಿದ್ದಾರೆ. ಜತೆಗೆ ಈ ರೀತಿ ಎಮ್‌ಎಸ್‌ಪಿ ಜಾರಿ ಮಾಡದೆ ಇರಲು ಪ್ರಧಾನಿ ಮೋದಿ ಅವರ ಗೆಳೆಯ ಗೌತಮ್‌ ಅದಾನಿ ಕಾರಣ ಎಂದು ಆರೋಪಿಸಿದರು.

ಹರಿಯಾಣದ ಕಿಯಾ ಸಮೀಪದ ಕಿರಾ ಎಂಬ ಹಳ್ಳಿಯಲ್ಲಿ ಗೋಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʻಒಂದೊಮ್ಮೆ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸದೆ ಇದ್ದಲ್ಲಿ. ಬೆಂಬಲ ಬೆಲೆ ಖಾತ್ರಿ ನೀಡದೆ ಹೋದಲ್ಲಿ ಇನ್ನೊಂದು ಹೋರಾಟ ನಡೆಯಲಿದೆ ಮತ್ತು ಈ ಬಾರಿ ಹೋರಾಟ ಇನ್ನಷ್ಟು ತೀವ್ರವಾಗಿರಲಿದೆ. ನೀವು ರೈತರನ್ನು ಇ.ಡಿ. ಇಲ್ಲವೇ ಆದಾಯ ತೆರಿಗೆ ಅಧಿಕಾರಿಗಳನ್ನು ಕಳುಹಿಸಿ ಹೆದರಿಸಲಾರಿರಿ.. ಹಾಗಿದ್ದರೆ ರೈತರನ್ನು ಹೇಗೆ ಹೆದರಿಸುತ್ತೀರಿ?ʼ ಎಂದು ಪ್ರಶ್ನಿಸಿದರು.

ಬೆಂಬಲ ಬೆಲೆ ಜಾರಿ ಮಾಡಲಾಗುತ್ತಿಲ್ಲ ಯಾಕೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಬ್ಬ ಫ್ರೆಂಡ್‌ ಇದ್ದಾರೆ. ಅವರ ಹೆಸರು ಅದಾನಿ. ಅವರು ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಕೇವಲ ಐದು ವರ್ಷದಲ್ಲಿ ಇದನ್ನು ಸಾಧಿಸಿದ್ದಾರೆ ಎಂದರು ಸತ್ಯಪಾಲ್‌ ಮಲಿಕ್‌.

ʻʻಗುವಾಹಟಿ ಏರ್‌ಪೋರ್ಟ್‌ಗೆ ಹೋದಾಗ ನನ್ನನ್ನು ಒಬ್ಬ ಮಹಿಳೆ ಹೂಗುಚ್ಛ ಹಿಡಿದುಕೊಂಡು ಸ್ವಾಗತಿಸಿದರು. ನೀವೆಲ್ಲಿಂದ ಬಂದಿರಿ ಎಂದು ನಾನು ಕೇಳಿದೆ. ನಾವು ಅದಾನಿ ಪರವಾಗಿ ಬಂದಿದ್ದೇವೆ ಎಂದಾಕೆ ಹೇಳಿದರು. ಇದರ್ಥ ಏನು ಎಂದು ನಾನು ಕೇಳಿದೆ. ಆಗ ಆಕೆ ಈ ವಿಮಾನ ನಿಲ್ದಾಣವನ್ನು ಅದಾನಿ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು. ಅದಾನಿ ಅವರಿಗೆ ವಿಮಾನ ನಿಲ್ದಾಣಗಳನ್ನು ನೀಡಲಾಗಿದೆ. ಬಂದರುಗಳನ್ನು ನೀಡಲಾಗಿದೆ. ಎಲ್ಲಾ ಪ್ರಮುಖ ಯೋಜನೆಗಳನ್ನು ಅವರಿಗೇ ನೀಡಲಾಗುತ್ತಿದೆ. ಅಂದರೆ ದೇಶವನ್ನು ಮಾರಾಟ ಮಾಡಲು ಸಿದ್ಧತೆ ನಡೆಯುತ್ತಿದೆ. ಆದರೆ, ನಾವು ಅದು ಸಾಧ್ಯವಾಗಲು ಬಿಡುವುದಿಲ್ಲʼʼ ಎಂದು ಸತ್ಯಪಾಲ್‌ ಮಲಿಕ್‌ ಹೇಳಿದರು.

ʻʻಅದಾನಿ ಅವರು ಪಾಣಿಪತ್‌ನಲ್ಲಿ ಒಂದು ದೊಡ್ಡ ಗೋದಾಮು ಕಟ್ಟಿಸಿದ್ದಾರೆ. ಅದರಲ್ಲಿ ಕಡಿಮೆ ಬೆಲೆಗೆ ಖರೀದಿಸಿದ ಧವಸ ಧಾನ್ಯಗಳನ್ನು ಸ್ಟಾಕ್‌ ಇಟ್ಟಿದ್ದಾನೆ. ಯಾವಾಗ ಬೆಲೆ ಏರಿಕೆ ಆಗುತ್ತದೋ ಆಗ ಅವರು ಗೋಧಿಯನ್ನು ಮಾರುಕಟ್ಟೆಗೆ ಬಿಡುತ್ತಾರೆ. ಹೀಗೆ ಮೋದಿ ಅವರ ಗೆಳೆಯರು ಲಾಭ ಪಡೆಯುತ್ತಾರೆ. ರೈತರು ನೋವು ಅನುಭವಿಸುತ್ತಾರೆ.. ಇದನ್ನು ಇನ್ನು ತುಂಬ ಕಾಲ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ದೊಡ್ಡ ಹೋರಾಟವೊಂದು ನಡೆಯಲಿದೆʼʼ ಎಂದು ಸತ್ಯಪಾಲ್‌ ಮಲಿಕ್‌ ಎಚ್ಚರಿಸಿದರು.

ಸತ್ಯಪಾಲ್‌ ಮಲಿಕ್‌ ಅವರು ಕೇಂದ್ರ ಸರಕಾರದ ವಿರುದ್ಧ ಈ ರೀತಿ ಟೀಕಾಪ್ರಹಾರ ನಡೆಸುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಈ ವರ್ಷದ ಆರಂಭದಲ್ಲಿ ಜನವರಿ ರಂದು ಅವರು ಹರಿಯಾಣದ ದಾದ್ರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಪ್ರಧಾನಿ ಮೋದಿ ಅವರು ತುಂಬ ಅಹಂಕಾರಿ ಎಂದಿದ್ದರು. ರೈತರ ಬಗ್ಗೆ ಮಾತನಾಡಲು ಹೋದಾಗ ಅಹಂಕಾರ ಪ್ರದರ್ಶಿಸಿದರು ಎಂದರು.

Exit mobile version