Site icon Vistara News

ಆನ್‌ಲೈನ್ ಷೇರ್ ಟ್ರೇಡಿಂಗ್ ವಂಚನೆ: 1.92 ಕೋಟಿ ರೂ. ಮೋಸ ಹೋದ ಮಹಿಳೆ! ಸುರಕ್ಷಿತ ಹೂಡಿಕೆ ಹೇಗೆ?

Mumbai woman loses RS 2 crore in online share trade fraud

ಮುಂಬೈ: ಆನ್‌ಲೈನ್ ಷೇರ್ ಟ್ರೇಡಿಂಗ್‌ ವಂಚನೆಯಲ್ಲಿ (Online Share Trading Fraud) ಮುಂಬೈನ 40 ವರ್ಷದ ಮಹಿಳೆಯೊಬ್ಬರು (Mumbai Woman) 1.92 ಕೋಟಿ ರೂಪಾಯಿ ಕಳೆದುಕೊಂಡಿರುವ ಪ್ರಕರಣ ನಡೆದಿದೆ. ನವಿ ಮುಂಬೈ ಪೊಲೀಸರು 9 ಜನರ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಿದ್ದು(Mumbai Police), ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ(Cyber Fraud).

ಮಹಿಳೆಗೆ, ಆನ್‌ಲೈನ್ ಷೇರ್ ಟ್ರೇಡಿಂಗ್‌ನಲ್ಲಿ ಕಡಿಮೆ ಹೂಡಿಕೆಯ ಮೇಲೆ ದುಪ್ಪಟ್ಟ ರಿಟರ್ನ್ ಆಸೆ ತೋರಿಸಿದ ಆರೋಪಿಗಳು ಮೋಸ ಮಾಡಿದ್ದಾರೆ. ಹಣ ಕಳೆದುಕೊಂಡಿರುವ ಮಹಿಳೆಯು ನವಿ ಮುಂಬೈನ ನ್ಯೂ ಪನ್ವೇಲ್‌ ಪ್ರದೇಶ ರಹವಾಸಿಯಾಗಿದ್ದಾರೆ.

ಆರೋಪಿಗಳ ಸೂಚನೆಯಂತೆ 2023ರ ಡಿಸೆಂಬರ್‌ನಿಂದ ಮಹಿಳೆಯು 1,92,82,837 ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾಳೆ. ಆದರೆ ನಂತರ ಯಾವುದೇ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ ಎಂದು ಸೈಬರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಗಜಾನನ್ ಕದಮ್ ತಿಳಿಸಿದ್ದಾರೆ. ಅಂತಿಮವಾಗಿ ಹಣ ಪಡೆದುಕೊಂಡವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ತಾನು ಮೋಸ ಹೋಗಿರುವುದು ತಿಳಿದು, ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸರು ಮಂಗಳವಾರ ಒಂಬತ್ತು ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆನ್‌ಲೈನ್ ಷೇರ್ ಟ್ರೇಡಿಂಗ್‌ನಿಂದ ಮೋಸ ಹೋಗದಂತೆ ತಡೆಯುವುದು ಹೇಗೆ?

ಹೂಡಿಕೆ ಮಾಡುವ ಮುನ್ನ ಸಂಶೋಧನೆ ಮಾಡುವುದು ಉತ್ತಮ. ಇದಕ್ಕಾಗಿ ಪ್ರತಿಷ್ಠಿತ ಮತ್ತು ನಿಯಂತ್ರಿತ ಆನ್‌ಲೈನ್ ವ್ಯಾಪಾರ ವೇದಿಕೆಗಳನ್ನು ಆಯ್ಕೆಮಾಡಿ. ಸೆಬಿ ಅಥವಾ ಆರ್‌ಬಿಐನಂಥ ನಂತಹ ಸಂಬಂಧಿತ ಹಣಕಾಸು ಸಂಸ್ಥೆಗಳಲ್ಲಿ ಅವುಗಳ ನೋಂದಣಿಯನ್ನು ಪರಿಶೀಲಿಸಿ.

ನಿಮ್ಮನ್ನು ಆಕರ್ಷಿತ ಮಾಡಲು ವಂಚನೆಗಾರರು ಯಾವಾಗಲೂ ಅತಿ ಹೆಚ್ಚಿನ ರಿಟರ್ನ್‌ ನೀಡುವ ಆಸೆಯನ್ನು ತೋರಿಸುತ್ತಾರೆ. ಅಲ್ಲದೇ, ಗ್ಯಾರಂಟಿಯ ರಿಟರ್ನ್‌ ಒತ್ತಡ ಕೂಡ ಹಾಕುತ್ತಾರೆ. ಈ ರೀತಿಯ ಆಸೆ ತೋರಿಸುವ ಯಾವುದೇ ದೂರವಾಣಿ ಕರೆ, ಇಮೇಲ್ ಅಥವಾ ಸೋಷಿಯಲ್ ಮೀಡಿಯಾ‌ ಮೂಲಕ ಬರುವ ಆಫರ್‌ಗಳಿಗೆ ಮೋಸ ಹೋಗಬೇಡಿ. ಷೇರು ಮಾರುಕಟ್ಟೆಯು ಮೂಲಭೂತವಾಗಿ ಅಪಯಕಾರಿಯಾಗಿರುವ ವೇದಿಕೆಯಾಗಿದೆ. ಯಾವುದೇ ಹೂಡಿಕೆಗೂ ಲಾಭದ ರಿಟರ್ನ್ ಗ್ಯಾರಂಟಿ ಇರುವುದಿಲ್ಲ. ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬಹುದು ಎಂಬ ಆಕರ್ಷಕಣೆಗಳಿಗೆ ಒಳಗಾಗಬೇಡಿ.

ನಿಮ್ಮ ಹಣವನ್ನು ಅಪಾಯಕ್ಕೆ ಸಿಲುಕಿಸುವ ಮೊದಲು ವಿವಿಧ ಹೂಡಿಕೆ ಆಯ್ಕೆಗಳು, ವ್ಯಾಪಾರ ತಂತ್ರಗಳು ಮತ್ತು ಹಣಕಾಸಿನ ಸಾಕ್ಷರತೆಯ ಬಗ್ಗೆ ತಿಳಿಯಿರಿ. ಸರ್ಕಾರಿ ವೆಬ್‌ಸೈಟ್‌ಗಳು ಅಥವಾ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳಂತಹ ವಿಶ್ವಾಸಾರ್ಹ ಮೂಲಗಳನ್ನು ಬಳಸಿ. ಎಂದಿಗೂ ನಿಮ್ಮ ಲಾಗಿನ್ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಕು. ಅಂದರೆ, ಯೂಸರ್ ನೇಮ್, ಪಾಸ್ವರ್ಡ್ಸ್, ಟು ಫ್ಯಾಕ್ಟರ್ ಅಂಥೇಟಿಕೇಷನ್ ಕೋಡ್ಸ್ ಅನ್ನು ಹಂಚಿಕೊಳ್ಳಬೇಡಿ. ಕೆಲವೊಮ್ಮೆ ಉಚಿತ ಸಲಹೆ ನೀಡುವ ಮೂಲಕ ವಂಚನೆಗಾರರು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಹುಷಾರಿಗಿರಿ.

ಈ ಸುದ್ದಿಯನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಕೊಲೆ, ಅಪಹರಣವನ್ನೂ ಮೀರಿಸಿದ ಸೈಬರ್ ವಂಚನೆಗಳು

Exit mobile version