Site icon Vistara News

Yasin Malik Wife: ತಿಹಾರ್ ಜೈಲಲ್ಲಿರುವ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಹೆಂಡತಿ ಪಾಕ್ ಸಚಿವೆ?

Yasin Malik and his wife Mushaal Hussain Malik

ನವದೆಹಲಿ: ತಿಹಾರ್ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್(JKLF Leader) ಮುಖ್ಯಸ್ಥ ಹಾಗೂ ಪ್ರತ್ಯೇತಕತಾವಾದಿ ನಾಯಕ (separatist leader) ಯಾಸಿನ್ ಮಲಿಕ್ (Yasin Malik) ಅವರ ಪತ್ನಿ ಮುಶಾಲ್ ಹುಸೇನ್ ಮಲಿಕ್ (Mushaal Hussain Malik) ಅವರು ಪಾಕಿಸ್ತಾನ ಮಧ್ಯಂತರ ಸರ್ಕಾರದಲ್ಲಿ (Pakistan interim Government) ಸಚಿವೆಯಾಗಿದ್ದಾರೆ (ಪೂರ್ಣ ಪ್ರಮಾಣವಲ್ಲ) ಎಂದು ವರದಿಯಾಗಿದೆ. ಪಾಕಿಸ್ತಾನದ ಮಧ್ಯಂತರ ಸರ್ಕಾರದಲ್ಲಿ ಒಟ್ಟು 18 ಸದಸ್ಯರು ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯವು ಯಾಸಿನ್ ಮಲಿಕ್‌ ಅವರಿಗೆ ಕಳೆದ ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಧ್ಯಂತರ ಸರ್ಕಾರದ ಪ್ರಧಾನಿ ಅನ್ವರ್-ಉಲ್-ಹಕ್ ಕಕರ್ ಅವರಿಗೆ ವಿಶೇಷ ಸಹಾಯಕಿಯಾಗಿ ಮುಶಾಲ್ ಅವರು ಕಾರ್ಯನಿರ್ವಹಿಸಲಿದ್ದಾರೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಅವರು ಮೇಲ್ವಿಚಾರಣೆ ನಡೆಸಲಿದ್ದಾರೆ. ಮುಶಾಲ್ ಅವರು ಪಾಕಿಸ್ತಾನದ ಪ್ರಜೆಯಲ್ಲ. ಹಾಗಾಗಿ, ಅವರು ಪೂರ್ಣ ಪ್ರಮಾಣದಲ್ಲಿ ಸಚಿವೆಯಾಗಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಜಾಲತಾಣ ಆಜ್ ವರದಿ ಮಾಡಿದೆ.

ಕಾಶ್ಮೀರ ಪ್ರತ್ಯೇಕತಾವಾದಿಯಾಗಿರುವ ಮುಶಾಲ್ ಅವರು 2009ರಲ್ಲಿ ಯಾಸಿನ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಮಲಿಕ್ ಅವರು 2005ರಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದರು. ಈ ವೇಳೆ, ಮುಶಾಲ್ ಮತ್ತು ಯಾಸಿನ್ ಮಲಿಕ್ ಅವರು ಪರಸ್ಪರ ಭೇಟಿಯಾಗಿದ್ದರು. ಈ ಭೇಟಿಯೇ ಮುಂದೆ ಸ್ನೇಹಕ್ಕೆ ಕಾರಣವಾಗಿತ್ತು. ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸಬೇಕೆಂದು ಈ ವರ್ಷದ ಮೇ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪಾಕ್ ಮಧ್ಯಂತರ ಸರ್ಕಾರದಲ್ಲಿ ಮತ್ತೆ ಯಾರು ಸಚಿವರು?

ಪಾಕಿಸ್ತಾನದ ಮಧ್ಯಂತರ ಸರ್ಕಾರದ ಪ್ರಧಾನಿ ಅನ್ವರ್ ಉಲ್ ಹಕ್ ಕಕರ್ ಅವರು 18 ಸದಸ್ಯರ ಕ್ಯಾಬಿನೆಟ್ ನೇಮಕ ಮಾಡಿದ್ದಾರೆ. ಪಾಕಿಸ್ತಾನದ ಮಧ್ಯಂತರ ಸರ್ಕಾರದ ಸಚಿವ ಸಂಪುಟದ ಸದಸ್ಯರಿಗೆ ಅಧ್ಯಕ್ಷ ಆರೀಫ್ ಅಳ್ವಿ ಅವರು ಅವರು ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.

ಮಾಜಿ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿ ಒಳಾಡಳಿತ ಸಚಿವರಾಗಿ ಸರ್ಫರಾಜ್ ಬುಗ್ಟಿ, ವಿತ್ತ ಸಚಿವರಾಗಿ ಶಮ್ಷದ್ ಅಖ್ತರ್, ರಕ್ಷಣಾ ಸಚಿವರಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನ್ವರ್ ಅಲಿ ಹೈದರ್ ಹಾಗೂ ಹಿರಿಯ ಪತ್ರಕರ್ತ ಮುರ್ತಾಜ್ ಸೋಲಂಗಿ ಅವರನ್ನು ಮಾಹಿತಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಅಲ್ಪಸಂಖ್ಯಾತರ ಸಚಿವರಾಗಿ ಖಲೀಲ್ ಜಾರ್ಜ್, ಕೈಗಾರಿಕೆ ಸಚಿವರಾಗಿ ಕೈಗಾರಿಕೋದ್ಯಮಿ ಗೋಹರ್ ಇಜಾಜ್, ಮಾಹಿತಿ ತಂತ್ರಜ್ಞಾನ ಸಚಿವರಾಗಿ ಶಿಕ್ಷಣ ತಜ್ಞ ಡಾ. ಉಮರ್ ಸೈಫ್, ಕಾನೂನು ಸಚಿವರಾಗಿ ಅಹ್ಮದ್ ಇರ್ಫಾನ್ ಅಸ್ಲಂ, ಖ್ಯಾತ ನಟ ಜಮಾಲ್ ಶಾ ಅವರು ಸಂಸ್ಕೃತಿ ಸಚಿವರಾಗಿ ಅನಿಕ್ ಅಹ್ಮದ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪಾಕಿಸ್ತಾನದಲ್ಲಿ ಚುನಾವಣೆ ಯಾವಾಗ?

ಆಗಸ್ಟ್ 9ರಂದು ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯನ್ನು ವಿಸರ್ಜನೆ ಮಾಡಲಾಗಿದೆ. ತನ್ಮೂಲಕ, ಪ್ರಧಾನಿಯಾಗಿದ್ದ ಶಹಬಾಜ್ ಷರೀಫ್ ಅವರ ಅಧಿಕಾರವಧಿ ಕೂಡ ಪೂರ್ಣಗೊಂಡಿದೆ. ನ್ಯಾಷನಲ್ ಅಸೆಂಬ್ಲಿ ವಿಸರ್ಜನೆಯಾದ ಮುಂದಿನ 90 ದಿನಗಳಲ್ಲಿ ಅಂದರೆ ಮೂರು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಗೆದ್ದ ಪಕ್ಷವು ಆಡಳಿತಕ್ಕೆ ಏರಲಿದೆ. ಅಲ್ಲಿಯವರೆಗೂ ಅನ್ವರ್ ಉಲ್ ಹಕ್ ಕಕರ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿ ಇರಲಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version