Site icon Vistara News

Muhurat Trading: ದೀಪಾವಳಿ ಹಿನ್ನೆಲೆ ಇಂದು ಸಂಜೆ ‘ಮುಹೂರ್ತ ಟ್ರೇಡಿಂಗ್’;‌ ಏನಿದರ ವೈಶಿಷ್ಟ್ಯ?

Muhurat Trading

Muhurat Trading 2023: Everything You Should Know About This Deepavali Trading

ನವದೆಹಲಿ: ದೇಶಾದ್ಯಂತ ದೀಪಾವಳಿ (Deepavali 2023) ಹಬ್ಬದ ಸಂಭ್ರಮ ಮನೆ ಮಾಡಿದೆ. ಪಟಾಕಿ ಸಿಡಿಸುವುದು, ಸಿಹಿ ಹಂಚುವುದು, ಹೊಸ ಬಟ್ಟೆ ಧರಿಸಿ ಕುಟುಂಬಸ್ಥರೊಂದಿಗೆ ಸಿಹಿ ಊಟ ಮಾಡುವುದು ಸೇರಿ ಹಲವು ರೀತಿಯಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನು ದೀಪಾವಳಿ ಹಿನ್ನೆಲೆಯಲ್ಲಿ ಭಾನುವಾರ (ನವೆಂಬರ್‌ 12) ಸಂಜೆ ಷೇರು ಮಾರುಕಟ್ಟೆಯಲ್ಲಿ ‘ಮುಹೂರ್ತ ಟ್ರೇಡಿಂಗ್’‌ (Muhurat Trading) ನಡೆಯಲಿದೆ. ಹಾಗಾದರೆ, ಏನಿದು ಮುಹೂರ್ತ ಟ್ರೇಡಿಂಗ್? ಹಬ್ಬದ ದಿನವೇ ಏಕೆ ನಡೆಯುತ್ತದೆ? ಇದರ ಕುರಿತು ಇರುವ ನಂಬಿಕೆ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಏನಿದು ಮುಹೂರ್ತ ಟ್ರೇಡಿಂಗ್‌?

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಹಬ್ಬದ ದಿನ ಷೇರು ಮಾರುಕಟ್ಟೆಯಲ್ಲಿ ಸುಮಾರು ಒಂದು ಗಂಟೆ ನಡೆಯುವ ಷೇರು ಮಾರುಕಟ್ಟೆಯ ವ್ಯಾಪಾರವೇ ಮುಹೂರ್ತ ಟ್ರೇಡಿಂಗ್‌ ಆಗಿದೆ. ಹಬ್ಬದ ದಿನ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಖರೀದಿಸಿದರೆ ವರ್ಷ ಪೂರ್ತಿ ಲಾಭ ಬರುತ್ತದೆ, ದುಡಿಮೆ, ಸಮೃದ್ಧಿ ಹೆಚ್ಚಾಗುತ್ತದೆ ಎಂಬುದು ನಂಬಿಕೆಯಾಗಿದೆ. ಹಾಗಾಗಿ, ಭಾನುವಾರ ಹಬ್ಬ , ರಜೆ ಇದ್ದರೂ ಷೇರು ಮಾರುಕಟ್ಟೆಯು ಜನರಿಗೆ ಒಂದು ಗಂಟೆ ಮುಕ್ತವಾಗಿರುತ್ತದೆ.

ಹಬ್ಬದ ರಜೆಯ ದಿನವೂ ಷೇರು ಮಾರುಕಟ್ಟೆ ಒಂದು ಗಂಟೆ ಮುಕ್ತವಾಗಿರಲಿದ್ದು, ಎನ್‌ಎಸ್‌ಇ ಹಾಗೂ ಬಿಎಸ್‌ಇನಲ್ಲಿ ಷೇರುಗಳ ಖರೀದಿಯು ಜೋರಾಗಿರುತ್ತದೆ. ಈ ಸಂಪ್ರದಾಯವು ತುಂಬ ವರ್ಷಗಳಿಂದ ನಡೆದುಕೊಂಡಿದೆ. ದೀಪಾವಳಿ ಹಬ್ಬದ ದಿನ ಹೆಚ್ಚಿನ ಜನ ಸೀಮಿತ ಅವಧಿಯಲ್ಲಿಯೇ ಷೇರುಗಳನ್ನು ಖರೀದಿಸುತ್ತಾರೆ. ಹಾಗಾಗಿ, ಮುಹೂರ್ತ ಟ್ರೇಡಿಂಗ್‌ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ಇಂದು ಸಂಜೆ ಎಷ್ಟು ಗಂಟೆಗೆ ಮುಹೂರ್ತ ಟ್ರೇಡಿಂಗ್?‌

ಭಾನುವಾರ ಸಂಜೆ 6 ಗಂಟೆಯಿಂದ 7.15ರವರೆಗೆ ಜನರಿಗೆ ಮುಹೂರ್ತ ಟ್ರೇಡಿಂಗ್‌ ಮಾರುಕಟ್ಟೆಯು ಮುಕ್ತವಾಗಿರುತ್ತದೆ. ಮೊದಲಿಗೆ 6 ಗಂಟೆಯಿಂದ 8 ನಿಮಿಷಗಳವರೆಗೆ ಪ್ರಿ ಮಾರ್ಕೆಟ್‌ ವಿಂಡೋ ತೆರೆದಿರುತ್ತದೆ. ಇದಾದ ಬಳಿಕ 6.15ರಿಂದ 7.15ರವರೆಗೆ ಷೇರು ಮಾರುಕಟ್ಟೆ ವಹಿವಾಟು ನಡೆಯುತ್ತದೆ. ವ್ಯಾಪಾರದಲ್ಲಾಗುವ ಮಾರ್ಪಾಡುಗಳನ್ನು ಮಾಡಲು ಸಂಜೆ 7.25ರವರೆಗೆ ಅವಕಾಶ ಇರುತ್ತದೆ. ಸಂಜೆ 7.25ರಿಂದ 7.35ರವರೆಗೆ ಸಮಾರೋಪ ನಡೆಯಲಿದೆ. ಅಲ್ಲದೆ, ಕರೆ ಹರಾಜು ಲಿಕ್ವಿಡ್‌ ಸೆಷನ್‌ 6.20ರಿಂದ 7.05ರವರೆಗೆ ನಡೆಯಲಿದೆ. ಈ ವೇಳೆ ಈಕ್ವಿಟಿ, ಕಮೊಡಿಟಿ ಡೆರಿವೇಟಿವ್ಸ್‌, ಕರೆನ್ಸಿ ಡೆರಿವೇಟಿವ್ಸ್‌, ಸೆಕ್ಯುರಿಟೀಸ್‌ ಲೆಂಡಿಂಗ್‌ ಹಾಗೂ ಬಾರೋವಿಂಗ್‌ ಸೇರಿ ಹಲವು ವಹಿವಾಟುಗಳಲ್ಲಿ ತೊಡಗಬಹುದಾಗಿದೆ.

ಇದನ್ನೂ ಓದಿ: Vocal For Local: ಮೋದಿ ‘ವೋಕಲ್‌ ಫಾರ್‌ ಲೋಕಲ್’‌ ಕರೆಗೆ ಗಣ್ಯರ ಬಲ; ಅಕ್ಷಯ್‌, ಪೆಡ್ನೇಕರ್‌ ಸಾಥ್

ಯಾವಾಗಿನಿಂದ ಆರಂಭ?

ಮುಹೂರ್ತ ಟ್ರೇಡಿಂಗ್‌ಗೆ ಹಲವು ದಶಕಗಳ ಇತಿಹಾಸವಿದೆ. ಬಿಎಸ್‌ಇ ಮುಹೂರ್ತ ಟ್ರೇಡಿಂಗ್‌ 1957ರಲ್ಲಿ ಆರಂಭವಾಯಿತು. ಎನ್‌ಎಸ್‌ಇ ಟ್ರೇಡಿಂಗ್‌ 1992ರಿಂದ ಶುರುವಾಯಿತು. ಸಾಮಾನ್ಯವಾಗಿ ಮುಹೂರ್ತ ಟ್ರೇಡಿಂಗ್‌ ವೇಳೆ ಸೆನ್ಸೆಕ್ಸ್‌ ಏರಿಕೆ ಕಾಣುತ್ತದೆ. ಕಳೆದು ಐದು ವರ್ಷಗಳಿಂದಲೂ ಏರಿಕೆಯನ್ನೇ ಕಾಣಲಾಗಿದೆ. ಗುಜರಾತಿಗಳು ಮುಹೂರ್ತ ಟ್ರೇಡಿಂಗ್‌ನಲ್ಲಿ ಹೆಚ್ಚು ಪಾಲ್ಗೊಳ್ಳುತ್ತಾರೆ ಎಂಬ ಮಾತಿದೆ. ಇನ್ನು ಮುಹೂರ್ತ ಟ್ರೇಡಿಂಗ್‌ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಷೇರು ಖರೀದಿಸಿದರೆ ಉತ್ತಮ ಎಂಬುದು ಸೇರಿ ಹಲವು ಚರ್ಚೆ ನಡೆಯುತ್ತಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version